ಪೈಲಟ್ ಮಾದರಿ ತಾಂಡಾಗಳ ಪ್ರಗತಿ

ವಿಜಯಪುರ : ಜಿಲ್ಲೆಯ ತಾಂಡಾಗಳ ಸರ್ವತೋಮುಖ ಪ್ರಗತಿ ಹಾಗೂ ತಾಂಡಾ ನಿವಾಸಿಗಳು ಗುಳೆ ಹೋಗುವುದನ್ನು ತಪ್ಪಿಸಲು ಪೈಲಟ್ ಯೋಜನೆಯಡಿ ಪ್ರಥಮ ಹಂತದಲ್ಲಿ 100 ಕೋಟಿ ರೂ. ವೆಚ್ಚದಲ್ಲಿ ವಿವಿಧ ಯೋಜನೆ ಕೈಗೆತ್ತಿಕೊಳ್ಳಲಾಗುವುದು ಎಂದು ನಾಗಠಾಣ ಶಾಸಕ ಡಾ.ದೇವಾನಂದ ಚವಾಣ್ ಹೇಳಿದರು.
ಇಲ್ಲಿನ ಕಂದಗಲ್ ಹನುಮಂತರಾಯ ರಂಗಮಂದಿರದ ಆವರಣದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಸಂತ ಶ್ರೀ ಸೇವಾಲಾಲರ ಜಯಂತ್ಯುತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.

ರಾಜ್ಯದಲ್ಲಿಯೇ ಅತಿ ಹೆಚ್ಚು ತಾಂಡಾಗಳಿರುವ ಜಿಲ್ಲೆ ವಿಜಯಪುರ. ಬಂಜಾರ ಸಮಾಜದ ಬಾಂಧವರು ಉದ್ಯೋಗ ಅರಸಿ ಹೊರರಾಜ್ಯಗಳಿಗೆ ಹೋಗುವುದನ್ನು ತಪ್ಪಿಸಲು ವಿಶೇಷ ಕಾರ್ಯ ಯೋಜನೆಯನ್ನು ರೂಪಿಸಲು ಸರ್ಕಾರ ನಿರ್ಧರಿಸಿದೆ. ಕಳೆದ ಬಾರಿ ಮುಖ್ಯಮಂತ್ರಿ ಕುಮಾರಸ್ವಾಮಿ ವಿವಿಧ ತಾಂಡಾಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಪೈಲಟ್ ಪ್ರಾಜೆಕ್ಟ್ ಬಗ್ಗೆ ಘೋಷಣೆ ಮಾಡಿದ್ದರು. ಅವರ ಘೋಷಣೆಯಂತೆ ಗುಡಿ ಕೈಗಾರಿಕೆ ಸ್ಥಾಪನೆ ಮೊದಲಾದ ಕಾರ್ಯಗಳನ್ನು ಕೈಗೊಳ್ಳಲು ಈಗಾಗಲೇ 100 ಕೋಟಿ ರೂ. ವಿಶೇಷ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಕೆ ಮಾಡಲಾಗಿದ್ದು, ಶೀಘ್ರ ಕಾಮಗಾರಿಗಳು ಆರಂಭಗೊಳ್ಳಲಿವೆ ಎಂದು ವಿವರಿಸಿದರು.

