ಪ್ರಜಾಪ್ರತಿನಿಧಿ ಕಾಯ್ದೆ ಪಾಲನೆಗೆ ಸೂಚನೆ

ವಿಜಯಪುರ: ಲೋಕಸಭೆ ಚುನಾವಣೆ-2019ರ ಹಿನ್ನೆಲೆ ಜಿಲ್ಲೆಯಲ್ಲಿ ಜನಪ್ರತಿನಿಧಿಗಳು ಅಥವಾ ಅವರ ಪರವಾಗಿ ಯಾರಾದರೂ ಪೋಸ್ಟರ್, ಪಾಂಪ್ಲೆಟ್ ಮುಂತಾದ ಪ್ರಚಾರ ಸಾಮಗ್ರಿಗಳನ್ನು ಮುದ್ರಿಸುವಾಗ ಪ್ರಜಾಪ್ರತಿನಿಧಿ ಕಾಯ್ದೆ-1951ರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ಎಸ್.ಬಿ.ಶೆಟ್ಟೆಣ್ಣವರ ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಹಾಗೂ ಜಿಲ್ಲೆಯ ಮುದ್ರಕರೊಂದಿಗೆ ಲೋಕಸಭೆ ಚುನಾವಣೆ-2019ರ ಪ್ರಚಾರ ಸಾಮಗ್ರಿಗಳ ಮುದ್ರಣ ಹಾಗೂ ದರಪಟ್ಟಿ ಕುರಿತ ಮಾಹಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪೋಸ್ಟರ್, ಕರಪತ್ರ, ಜನಪ್ರತಿನಿಧಿಗಳ ಸಾಧನೆ ಕುರಿತ ಪುಸ್ತಕ ಮುಂತಾದ ಪ್ರಚಾರ ಸಾಮಗ್ರಿಗಳನ್ನು ಮುದ್ರಿಸುವಾಗ ಪ್ರಜಾಪ್ರತಿನಿಧಿ ಕಾಯ್ದೆ 1951ರನ್ವಯ ಮುದ್ರಕರು ಮತ್ತು ಪ್ರಕಾಶಕರ ಹೆಸರು, ವಿಳಾಸ, ಪ್ರತಿಗಳ ಸಂಖ್ಯೆ, ಪುಟಗಳ ಸಂಖ್ಯೆ, ಮುದ್ರಣಾಲಯದ ಹೆಸರು, ವಿಳಾಸವನ್ನು ಕಡ್ಡಾಯವಾಗಿ ನಮೂದಿಸಿರಬೇಕು. ಈ ಅಂಶಗಳನ್ನು ಹೊಂದಿರದ ಯಾವುದೇ ಪ್ರಚಾರ ಸಾಮಗ್ರಿಗಳು ಪತ್ತೆಯಾದರೆ ಸಂಬಂಧಿಸಿದವರ ಮೇಲೆ ಕಾನೂನು ರಿತ್ಯ ಕ್ರಮ ಕೈಗೊಳ್ಳಲಾಗುವುದು ಹಾಗೂ ಮುದ್ರಣದ ನಂತರ 3 ಪ್ರತಿಗಳೊಂದಿಗೆ ಚುನಾವಣೆ ಆಯೋಗದ ನಿಗದಿತ ನಮೂನೆಯನ್ನು ಭರ್ತಿ ಮಾಡಿ ಜಿಲ್ಲಾ ಚುನಾವಣಾಧಿಕಾರಿಗಳ ಕಚೇರಿಗೆ ಸಲ್ಲಿಸಬೇಕು ಎಂದು ಅವರು ಸೂಚಿಸಿದರು.
ರಾಜಕೀಯ ಪಕ್ಷಗಳು ದೃಶ್ಯ ಹಾಗೂ ಧ್ವನಿ ಮುದ್ರಿಕೆ ಮೂಲಕ ಪ್ರಚಾರ ಮಾಡುವ ಪೂರ್ವದಲ್ಲಿ ಚುನಾವಣೆ ಆಯೋಗ ನೇಮಿಸಿರುವ ಸಮಿತಿಯಲ್ಲಿ ಕಡ್ಡಾಯ ಅನುಮತಿ ಪಡೆಯಬೇಕು. ದೃಶ್ಯ ಮತ್ತು ಧ್ವನಿ ಮುದ್ರಿಕೆಗಳು ಯಾವುದೇ ಧರ್ಮ, ಜಾತಿ, ವರ್ಗ, ಸಮುದಾಯವನ್ನು ಪ್ರತಿಬಿಂಬಿಸುವ ಅಥವಾ ಅವಹೇಳನ ಮಾಡುವ ಅಂಶಗಳನ್ನು ಹೊಂದಿರಬಾರದು. ಪ್ರಸಾರ ಪೂರ್ವದಲ್ಲಿ ಚುನಾವಣೆ ಆಯೋಗದ ನಿಗದಿತ ನಮೂನೆಯನ್ನು ಭರ್ತಿ ಮಾಡಿ ಸಮಿತಿಯ ಮುಂದೆ ಸಲ್ಲಿಸಿ, ಪೂರ್ವಾನುಮತಿ ಪಡೆಯಬೇಕು ಎಂದರು.
ಸಭೆಯಲ್ಲಿ ಭಾಗವಹಿಸಿದ್ದ ಎಲ್ಲ ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ಪ್ರಚಾರ ಸಾಮಗ್ರಿಗಳಿಗೆ ಸರ್ಕಾರ ನಿಗದಿಪಡಿಸಿದ ತಾತ್ಕಾಲಿಕ ದರಪಟ್ಟಿಯನ್ನು ಒದಗಿಸಲಾಯಿತು. ಈ ದರಪಟ್ಟಿಗೆ ಆಕ್ಷೇಪಣೆಗಳಿದ್ದಲ್ಲಿ 7 ದಿನಗಳೊಳಗಾಗಿ ಮಾಹಿತಿ ಸಲ್ಲಿಸಲು ತಿಳಿಸಲಾಯಿತು.
ಅಪರ ಜಿಲ್ಲಾಧಿಕಾರಿ ಎಸ್.ಪ್ರಸನ್ನ ಸೇರಿದಂತೆ ರಾಜಕೀಯ ಪಕ್ಷಗಳ ಪ್ರತಿನಿಧಿಗಳು, ಜಿಲ್ಲೆಯ ವಿವಿಧ ಮುದ್ರಣಾಲಯಗಳ ಮುದ್ರಕರು ಉಪಸ್ಥಿತರಿದ್ದರು.