ರೈತರಿಗೆ ವೈಜ್ಞಾನಿಕ ಮಾಹಿತಿ ನೀಡಿ

ವಿಜಯಪುರ: ರೈತರಿಗೆ ಹವಾಮಾನ ಶಾಸ್ತ್ರದ ಮಾಹಿತಿಯ ಉಪಯೋಗವಾಗಲು ಕೃಷಿ ಮತ್ತು ಕೃಷಿ ಪೂರಕ ಚಟುವಟಿಕೆಗಳ ವಿಜ್ಞಾನಿಗಳು ಹಮಾವಾನ ಶಾಸ್ತ್ರದ ವಿಜ್ಞಾನಿಗಳಿಗೆ ‘ಸಾಥ್’ ನೀಡಬೇಕೆಂದು ಹವಾಮಾನ ಶಾಸ್ತ್ರದ ನಿವೃತ್ತ ಸಂಯೋಜಕ ಡಾ.ವಿ.ಯು.ಎಂ. ರಾವ್ ಹೇಳಿದರು.

ನಗರ ಹೊರವಲಯದ ಪ್ರಾದೇಶಿಕ ಕೃಷಿ ಸಂಶೋಧನಾ ಕೇಂದ್ರ (ಹಿಟ್ನಳ್ಳಿ ಫಾಮ್ರ್)ದಲ್ಲಿ ಹಮ್ಮಿಕೊಂಡಿದ್ದ ಅಖಿಲ ಭಾರತ ಸಮನ್ವಿತ ಕೃಷಿ-ಹವಾಮಾನಶಾಸ್ತ್ರ ಸಂಶೋಧನಾ ಯೋಜನೆಯ ರಾಷ್ಟ್ರಮಟ್ಟದ 15ನೇ ದ್ವಿವಾರ್ಷಿಕ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಪಶು ಸಂಗೋಪನೆ, ರೋಗ ಹಾಗೂ ಕೀಟಶಾಸ್ತ್ರಗಳ ವಿಜ್ಞಾನಿಗಳ ಸಹಯೋಗದಲ್ಲಿ ಹವಾಮಾನದಿಂದ ಆಗುವ ಸಮಸ್ಯೆಗಳಿಗೆ ವೈಜ್ಞಾನಿಕ ಪರಿಹಾರ ಕಂಡುಕೊಂಡು ರೈತರಿಗೆ ತಲುಪಿಸುವ ಕಾರ್ಯವಾಗಬೇಕು. ಇದರಿಂದ ಬೆಳೆ ಹಾನಿ ಹಾಗೂ ಆರ್ಥಿಕ ನಷ್ಟ ಕಡಿಮೆ ಮಾಡಲು ಸಾಧ್ಯವಾಗುತ್ತದೆ ಎಂದರು.

ಹೈದರಾಬಾದ್ ಅಖಿಲ ಭಾರತ ಸಮನ್ವಿತ ಒಣ ಬೇಸಾಯ ಸಂಶೋಧನಾ ಯೋಜನೆ ಕಾರ್ಯಕ್ರಮ ಸಂಯೋಜಕ ಡಾ.ಜಿ. ರವೀಂದ್ರ ಚಾರಿ ಮಾತನಾಡಿ, ರೈತರ ಸಮಸ್ಯೆಗಳಿಗೆ ಅನುಗುಣವಾಗಿ ಸಂಶೋಧನೆಗಳನ್ನು ಕೈಗೊಳ್ಳಬೇಕು ಎಂದರು.

ಡಾ. ಪಿ. ವಿಜಯಕುಮಾರ ಮತ್ತು ಡಾ.ವಿ. ಎಸ್. ಕುಲಕರ್ಣಿ ಮಾತನಾಡಿದರು. ಧಾರವಾಡ ಕೃಷಿ ವಿವಿ ಸಂಶೋಧನಾ ನಿರ್ದೇಶಕ ಡಾ.ಎಸ್. ಎಸ್. ಪಾಟೀಲ ಅಧ್ಯಕ್ಷತೆ ವಹಿಸಿದ್ದರು.

ಪ್ರಾದೇಶಿಕ ಕೃಷಿ ಸಂಶೋಧನಾ ಕೇಂದ್ರದ ಸಹ ಸಂಶೋಧನಾ ನಿರ್ದೇಶಕ ಡಾ.ಐ.ಎಸ್. ಕಟಗೇರಿ ಸ್ವಾಗತಿಸಿದರು. ಕೃಷಿ ಹವಾಮಾನ ಶಾಸ್ತ್ರಜ್ಞ ಡಾ.ಎಚ್. ವೆಂಕಟೇಶ ವಂದಿಸಿದರು. ಕೃಷಿ ಮಹಾವಿದ್ಯಾಲಯ ಹಾಗೂ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.