ದೈಹಿಕ, ಮಾನಸಿಕ ಸದೃಢತೆಗೆ ಕ್ರೀಡೆ ಅವಶ್ಯ

ವಿಜಯಪುರ: ನೌಕರರು ತಮ್ಮ ಕರ್ತವ್ಯದ ಜತೆಗೆ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬೇಕು. ಆಗ ಮಾತ್ರ ದೈಹಿಕ, ಮಾನಸಿಕ ಸದೃಢತೆ ಸಾಧಿಸಬಹುದು ಎಂದು ಜಿಪಂ ಸಿಇಒ ವಿಕಾಸ ಸುರಳಕರ ಹೇಳಿದರು.

ನಗರದ ಡಾ.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಸರ್ಕಾರಿ ನೌಕರರ ಸಂಘದ ಸಂಯುಕ್ತಾಶ್ರಯದಲ್ಲಿ ಸೋಮವಾರ ನಡೆದ ಸರ್ಕಾರಿ ನೌಕರರ ಜಿಲ್ಲಾಮಟ್ಟದ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ನೌಕರರ ವರ್ಗದವರಿಗೆ ಹಲವಾರು ಕೆಲಸಗಳ ಒತ್ತಡಗಳಿರುತ್ತವೆ. ಒತ್ತಡಗಳ ಮಧ್ಯೆಯೂ ವಿವಿಧ ಇಲಾಖೆಯ ನೌಕರ ಬಾಂಧವರು ಒಂದೆಡೆ ಸೇರಿ ಸಮನ್ವಯತೆ ಸಾಧಿಸಲು ಇಂದು ಒಂದು ಸದಾವಕಾಶ. ವೃತ್ತಿ ಬದುಕಿನಲ್ಲಿ ಎಷ್ಟೇ ಒತ್ತಡಗಳಿದ್ದರೂ ನೆಮ್ಮದಿ ಹಾಗೂ ಆರೋಗ್ಯಪೂರ್ಣವಾಗಿರಲು ಕ್ರೀಡೆಗಳಲ್ಲಿ ಭಾಗವಹಿಸಬೇಕು ಎಂದರು. ಎಸ್‌ಸಿ, ಎಸ್‌ಸಿ ದೌರ್ಜನ್ಯ ತಡೆ ಸಮಿತಿ ಸದಸ್ಯ ಅಡಿವೆಪ್ಪ ಸಾಲಗಲ್ಲ ಮಾತನಾಡಿ, ಆರೋಗ್ಯವನ್ನು ಕಾಪಾಡಿಕೊಳ್ಳಲು ಕ್ರೀಡೆ, ಸಾಂಸ್ಕೃತಿಕ, ಕಲೆಗಳಲ್ಲಿ ಭಾಗವಹಿಸಬೇಕು ಎಂದರು.

ಡಾ. ಜಾವೀದ ಜಮಾದಾರ ಮಾತನಾಡಿ, ಪ್ರತಿಯೊಬ್ಬರೂ ಕ್ರೀಡೆಗೆ ಒತ್ತು ನೀಡಬೇಕು ಎಂದರು. ರಾಜ್ಯ ಹಾಗೂ ರಾಷ್ಟ್ರಮಟ್ಟದ ಹಾಕಿ ಕ್ರೀಡೆಯಲ್ಲಿ ಸಾಧನೆ ಮಾಡಿದ ಶಿಕ್ಷಕ ಎ.ಎ.ಜಹಾಗೀರದಾರ ಅವರನ್ನು ಸನ್ಮಾನಿಸಲಾಯಿತು.

ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಸುರೇಶ ಶೇಡಶ್ಯಾಳ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಎಸ್.ಜಿ.ಲೋಣಿ, ಸಮಾಜ ಕಲ್ಯಾಣ ಉಪನಿರ್ದೇಶಕ ಮಹೇಶ ಪೋದ್ದಾರ, ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಅರವಿಂದ ಕೊಪ್ಪ, ಭಾರತೀಯ ಜೈಭೀಮದಳದ ರಾಜ್ಯಾಧ್ಯಕ್ಷ ನಾಗರಾಜ ಲಂಬು, ಸಂತೋಷಕುಮಾರ ನಿಗಡಿ, ಬಿ.ಎಲ್.ವಿಜಯದಾರ, ಜುಬೇರ ಕೆರೂರ, ರಾಜಶೇಖರ ದೈವಾಡಿ, ವಿಜಯಕುಮಾರ ಹತ್ತಿ, ಗಂಗಾಧರ ಜೇವೂರ, ಸುರೇಶ ಅಂಬಿಗೇರ, ಶಿವರಾಜ ಬಿರಾದಾರ, ವಿಶ್ವನಾಥ ಬೆಳ್ಳೆನ್ನವರ, ಬಸವರಾಜ ತೇರದಾಳ ಇತರರು ಉಪಸ್ಥಿತರಿದ್ದರು.