ರೈತನ ಮನವೊಲಿಸಿದ ಶಾಸಕರು

ಸುತ್ತಲಿನ ಗ್ರಾಮಸ್ಥರಲ್ಲಿ ಸಂತಸ >>

ದೇವರಹಿಪ್ಪರಗಿ: ಮುಂಗಾರು ಹಿಂಗಾರು ಮಳೆ ಸಂಪೂರ್ಣ ವಿಫಲವಾಗಿದ್ದರಿಂದ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದ್ದು, ಕೆರೆ ನೀರು ತುಂಬಿ ಮುಂಬರುವ ಬೇಸಿಗೆಯಲ್ಲಿ ಜನ ಜಾನುವಾರುಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕೆಂದು ರೈತರು ಕೆರೆ ನೀರು ತುಂಬಲು ಹೋರಾಟ ಆರಂಭಿಸಿದ್ದಾರೆ.

ಪಟ್ಟಣದ ಕರಿದೇವರ ದೇವಸ್ಥಾನದಲ್ಲಿ ಸಭೆ ಸೇರಿದ ದೇವರಹಿಪ್ಪರಗಿ ಸುತ್ತಮುತ್ತಲಿನ ರೈತರು ಕೆರೆಗೆ ನೀರು ತುಂಬಲು ಮುಂದಿನ ಹೋರಾಟದ ರೂಪರೇಷೆ ಸಿದ್ಧಪಡಿಸಿ ಕ್ಷೇತ್ರದ ಶಾಸಕ ಸೋಮನಗೌಡ ಪಾಟೀಲ (ಸಾಸನೂರ) ಅವರನ್ನು ಅಹ್ವಾನಿಸಿದರು.

ಶಾಸಕ ಸೋಮನಗೌಡ ಪಾಟೀಲ ಮಾತನಾಡಿ, ರೈತರ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡಿಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ನಾನು ಸದಾ ರೈತರ ಪರವಾಗಿದ್ದೇನೆ. ಯಾವಾಗ ಬೇಕಾದರೂ ರೈತರು ಕರೆದಾಗ ಬರುತ್ತೇನೆ ಎಂದು ಭರವಸೆ ನೀಡಿದರು.

ಮುಳವಾಡ ಏತ ನೀರಾವರಿ ಕಾಲುವೆ ದೇವರಹಿಪ್ಪರಗಿ ಮೇಲೆ ಹಾಯ್ದು ಪಡಗಾನೂರಿನಿಂದ ಮುಂದೆ ಸಾಗಿದೆ. ಹೀಗಾಗಿ ಪಡಗಾನೂರಿನ ರೈತ ಶಾಂತಗೌಡ ಪಾಟೀಲ ಕಾಲುವೆ ಕೆಲಸಕ್ಕೆ ತಕರಾರು ಇಟ್ಟಿದ್ದರಿಂದ ಕಾಲುವೆ ಕಾಮಗಾರಿ ನಿಂತಿದೆ ಎಂದು ರೈತರು ಶಾಸಕರ ಗಮನಕ್ಕೆ ತಂದರು.

ಕಾಮಗಾರಿ ಸ್ಥಗಿತಗೊಳಿಸಿದ ರೈತರ ಮನವೊಲಿಸುತ್ತೇನೆಂದು ಶಾಸಕರು ಹೇಳಿದ ನಂತರ ಅವರ ನೇತೃತ್ವದಲ್ಲಿ ರೈತರು ಪಡಗಾನೂರಿನತ್ತ ಪ್ರಯಾಣ ಬೆಳೆಸಿದರು. ಅಲ್ಲಿನ ಲಗಮವ್ವ ದೇವಿ ದೇವಸ್ಥಾನದಲ್ಲಿ ರೈತರು ಸಭೆ ಸೇರಿದರಾದರೂ ಸಂಬಂಧಿಸಿದ ರೈತ ಸಭೆಗೆ ಬರಲಿಲ್ಲ. ಕೊನೆಗೆ ಶಾಸಕರು ಖುದ್ದು ಅಧಿಕಾರಿಗಳೊಂದಿಗೆ ರೈತ ಶಾಂತಗೌಡ ಪಾಟೀಲ ಮನೆಗೆ ತೆರೆಳಿ ಸಮಸ್ಯೆ ಕುರಿತು ಸಮಗ್ರವಾಗಿ ವಿಚಾರಿಸಿದರು.

