ಅಕ್ರಮ ಕಳ್ಳಬಟ್ಟಿ ಸರಾಯಿ ತಯಾರು ನಿಯಂತ್ರಿಸಿ

ವಿಜಯಪುರ: ಅಕ್ರಮವಾಗಿ ಕಳ್ಳಬಟ್ಟಿ ಸರಾಯಿ ತಯಾರು ಮಾಡುವುದನ್ನು ನಿಯಂತ್ರಿಸುವಂತೆ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅವರು ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಕಳ್ಳಬಟ್ಟಿ ಸರಾಯಿ ನಿರ್ಮೂಲನಾ ಜಿಲ್ಲಾ ಸ್ಥಾಯಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲಾದ್ಯಂತ ಅಕ್ರಮವಾಗಿ ಕಳ್ಳಬಟ್ಟಿ ಸರಾಯಿ ತಯಾರು ಮಾಡುವುದನ್ನು ನಿಯಂತ್ರಿಸುವ ಜೊತೆಗೆ ಈ ಸರಾಯಿ ಉತ್ಪಾದನೆಯಾಗುವಂಥ ಪ್ರದೇಶಗಳ ಮೇಲೆ ಕಟ್ಟುನಿಟ್ಟಿನ ನಿಗಾ ಇಡುವಂತೆ ಸೂಚಿಸಿದರು.
ಅಕ್ರಮ ಕಳ್ಳಬಟ್ಟಿ ಸರಾಯಿ ತಯಾರಿಕೆ ನಿಯಂತ್ರಣಕ್ಕೆ ಸಂಬಂಧಪಟ್ಟಂತೆ ಅನಿರೀಕ್ಷಿತವಾಗಿ ದಾಳಿ ಮಾಡುವುದು, ದಂಡ ವಿಸುವುದು, ಶಿಕ್ಷೆಗೊಳಪಡಿಸುವಂಥ ಕ್ರಮಗಳ ಬಗ್ಗೆಯೂ ಪರಿಶೀಲಿಸಿದ ಅವರು, ಪೊಲೀಸ್ ಇಲಾಖೆಯ ಸಹಕಾರವನ್ನು ಕಾಲಕಾಲಕ್ಕೆ ಪಡೆಯುವ ಮೂಲಕ ಅಬಕಾರಿ ಹಾಗೂ ಪೊಲೀಸ್ ಇಲಾಖೆ ಸೇರಿದಂತೆ ಇತರೆ ಇಲಾಖೆಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸುವಂತೆ ಸೂಚಿಸಿದರು.
ಅಕ್ರಮ ಕಳ್ಳಬಟ್ಟಿ ಸರಾಯಿ ಚಟುವಟಿಕೆಯಲ್ಲಿ ತೊಡಗಿರುವವರನ್ನು ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಚಿಂತನೆ ನಡೆಸಬೇಕು. ತಯಾರಿಕಾ ಚಟುವಟಿಕೆಯಿಂದ ಹೊರಬರಲು ಮನವೊಲಿಸಲು ವಿವಿಧ ನಿಗಮಗಳ ಮುಖಾಂತರ ಸರ್ಕಾರದಿಂದ ದೊರೆಯುವ ಸಾಲ-ಸೌಲಭ್ಯ, ಮುದ್ರಾ ಯೋಜನೆ, ಸ್ವಯಂ ಉದ್ಯೋಗಕ್ಕೆ ನೆರವಾಗುವ ಸಾಲ-ಸೌಲಭ್ಯಗಳ ಕುರಿತಂತೆ ಅರಿವು ಮೂಡಿಸಬೇಕು. ನಿರ್ಮೂಲನೆಗೆ ಸಂಬಂಧಪಟ್ಟಂತೆ ತಹಸೀಲ್ದಾರ್‌ರು ಕೂಡ ಕಡ್ಡಾಯವಾಗಿ ಸಭೆ ನಡೆಸಬೇಕು. ಗ್ರಾಮ ಲೆಕ್ಕಾಕಾರಿಗಳು ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳೊಂದಿಗೆ ಸಮನ್ವಯತೆ ಸಾಸಬೇಕು. ವಿಶೇಷವಾಗಿ ಅಬಕಾರಿ ಇಲಾಖೆ ಅಧಿಕಾರಿಗಳು ಇನ್ನಷ್ಟು ಚುರುಕಾಗಿ ಕಾರ್ಯನಿರ್ವಹಿಸಬೇಕೆಂದರು.
ನಿರ್ಮೂಲನೆಗಾಗಿ ಸೂಕ್ತ ಜಾಗೃತಿ ಮೂಡಿಸಲು ಜಿಲ್ಲೆಯ ತಹಸೀಲ್ದಾರ್‌ರು, ಅರಣ್ಯ ಇಲಾಖೆ, ಅಬಕಾರಿ ನಿರೀಕ್ಷಕರು, ಜಿಲ್ಲಾ ಪಂಚಾಯತ್, ಪೊಲೀಸ್ ಇಲಾಖೆ, ವಿವಿಧ ನಿಗಮಗಳು, ಪ್ರಾದೇಶಿಕ ಸಾರಿಗೆ ಅಧಿಕಾರಿಗಳು, ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾ ಮಟ್ಟದ ಕಾರ್ಯಾಗಾರ ಹಮ್ಮಿಕೊಳ್ಳಬೇಕು ಎಂದರು.
ಜಿಪಂ ಸಿಇಒ ವಿಕಾಸ ಕಿಶೋರ ಸುರಳಕರ ಅವರು, ಈವರೆಗೆ ಅಬಕಾರಿ ಇಲಾಖೆಯಿಂದ ಕೈಗೊಂಡ ಕ್ರಮಗಳ ಬಗ್ಗೆ ಪರಿಶೀಲಿಸಿ, ಕಳ್ಳಭಟ್ಟಿ ತಯಾರಿಕೆ ನಿರ್ಮೂಲನೆ ಜೊತೆಗೆ ಈ ಚಟುವಟಿಕೆಯಲ್ಲಿ ತೊಡಗಿರುವವರನ್ನು ಗುರುತಿಸಿ ಪರ್ಯಾಯ ಉದ್ಯೋಗಕ್ಕಾಗಿ ಕೌಶಲಾಭಿವೃದ್ಧಿ, ವಿವಿಧ ಸಾಲ-ಸೌಲಭ್ಯಗಳ ಅರಿವು ಮೂಡಿಸಬೇಕೆಂದರು.
ಉಪವಿಭಾಗಾಧಿಕಾರಿ ಸೋಮಲಿಂಗ ಗೆಣ್ಣೂರ, ಇಂಡಿ ಉಪವಿಭಾಗಾಧಿಕಾರಿ ಆನಂದ ಸೇರಿದಂತೆ ಅಬಕಾರಿ, ಪೊಲೀಸ್ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು. ಅಬಕಾರಿ ಇಲಾಖೆ ಆಯುಕ್ತ ರವಿಶಂಕರ ಸ್ವಾಗತಿಸಿದರು.

Leave a Reply

Your email address will not be published. Required fields are marked *