ಬಂಜಾರ ಸಮಾಜ ಆರ್ಥಿಕ, ಸಾಮಾಜಿಕ, ರಾಜಕೀಯ ಹಾಗೂ ಶೈಕ್ಷಣಿಕವಾಗಿ ಪ್ರಗತಿ ಸಾಧಿಸುವುದು ಅತ್ಯಂತ ಅಗತ್ಯವಾಗಿದೆ. ಸಂತ ಸೇವಾಲಾಲರ ತತ್ತ್ವಗಳನ್ನು ಅಳವಡಿಸಿಕೊಳ್ಳಬೇಕು. ಬಂಜಾರ ಸಮಾಜದ ಸಂಘಟನೆಗಾಗಿ ಮಾಸಾಂತ್ಯದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಬೃಹತ್ ಬಂಜಾರ ಜಾಗೃತಿ ಸಮಾವೇಶವನ್ನು ಸಂಘಟಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ಜಿಪಂ ಮಾಜಿ ಅಧ್ಯಕ್ಷ ಅರ್ಜುನ ರಾಠೋಡ ಮಾತನಾಡಿ, ಬಂಜಾರ ಸಮಾಜ ಆರ್ಥಿಕ, ಶೈಕ್ಷಣಿಕವಾಗಿ ಪ್ರಗತಿ ಸಾಧಿಸಬೇಕು. ಅದರಂತೆ ಎಲ್ಲ ರಂಗಗಳಲ್ಲಿ ಪ್ರಗತಿ ಸಾಧಿಸಲು ರಾಜಕೀಯವಾಗಿ ಸಶಕ್ತವಾಗಬೇಕಿದೆ. ಈ ನಿಟ್ಟಿನಲ್ಲಿ ರಾಜಕೀಯವಾಗಿ ಬಂಜಾರ ಸಮಾಜದ ಜನತೆ ಪ್ರಗತಿ ಸಾಧಿಸಬೇಕು ಎಂದು ಕರೆ ನೀಡಿದರು.

ಜಿಪಂ ಮಾಜಿ ಸದಸ್ಯ ರಾಜಪಾಲ ಚವಾಣ್, ಬಂಜಾರ ವಿ.ವ. ಸಂಘದ ಅಧ್ಯಕ್ಷ ಡಿ.ಎಲ್. ಚವಾಣ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ವಿದ್ಯಾವತಿ ಎಚ್.ಬಿ, ಸೋಮನಗೌಡ ಕಲ್ಲೂರ, ಸುರೇಶ ಬಿಜಾಪುರ, ಸೋಮಶೇಖರ ರಾಠೋಡ ಮೊದಲಾದವರು ಪಾಲ್ಗೊಂಡಿದ್ದರು.

ಸಂತ ಸೇವಾಲಾಲರ ಮಹಾಕಾವ್ಯ ಹೊರತರಲಿ
ಉಪನ್ಯಾಸ ಮಂಡಿಸಿದ ಕರ್ನಾಟಕ ವಿಶ್ವವಿದ್ಯಾಲಯದ ಪ್ರಸಾರಾಂಗ ನಿರ್ದೇಶಕ ಡಾ.ಹೀರಾಲಾಲ ಪವಾರ ಮಾತನಾಡಿ, ಬಂಜಾರ ಸಮಾಜದ ಕುಲಗುರು ಸಂತ ಸೇವಾಲಾಲರ ಬೃಹತ್ ಮಹಾಕಾವ್ಯ ಹೊರತರುವ ಕಾರ್ಯ ಪ್ರಗತಿಯಲ್ಲಿದೆ. ಬಂಜಾರ ಸಮಾಜದ ಅನೇಕ ಕಲಾವಿದರು ಸೇವಾಲಾಲರ ಜೀವನ, ಸಾಧನೆ ಹಾಗೂ ತತ್ತ್ವ-ಸಿದ್ಧಾಂತ ಸಾರುವ ಗೀತೆಗಳಿಗೆ ಧ್ವನಿ ನೀಡಿದ್ದಾರೆ ಎಂದರು. ಲಂಡನ್ ಹೈ ಕಮಿಷನರ್ ಆಗಿ ಹಲವಾರು ಹುದ್ದೆ ಅಲಂಕರಿಸಿ ಬಂಜಾರ ಸಮಾಜಕ್ಕೆ ಅನುಪಮ ಕೊಡುಗೆ ನೀಡಿದ ದಿ.ಎಲ್.ಆರ್. ನಾಯಕ ಅವರ ಕಂಚಿನ ಪ್ರತಿಮೆಯನ್ನು ಸ್ಥಾಪನೆ ಮಾಡಬೇಕು. ಅದರಂತೆ ಬಂಜಾರ ಸಮಾಜಕ್ಕೆ ಎಸ್.ಸಿ. ಮೀಸಲು ಕಲ್ಪಿಸಿದ ದಿ.ಕೆ.ಟಿ. ರಾಠೋಡ ಅವರ ಪ್ರತಿಮೆಯನ್ನು ಉಪಲಿಬುರುಜ್ ಬಳಿ ಸ್ಥಾಪನೆ ಮಾಡಬೇಕು ಎಂದು ಒತ್ತಾಯಿಸಿದರು.