ಜೋಡೆತ್ತುಗಳ ಓಟಕ್ಕೆ ನಗರವಾಸಿಗಳು ಚಿತ್

ವಿಜಯಪುರ: ಸತತ ಬರದಿಂದ ತತ್ತರಿಸಿದ ಜಿಲ್ಲೆಯ ಜನ ಈ ಬಾರಿ ಮುಂಗಾರಿನ ನಿರೀಕ್ಷೆಯೊಂದಿಗೆ ಸಾಂಪ್ರದಾಯಿಕ ಕಾರ ಹುಣ್ಣಿಮೆಯನ್ನು ಸಡಗರ ಹಾಗೂ ಸಂಭ್ರಮದಿಂದ ಆಚರಿಸಿದರು.

ಇಲ್ಲಿನ ಕನದಾಸ ಬಡಾವಣೆಯ ಜಿಲ್ಲಾ ಪಂಚಾಯಿತಿ ಮೈದಾನದಲ್ಲಿ ಸೋಮವಾರ ಕುದುರೆ ಮತ್ತು ಎತ್ತಿನ ಜೋಡಿಗಳ ಭರ್ಜರಿ ಓಟದೊಂದಿಗೆ ಕಾರಹುಣ್ಣಿಮೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಘಲ್ಲು ಘಲ್ಲೆನ್ನುವ ಗೆಜ್ಜೆ ಸಪ್ಪಳ, ಬಣ್ಣ ಲೇಪಿತ ಎತ್ತು ಮತ್ತು ಬಂಡಿಗಳ ಸಾಲು, ಎತ್ತುಗಳ ಕೊಂಬಿಗೆ ಕಟ್ಟಿದ ಝೂಲಾ, ಬಾರಕೋಲುಗಳ ಸದ್ದು ಕಾರಹುಣ್ಣಿಮೆಯ ಮೆರಗು ಹೆಚ್ಚಿಸಿದವು. ಹಲಗೆ ತಾಳಕ್ಕೆ ಮಕ್ಕಳು ಕೇಕೆ ಹಾಕಿ ಕುಣಿದು ಕುಪ್ಪಳಿಸಿದರು.

ಎತ್ತು-ಹೋರಿಗಳೊಂದಿಗೆ ಚಕ್ಕಡಿ ಹೂಡಿಕೊಂಡು ಬಂದ ರೈತರು, ತಾಮುಂದು, ನಾಮುಂದು ಎಂದು ತಮ್ಮ ಜೋಡೆತ್ತಿನ ಚಕ್ಕಡಿ ಓಡಿಸುವ ಮೂಲಕ ಸಂಭ್ರಮಿಸಿದರು. ಎತ್ತುಗಳ ಶರವೇಗಕ್ಕೆ ಬಂಡಿ ಮೇಲೆ ನಿಂತ ಸವಾರ ಸಿಳ್ಳೆ-ಕೇಕೆ ಹಾಕಿ ಹುರುಂಬಿಸುತ್ತಾ ಬಂಡಿ ಓಡಿಸುವ ವೈಭವವನ್ನು ಹೆಣ್ಣುಮಕ್ಕಳಾದಿಯಾಗಿ ಎಲ್ಲ ಸ್ತರದವರೂ ಕಣ್ತುಂಬಿಕೊಂಡರು.

ಈ ಎತ್ತಿನ ಗಾಡಿಗಳ ಓಟ ಕಾಣಲು ಸಾವಿರಾರು ಸಂಖ್ಯೆಯಲ್ಲಿ ಜನ ಜಮಾಯಿಸಿದ್ದರು. ಮಧ್ಯಾಹ್ನ 4 ಕ್ಕೆ ಆಗಮಿಸಿ ಸುರಕ್ಷಿತವಾದ ಸ್ಥಾನದಲ್ಲಿ ನಿಂತುಕಂಡು ಎತ್ತಿನ ಓಟದ ರೋಮಾಂಚನವನ್ನು ಅನುಭವಿಸಿದರು. ಓಟದ ರೋಚಕತೆ ವೀಕ್ಷಿಸಲು ಕೆಲವರು ಸಮೀಪದ ಮರವೇರಿ ಕುಳಿತಿದ್ದರು. ಸುಮಾರು ಮೂರು ಗಂಟೆಗೂ ಅಕ ಕಾಲ ನಡೆದ ಈ ಓಟದಲ್ಲಿ ಜೋರಾಪುರ ಪೇಠ, ಕಮಾನ್‌ಖಾನ್ ಬಜಾರ, ತೊರವಿ ಸೇರಿದಂತೆ ವಿವಿಧ ಭಾಗಗಳಿಂದ 50 ಕ್ಕೂ ಹೆಚ್ಚು ರೈತರು ಬಂಡಿ ಸಮೇತ ಪಾಲ್ಗೊಂಡಿದ್ದರು.

ಬಳಿಕ ಮನಗೂಳಿ ಅಗಸಿಯಲ್ಲಿ ಸಾಂಪ್ರದಾಯಿಕವಾಗಿ ಕರಿ ಹರಿಯಲಾಯಿತು. ಇದರಿಂದ ಕೆಲ ಕಾಲ ಸಂಚಾರ ಅಸ್ತವ್ಯಸ್ತಗೊಂಡಿತು. ಅನೇಕರು ಮನೆಯಲ್ಲಿಯೇ ದನಕರುಗಳಿಗೆ ಪೂಜೆ ಸಲ್ಲಿಸಿ ಹಬ್ಬವಾಚರಿಸಿದರು.Leave a Reply

Your email address will not be published. Required fields are marked *