ಫಾರ್ವಸಿಸ್ಟ್​ಗಳ ಕೊಡುಗೆ ಅಮೋಘ

ವಿಜಯಪುರ: ನಾನೊಬ್ಬ ಫಾರ್ವಸಿಸ್ಟ್ ಎಂದು ಹೇಳಿಕೊಳ್ಳಲು ಹೆಮ್ಮೆಯಾಗುತ್ತದೆ. ನಾನು ಫಾರ್ವಸಿಸ್ಟ್ ಆಗಿದ್ದರಿಂದ ನನಗಿಂದು ಸಚಿವ ಸ್ಥಾನ ದೊರೆತಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಶಿವಾನಂದ ಪಾಟೀಲ ಹೇಳಿದರು.

ನಗರದ ಲಿಂಗಾಯತ ಸಾಂಸ್ಕೃತಿಕ ಸಮುದಾಯ ಭವನದಲ್ಲಿ ಶನಿವಾರ ವಿಶ್ವ ಫಾರ್ವಸಿಸ್ಟ್ ದಿನಾಚರಣೆ ಹಾಗೂ ವೈಜ್ಞಾನಿಕ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

ನಾನು ಸಹ ಫಾರ್ವಸಿಸ್ಟ್ ಕೋರ್ಸ್ ಮುಗಿಸಿ ಅಂಗಡಿ ಇಟ್ಟು ವ್ಯಾಪಾರ ಆರಂಭಿಸಿದ್ದೆ. ಆದರೆ, ಆಕಸ್ಮಿಕವಾಗಿ ರಾಜಕೀಯ ಪ್ರವೇಶಿಸಿದೆ. ಇಂದು ಸಚಿವನಾಗಿದ್ದೇನೆ. ನಾನು ಬೇರೆ ಇಲಾಖೆ ಸಚಿವನಾಗಲು ಬಯಸಿದ್ದೆ. ಆದರೆ, ಫಾರ್ವಸಿಸ್ಟ್ ಆಗಿದ್ದರಿಂದ ಆರೋಗ್ಯ ಇಲಾಖೆ ನನಗೆ ಒಲಿದು ಬಂದಿದೆ. ಹಿಂದೆ ವೈದ್ಯಕೀಯ ಕಲಿತವರಿಗೆ ಮಾತ್ರ ಆರೋಗ್ಯ ಸಚಿವ ಸ್ಥಾನ ನೀಡಲಾಗುತ್ತಿತ್ತು. ಸ್ವಾಸ್ಥ್ಯ ಸಮಾಜ ನಿರ್ಮಾಣ ವೈದ್ಯ ಹಾಗೂ ಫಾರ್ವಸಿಸ್ಟ್​ರ ಉದ್ದೇಶವಾಗಿದ್ದರಿಂದ ಇಂದು ಆ ಭಾಗ್ಯ ನನಗೆ ಒಲಿದು ಬಂದಿದೆ ಎಂದರು.

ಸರ್ಕಾರಿ ವೃತ್ತಿಗೆ ವೈದ್ಯರು ಬರಲು ಮೀನಮೇಷ ಎಣಿಸುತ್ತಿರುವುದರಿಂದ ಫಾರ್ವಸಿಸ್ಟ್​ಗಳ ನೇಮಕಾತಿಯಲ್ಲಿ ಹಿನ್ನಡೆ ಉಂಟಾಗುತ್ತಿದೆ. ಆದಷ್ಟು ಬೇಗ ಫಾರ್ವಸಿಸ್ಟ್ ಗಳ ಸಭೆ ನಡೆಸಿ ಅವರ ಸಮಸ್ಯೆಗಳನ್ನು ಅರಿತು ಅವುಗಳನ್ನು ಸರ್ಕಾರದ ಮಟ್ಟದಲ್ಲಿ ಇತ್ಯರ್ಥ ಪಡಿಸಲು ಪ್ರಯತ್ನಿಸುವುದಾಗಿ ಸಚಿವ ಪಾಟೀಲ ಭರವಸೆ ನೀಡಿದರು.

