ಕಾನೂನು ಚೌಕಟ್ಟಿನಲ್ಲಿ ವಸ್ತುನಿಷ್ಠ ವರದಿ ಮಾಡಿ

ವಿಜಯಪುರ: ಯಾವುದೇ ಮಗುವಿನ ಮೇಲಾಗುವ ದೌರ್ಜನ್ಯಗಳನ್ನು ಆತುರಕ್ಕೆ ಬಿದ್ದು ವರದಿ ಮಾಡದೆ ಮಗುವಿನ ಭವಿಷ್ಯಕ್ಕೆ ಕಪ್ಪು ಚುಕ್ಕೆ ಬಾರದಂತೆ ವಿವೇಚನೆಯಿಂದ, ವ್ಯವಧಾನದಿಂದ ವಸ್ತು ಸ್ಥಿತಿ ಅರಿತು ವರದಿ ಮಾಡಬೇಕು ಎಂದು ನಟ, ನಿರ್ದೇಶಕ ಸುಚೇಂದ್ರ ಪ್ರಸಾದ್ ಹೇಳಿದರು.

ಇಲ್ಲಿನ ಜಿಪಂ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ, ರಾಜ್ಯ ಮಕ್ಕಳ ಹಕ್ಕುಗಳ ಆಯೋಗ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ರಾಜ್ಯ ಸಮಗ್ರ ಮಕ್ಕಳ ರಕ್ಷಣಾ ಸೊಸೈಟಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಸಹಯೋಗದಲ್ಲಿ ಮಂಗಳವಾರ ನಡೆದ ಮಕ್ಕಳ ಹಕ್ಕುಗಳು ಮತ್ತು ಕಾನೂನುಗಳ ಕುರಿತ ಮಾಧ್ಯಮ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ದೌರ್ಜನ್ಯಕ್ಕೊಳಗಾದ ಮಗು ಅಥವಾ ಬಾಲಾಪರಾಧದಲ್ಲಿ ತೊಡಗಿರುವ ಮಗುವಿನ ಗುರುತನ್ನು ಕಾನೂನು ಚೌಕಟ್ಟು ಮೀರಿ ಬಹಿರಂಗ ಗೊಳಿಸುವುದರಿಂದ ಕಾನೂನು ದೃಷ್ಟಿಯಲ್ಲಿ ಮಾಧ್ಯಮ ಪ್ರತಿನಿಧಿ ತಪ್ಪಾಗಿ ಕಾಣಿಸುವುದು ಒಂದಾದರೆ ಆ ಮಗುವಿನ ಭವಿಷ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಆ ಮಗು ಜೀವನ ಪೂರ್ತಿ ಆ ಘಟನೆಯ ಛಾಯೆಯಲ್ಲಿಯೇ ಬದುಕಬೇಕಾಗುತ್ತದೆ. ಮಗುವಿನ ಮಾನಸಿಕ ಸ್ಥಿತಿ ಮೇಲೂ ಅದು ಕೆಟ್ಟ ಪರಿಣಾಮ ಬೀರುತ್ತದೆ. ಆದ್ದರಿಂದ ಜವಾಬ್ದಾರಿಯಿಂದ ವರದಿ ಮಾಡಬೇಕಾಗುತ್ತದೆ ಎಂದರು. ಮಾಧ್ಯಮಗಳು ಸಮಾಜದ ಕನ್ನಡಿಯಂತಿರಬೇಕು. ಸಮಾಜದ ಓರೆಕೋರೆಗಳನ್ನು ತಿದ್ದಬೇಕು. ಆದರೆ ಅವುಗಳನ್ನೇ ವೈಭವೀಕರಿಸಬಾರದು. ಮುಖ್ಯವಾಗಿ ಅತ್ಯಾಚಾರದಂತಹ ಪ್ರಕರಣಗಳಲ್ಲಿ ಮಗು ಮಾತ್ರವಲ್ಲದೆ ಇಡೀ ಕುಟುಂಬವೇ ಬಲಿಯಾಗಿರುತ್ತದೆ. ಕುಟುಂಬದ ಪರವಾಗಿ ಆತ್ಮಸ್ಥೈರ್ಯ ತುಂಬಿ ನೈತಿಕತೆ ಆಧಾರದಲ್ಲಿ ವರದಿ ಮಾಡಬೇಕು ಎಂದು ಸಲಹೆ ನೀಡಿದರು.

ನ್ಯಾಯವಾದಿ ಪ್ರಕಾಶ ಉಡುಪಿಕರ ಮಾತನಾಡಿ, ಮಗುವಿನ ಮೇಲಾಗುವ ಯಾವುದೇ ದೌರ್ಜನ್ಯ ಮಗುವಿನ ಮಾನಸಿಕ, ದೈಹಿಕ, ಕೌಟುಂಬಿಕ, ಸಾಮಾಜಿಕ ಸ್ಥಿತಿ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಈ ಕುರಿತು ಮಗುವಿನ ಹಕ್ಕಿನ ರಕ್ಷಣೆ ಉದ್ದೇಶದಿಂದ ಕಾನೂನಿನಲ್ಲಿ ಮುಖ್ಯವಾಗಿ ಮಾಧ್ಯಮಗಳಲ್ಲಿ ಬಿತ್ತರಿಸುವಂತಿಲ್ಲ. ಒಂದು ವೇಳೆ ಈ ನಿಯಮವನ್ನು ಮೀರಿ ವರದಿ ಪ್ರಕಟಿಸಿದರೆ ಸಂಬಂಧಿಸಿದವರು ನಿರ್ದಿಷ್ಟ ಅವಧಿಯ ಸೆರೆವಾಸ ಅನುಭವಿಸಬೇಕಾಗುತ್ತದೆ ಎಂದರು. ಅಕ್ಕಮಹಾದೇವಿ ವಿವಿ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಪ್ರೊ. ಓಂಕಾರ ಕಾಕಡೆ, ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಹಂಗಾಮಿ ಅಧ್ಯಕ್ಷ ವೈ.ಮರಿಸ್ವಾಮಿ, ಸದಸ್ಯೆ ಡಾ.ವನಿತಾ ತೊರವಿ, ಆಯೋಗದ ಮಾಜಿ ಅಧ್ಯಕ್ಷೆ ಕೃಪಾ ಆಳ್ವಾ, ಶ್ರೀಧರ ಕುಲಕರ್ಣಿ, ಎಸ್​ಪಿ ಪ್ರಕಾಶ ನಿಕ್ಕಂ, ಡಿವೈಎಸ್​ಪಿ ಡಿ.ಅಶೋಕ, ಮಕ್ಕಳ ರಕ್ಷಣಾಧಿಕಾರಿ ನಿರ್ಮಲಾ ಸುರಪುರ, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಶರಣು ಮಸಳಿ ಸೇರಿ ಇತರರು ಉಪಸ್ಥಿತರಿದ್ದರು.