ರೈತ ಶಾಂತಗೌಡ ಪಾಟೀಲ ಮಾತನಾಡಿ, ತನ್ನ 5 ಎಕರೆ ಜಮೀನು ಕಾಲುವೆಯಲ್ಲಿ ಹೋಗಿದೆ. ಆದರೆ ಮ್ಯಾಪ್ ಪ್ರಕಾರ ಅಳತೆ ಮಾಡಿದ್ದು ಅದರೊಳಗೆ ಕಾಮಗಾರಿ ಮಾಡದೆ ಹೆಚ್ಚಿನ ಜಮೀನು ಕೊರೆದಿದ್ದಾರೆ. ಹೀಗಾಗಿ ಮೂರು ವರ್ಷಗಳಿಂದ ನಾನು ಅಲ್ಲಿ ಯಾವುದೇ ಫಸಲು ಬೆಳೆಯದೆ ತೊಂದರೆ ಅನುಭವಿಸಿದ್ದೇನೆ. ಇದಕ್ಕೆಲ್ಲ ಅಧಿಕಾರಿಗಳ ನಿರ್ಲಕ್ಷ್ಯೇ ಕಾರಣ. ನನಗಾದ ನಷ್ಟ ಯಾರು ತುಂಬಿಕೊಡುತ್ತಾರೆ ಎಂದು ಪ್ರಶ್ನಿಸಿದರು. ಇದಕ್ಕೆ ಸಮಜಾಯಿಸಿ ಹೇಳಲು ಹೋದ ಅಧಿಕಾರಿ ಎಇಇ ಸಿ.ಎಸ್. ವಾರದ ವಿರುದ್ಧ ಕೆಂಡ ಕಾರಿ, ಎಲ್ಲ ನಿಮ್ಮಿಂದಲೇ ಆಗಿದ್ದು, ರೈತರಿಗೆ ತೊಂದರೆ ಮಾಡಬೇಡಿ ಎಂದು ಹೇಳಿದರು. ಮಧ್ಯಪ್ರವೇಶಿಸಿದ ಶಾಸಕರು ಇಬ್ಬರನ್ನು ಸಮಾಧಾನಪಡಿಸಿ, ನಿಮಗಾದ ನಷಕ್ಕೆ ಪರಿಹಾರ ಕೊಡುತ್ತೇನೆ. ನಿಮ್ಮ ತಕರಾರು ಹಿಂಪಡೆದರೆ ಕಾಲುವೆಗೆ ನೀರು ಬಂದು ಕೆರೆ ಕಟ್ಟೆಗಳು ತುಂಬಬಹುದು. ಇದರಿಂದ ನೂರಾರು ರೈತರು, ಜನ ಜಾನುವಾರುಗಳು ಬದುಕಲು ಅನುಕೂಲವಾಗುತ್ತದೆ. ಎರಡು ದಿನದೊಳಗೆ ಸಮಸ್ಯೆ ಪರಿಹರಿಸಿ ಕಾಲುವೆ ಕಾಮಗಾರಿ ಮುಕ್ತಾಯಗೊಳಿಸಲಾಗುವುದು ಎಂದು ಭರವಸೆ ನೀಡಿದರು.

ಪಿಎಸ್​ಐ ದುಂಡಸಿ ಸೂಕ್ತ ಬಂದೋಬಸ್ತ್ ಒದಗಿಸಿದರು. ಶಂಕರಗೌಡ ಪಾಟೀಲ, ತಾಪಂ ಸದಸ್ಯ ಶ್ರೀಶೈಲ ಕಬ್ಬಿನ, ರಮೇಶ ಮಸಬಿನಾಳ, ಮಹಾಂತೇಶ ವಂದಾಲ, ಸೋಮು ಹಿರೇಮಠ, ಕುಮಾರ ಜೋಗೂರ, ಬಸವರಾಜ ಹಳಿಮನಿ, ಕಲ್ಲಪ್ಪ ಭಾವಿಮನಿ, ವಿದ್ಯಾದರ ಸಂಗೋಗಿ, ಚಂದ್ರಕಾಂತ ಪ್ಯಾಟಿ, ಭೀಮರಾಯ ಬಗಲಿ, ಕಾಶಿನಾಥ ಕನ್ನೊಳ್ಳಿ, ಚಂದ್ರಶೇಖರ ಗಣಜಲಿ, ಎಚ್.ಆರ್. ತಾಂಬೆ, ಮೌಲಾಲಿ ಮಣೂರ, ಹಾಸಿಂಪೀರ ಹಚ್ಯಾಳ ಸೇರಿ ಇತರರು ಇದ್ದರು.