ತೋಟಗಾರಿಕೆ ಸಚಿವ ಎಂ.ಸಿ. ಮನಗೂಳಿ ಮಾತನಾಡಿ, ಆರೋಗ್ಯ ಸಚಿವ ಶಿವಾನಂದ ಪಾಟೀಲರು ತಮ್ಮ ಸಮಸ್ಯೆಗಳನ್ನು ಅರಿತಿದ್ದಾರೆ. ನಾನು ಸಹ ಕ್ಯಾಬಿನೆಟ್ ಸಚಿವನಾಗಿದ್ದು, ಶಿವಾನಂದ ಪಾಟೀಲರೊಂದಿಗೆ ತಮ್ಮ ಸಮಸ್ಯೆಗಳಿಗೆ ಸ್ಪಂದಿಸುವೆ ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ಅರುಣ ಶಹಾಪುರ ಮಾತನಾಡಿ, ಸರ್ಕಾರ ಶಿಕ್ಷಣ ಇಲಾಖೆಗೆ ಕೊಟ್ಟಷ್ಟೆ ಮಹತ್ವವನ್ನು ಆರೋಗ್ಯ ಇಲಾಖೆಗೂ ಕೊಡಬೇಕು. ತಮ್ಮೆಲ್ಲ ಸಮಸ್ಯೆಗಳ ಬಗ್ಗೆ ನಾನು ಸದನದಲ್ಲಿ ಬೆಳಕು ಚೆಲ್ಲುವೆ ಎಂದು ಹೇಳಿದರು.

ಸರ್ಕಾರಿ ಫಾರ್ವಸಿಸ್ಟ್ ಸಂಘದ ರಾಜ್ಯಾಧ್ಯಕ್ಷ ಬಿ.ಎಸ್. ದೇಸಾಯಿ ಪ್ರಾಸ್ತಾವಿಕ ಮಾತನಾಡಿ, ಸರ್ಕಾರಿ ಫಾರ್ವಸಿಸ್ಟ್

ಗಳ ಸಮಸ್ಯೆಗಳನ್ನು ತಿಳಿಸಿ ತಮ್ಮ ಬೇಡಿಕೆಗಳು ಈಡೇರದಿದ್ದಲ್ಲಿ ರಾಜ್ಯಮಟ್ಟದಲ್ಲಿ ಮೌನ ಹೋರಾಟ ಸಂಘಟಿಸುವುದಾಗಿ ಹೇಳಿದರು. ಜಿಲ್ಲಾಧ್ಯಕ್ಷ ಎಸ್.

ಜಿ. ಸಂಗಾಪುರ ಅಧ್ಯಕ್ಷತೆ ವಹಿಸಿದ್ದರು.

ಬೆಂಗಳೂರಿನ ಸರ್ಕಾರಿ ಫಾರ್ಮಸಿ ಕಾಲೇಜು ಪ್ರಾಧ್ಯಾಪಕ ಡಾ. ಎಸ್.ರಾಮಚಂದ್ರ ಶೆಟ್ಟಿ ‘ಸಾರ್ವಜನಿಕ ಆರೋಗ್ಯ ವ್ಯವಸ್ಥೆಯಲ್ಲಿ ಫಾರ್ವಸಿಸ್ಟ್​ಗಳ ಪಾತ್ರ’ ವಿಷಯದ ಕುರಿತು ಉಪನ್ಯಾಸ ನೀಡಿದರು. ಆರೋಗ್ಯ ಇಲಾಖೆ ಹಿರಿಯ ನಿವೃತ್ತ ಅಧಿಕಾರಿ ಡಾ.ಗುಂಡಪ್ಪ, ನಿವೃತ್ತ ಫಾರ್ವಸಿಸ್ಟ್ ಚಂದ್ರಶೇಖರ ಲೆಂಡಿ, ವಿಶ್ರಾಂತ ಫಾರ್ವಸಿಸ್ಟ್​ಗಳಾದ ಬಿ.ಎಸ್. ಚಿನಿವಾಲರ, ಎಸ್. ಎಸ್. ವಾಳಿ, ಎಸ್.ಟಿ. ಮಠ, ಎನ್.ಎ. ಅತ್ತಾರ ಅವರನ್ನು ಸನ್ಮಾನಿಸಲಾಯಿತು. ಸಂಘಟನೆ ರಾಜ್ಯ ಉಪಾಧ್ಯಕ್ಷ ಚಂದ್ರಶೇಖರ ಲೆಂಡಿ, ಪ್ರಧಾನ ಕಾರ್ಯದರ್ಶಿ ಶಂಕರ ಮಳ್ಳಿ, ಜಿಲ್ಲಾ ಘಟಕದ ಅಧ್ಯಕ್ಷ ಎಫ್.ಜಿ. ಸಂಗಾಪುರ ಇತರರಿದ್ದರು.