More

    ಫೆ.28, 29 ರಂದು ವಿಜಯಪುರದಲ್ಲಿ ಉದ್ಯೋಗ ಮೇಳ

    ವಿಜಯಪುರ: ರಾಜ್ಯ ಸರ್ಕಾರದ ನಿರ್ದೇಶನದನ್ವಯ ಜಿಲ್ಲಾಡಳಿತ, ಉದ್ಯೋಗ ಮತ್ತು ಕೌಶಲ ಅಭಿವೃದ್ಧಿ ಇಲಾಖೆ ಸಹಯೋಗದೊಂದಿಗೆ ಫೆ.28 ಹಾಗೂ 29 ರಂದು ಎರಡು ದಿನಗಳ ಬೃಹತ್ ಉದ್ಯೋಗ ಮೇಳಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
    ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡ ಉದ್ಯೋಗ ಮೇಳ ಕುರಿತ ಪೂರ್ವ ಸಿದ್ಧತಾ ಸಭೆ ನಡೆಸಿದ ಅವರು, ಸೊಲ್ಲಾಪುರ ರಸ್ತೆಯ ಬಿಎಲ್‌ಡಿಇ ಕಾಲೇಜ್ ಹತ್ತಿರ ಇರುವ ಸರ್ಕಾರಿ ಐಟಿಐ ಕಾಲೇಜ್ ಆವರಣದಲ್ಲಿ ಉದ್ಯೋಗ ಮೇಳ ಹಮ್ಮಿಕೊಳ್ಳಲು ಉದ್ದೇಶಿಸಲಾಗಿದ್ದು, ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಪರಸ್ಪರ ಸಮನ್ವಯತೆಯಿಂದ ಉದ್ಯೋಗ ಮೇಳವನ್ನು ಯಶಸ್ವಿಗೊಳಿಸಬೇಕು. ಉದ್ಯೋಗ ಮೇಳದಲ್ಲಿ 5 ಸಾವಿರಕ್ಕಿಂತ ಹೆಚ್ಚು ಉದ್ಯೋಗಾಕಾಂಕ್ಷಿಗಳು ಆಗಮಿಸುವ ನಿರೀಕ್ಷೆ ಇದ್ದು, ಈ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸುವಂತೆ ಸೂಚನೆ ನೀಡಿದರು.
    ಉದ್ಯೋಗ ಮೇಳಕ್ಕಾಗಿ ವ್ಯವಸ್ಥಾಪಕ ಸಮಿತಿ, ಪ್ರಚಾರ ಉಪ ಸಮಿತಿ, ಆಹಾರ, ವಸತಿ ಉಪ ಸಮಿತಿ, ನೋಂದಣಿ ಮತ್ತು ಮಾರ್ಗದರ್ಶನ ಸಮಿತಿ, ಉದ್ಯೋಗದಾತರ ಮತ್ತು ಉದ್ಯೋಗಾಕಾಂಕ್ಷಿಗಳ ಸಂಪರ್ಕ ಸಮಿತಿ, ಸ್ಟಾಲ್‌ಗಳ ವಿತರಣಾ ಮತ್ತು ನಿರ್ವಹಣಾ ಸಮಿತಿ ಸೇರಿದಂತೆ ಇನ್ನಿತರ ಸಮಿತಿಗಳ ಅಧಿಕಾರಿಗಳು ಮುಂಬರುವ ಈ ಬೃಹತ್ ಉದ್ಯೋಗಮೇಳ ಯಶಸ್ವಿಗೆ ಕಾರ್ಯ ನಿರ್ವಹಿಸುವಂತೆ ಸೂಚಿಸಿದರು.
    ಅದರಂತೆ ಹೆಚ್ಚು ಹೆಚ್ಚು ಯುವಕ-ಯುವತಿ ಅಭ್ಯರ್ಥಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸುವಂತೆ ನೋಡಿಕೊಳ್ಳಬೇಕು. ಉದ್ಯೋಗಾಕಾಂಕ್ಷಿಗಳಿಗೆ ಮತ್ತು ಉದ್ಯೋಗದಾತರಿಗೆ ಅವಶ್ಯಕ ಸೌಲಭ್ಯಗಳನ್ನು ಈ ಸಂದರ್ಭದಲ್ಲಿ ಕಲ್ಪಿಸುವಂತೆ ಅವರು ಸೂಚನೆ ನೀಡಿದರು.
    ಜಿಪಂ ಸಿಇಒ ಗೋವಿಂದ ರೆಡ್ಡಿ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಔದ್ರಾಮ, ವಿಜಯಪುರ ಉಪ ವಿಭಾಗಾಧಿಕಾರಿ ಸೋಮಲಿಂಗ ಗೆಣ್ಣೂರ, ಪಾಲಿಕೆ ಆಯುಕ್ತ ಹರ್ಷಾ ಶೆಟ್ಟಿ, ಜಿಲ್ಲಾ ಕೈಗಾರಿಕಾ ಕೇಂದ್ರ ಜಂಟಿ ನಿರ್ದೇಶಕ ಟಿ.ಸಿದ್ದಣ್ಣ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಸುಲೈಮಾನ ನದಾ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts