ಅವಳಿ ಜಿಲ್ಲೆ ನಾಲೆಗಳಿಗೆ ನೀರು ಹರಿಸಲು ಆಗ್ರಹ

ವಿಜಯಪುರ: ಆಲಮಟ್ಟಿ ಜಲಾಶಯದ ನೀರನ್ನು ನಾರಾಯಣಪುರ ಜಲಾಶಯಕ್ಕೆ ಹರಿಸದೇ ಅವಳಿ ಜಿಲ್ಲೆಯ ನಾಲೆಗಳಿಗೆ ಹರಿಸಲು ಒತ್ತಾಯಿಸಿ ವಿಧಾನ ಪರಿಷತ್ ಸದಸ್ಯ ಹಣಮಂತ ನಿರಾಣಿ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಶುಕ್ರವಾರ ಜಿಲ್ಲಾಧಿಕಾರಿ ಎಸ್.ಬಿ. ಶೆಟ್ಟಣ್ಣವರಗೆ ಮನವಿ ಸಲ್ಲಿಸಿದರು.

ಬಳಿಕ ಮಾತನಾಡಿದ ನಿರಾಣಿ ಅವರು, ಅವಳಿ ಜಿಲ್ಲೆ ರೈತರು ಜಲಾಶಯಕ್ಕಾಗಿ ಸಾಕಷ್ಟು ಜಮೀನು ನೀಡಿದ್ದೇವೆ. ಅದಕ್ಕಾಗಿ ಆಸ್ತಿ-ಪಾಸ್ತಿ ಕಳೆದುಕೊಂಡಿದ್ದೇವೆ. ಈ ಭಾಗ ನೀರಾವರಿಯಾಗಲಿದೆ ಎಂಬ ಕಾರಣಕ್ಕೆ ಸಾಕಷ್ಟು ತ್ಯಾಗ ಮಾಡಿದ್ದೇವೆ. ಹೀಗಾಗಿ ಮೊದಲು ಅವಳಿ ಜಿಲ್ಲೆ ರೈತರಿಗೆ ನೀರು ಕೊಡಬೇಕು. ಬಳಿಕ ಹೆಚ್ಚುವರಿ ನೀರು ಹರಿಸಲು ಆದ್ಯತೆ ನೀಡಬೇಕೆಂದರು.

2016-17ರ ಸ್ಥಿತಿ ಮರುಕಳಿಸದಿರಲಿ

ಈ ಭಾಗದ ರೈತರು ನಾಲೆಗಳಿಗೆ ಜಮೀನು ನೀಡಿದ್ದಾರೆ. ಹಿನ್ನೀರಿನಲ್ಲಿ ಗ್ರಾಮಗಳು ಮುಳುಗಡೆಯಾಗಿ ಸಂತ್ರಸ್ತರಾಗಿದ್ದೇವೆ. ಅಳಿದುಳಿದ ಜಮೀನುಗಳಲ್ಲಿ ವ್ಯವಸಾಯ ಮತ್ತು ಕೂಲಿ ಮಾಡಿಕೊಂಡು ಉಪಜೀವನ ನಡೆಸುತ್ತಿದ್ದೇವೆ. ಆಲಮಟ್ಟಿ ಜಲಾಶಯದಿಂದ ಅತೀ ಹೆಚ್ಚು ನೀರನ್ನು ಹರಿಬಿಡುವುದರಿಂದ ಕೃಷ್ಣಾ ಮತ್ತು ಘಟಪ್ರಭಾ ನದಿಗಳ ದಡದಲ್ಲಿರುವ ಗ್ರಾಮಗಳ ಸಂತ್ರಸ್ತರು ಮತ್ತು ರೈತರಾದ ನಮಗೆ ಮತ್ತು ಜಾನುವಾರುಗಳಿಗೆ ಬೇಸಿಗೆ ಕಾಲಕ್ಕೆ ಕುಡಿಯುವ ನೀರಿನ ತೀವ್ರ ತೊಂದರೆ ಆಗುತ್ತದೆ. 2016-17 ನೇ ಸಾಲಿನಲ್ಲಿ ಆದ ಕೆಟ್ಟ ಪರಿಸ್ಥಿತಿಯನ್ನು ಮತ್ತೊಮ್ಮೆ ಅನುಭವಿಸಬೇಕಾದ ಲಕ್ಷಣಗಳು ಕಾಣುತ್ತಿವೆ. ಹೀಗಾಗಿ ಈಗಲೇ ನೀರು ಹಿಡಿದಿಟ್ಟು ಅವಳಿ ಜಿಲ್ಲೆ ರೈತರಿಗೆ ಪೂರೈಸಬೇಕೆಂದರು.

ಹೆಚ್ಚುತ್ತಿರುವ ಭೀತಿ

ಕಳೆದ ವರ್ಷ ನ. 2 ಕ್ಕೆ ಜಲಾಶಯದಲ್ಲಿ ಸುಮುದ್ರ ಸಮಪಾತಳಿಯಿಂದ 519.60 ಮೀಟರ್​ನಷ್ಟು ಇದ್ದ ನೀರು ಇಂದು 515.83 ಮೀಟರ್ ಇದೆ. (ಅಂದರೆ 03.77 ಮೀ ಎತ್ತರ) ಒಟ್ಟು 123.081 ಟಿಎಂಸಿ ನೀರಿನ ಸಾಮರ್ಥ್ಯ ಹೊಂದಿದ್ದ ಜಲಾಶಯದಲ್ಲಿ ಈಗ 71.188 ಟಿಎಂಸಿ ಯಷ್ಟು ನೀರಿದೆ.(ಅಂದರೆ 51.893 ಟಿ.ಎಂ.ಸಿ ಕಡಿಮೆ) ಇಂಥ ಸಂದರ್ಭ ಪ್ರತಿ ನಿತ್ಯವೂ 12176 ಕ್ಯೂಸೆಕ್ ನೀರನ್ನು ಜಲಾಶಯದಿಂದ ಹೊರಬಿಡುತ್ತಿರುವ ಪರಿಣಾಮವಾಗಿ ಕೆಲವೇ ದಿನಗಳಲ್ಲಿ ಜಲಾಶಯದ ಹಿನ್ನೀರಿನ ಅವಳಿ ಜಿಲ್ಲೆಯ ರೈತರು ಹಾಗೂ ಸಂತ್ರಸ್ತರು, ಜಾನುವಾರುಗಳು ಭೀಕರ ಜಲಕ್ಷಾಮವನ್ನು ಎದುರಿಸಬೇಕಾಗಬಹುದೆಂಬ ಕರಾಳ ಭೀತಿ ಕಾಡುತ್ತಿದೆ. ಬಾಗಲಕೋಟೆ ಮತ್ತು ವಿಜಯಪುರ ಮಹಾನಗರಕ್ಕೂ ನೀರಿನ ಕೊರತೆ ಕಾಡಲಿದೆ ಎಂದರು.

ವಾರಾಬಂದಿ ಲೆಕ್ಕಕ್ಕಿಲ್ಲ

ಕಳೆದ ವರ್ಷದಂತೆ 14 ದಿನಗಳ ಕಾಲ ಜಲಾಶಯದಿಂದ ನೀರು ಬಿಡುಗಡೆ ಮಾಡಿ 12 ದಿನಗಳ ಕಾಲ ಸ್ಥಗಿತಗೊಳಿಸುವ ವಾರಾಬಂದಿ ನಿಯಮ ಪಾಲಿಸುವ ಬದಲು 14 ದಿನಗಳ ಕಾಲ ನೀರು ಬಿಟ್ಟು 2 ದಿನ ಮಾತ್ರ ಸ್ಥಗಿತಗೊಳಿಸಿ ಮತ್ತೆ 14 ದಿನ ನೀರು ಬಿಡಲಾಗುತ್ತಿದೆ ಎಂದು ತಿಳಿದುಬಂದಿದೆ. ಕೃಷ್ಣಾ ಜಲಭಾಗ್ಯ ನಿಗಮದ ಅಧಿಕಾರಿಗಳು ವಾರಾಬಂದಿ ಅಂಶಗಳನ್ನು ಬದಿಗೊತ್ತಿ ನೀರು ಹರಿಬಿಡುತ್ತಿರುವ ಪರಿಣಾಮ ಬರುವ ಬೇಸಿಗೆ ಅವಧಿಯಲ್ಲಿ ಬಾಗಲಕೋಟ ಮತ್ತು ವಿಜಯಪುರ ಜಿಲ್ಲೆಯ ಕೃಷ್ಣಾ ಮತ್ತು ಘಟಪ್ರಭಾ ನದಿ ದಡದ ರೈತರು ಮತ್ತು ಸಾರ್ವಜನಿಕರಿಗೆ ಹಾಗೂ ಜನ ಜಾನುವಾರುಗಳು ನೀರಿನ ತೊಂದರೆ ಅನುಭವಿಸಬೇಕಾದ ಪರಿಸ್ಥಿತಿ ಸೃಷ್ಟಿಯಾಗಲಿದೆ.

ಕೃಷ್ಣಾ ಹಾಗೂ ಘಟಪ್ರಭಾ ನದಿಗಳ ಹಿನ್ನೀರಿನ ಮೇಲೆ ವಿಜಯಪುರ ಹಾಗೂ ಬಾಗಲಕೋಟೆಯಂಥ ಬೃಹತ್ ನಗರಗಳು ಸೇರಿದಂತೆ ಅವಳಿ ಜಿಲ್ಲೆಯ ಇನ್ನುಳಿದ ಪಟ್ಟಣಗಳು ಹಾಗೂ 43 ಬಹುಹಳ್ಳಿಯ ಕುಡಿಯುವ ನೀರಿನ ಯೋಜನೆಗಳು ಅವಲಂಬಿತವಾಗಿರುತ್ತವೆ. ಜಲಾಶಯದಲ್ಲಿ ಶೇ.25 ಟಿಎಂಸಿ ಯಷ್ಟು ಈಗಾಗಲೇ ಹೂಳು ತುಂಬಿರುವುದರಿಂದ ತೋರಿಕೆಯಷ್ಟು ನೀರಿನ ಸಂಗ್ರಹ ಇರುವುದಿಲ್ಲ. ಗಲಗಲಿ ಹಾಗೂ ಕೋರ್ತಿ ಕೋಲ್ಹಾರ ಬ್ಯಾರೇಜ್​ಗಳನ್ನು ಎತ್ತರಿಸುವ ಕಾಮಗಾರಿ ಪ್ರಾರಂಭವಾಗಲಾರದೆ ಇರುವುದು ನೀರಿನ ಸಮಸ್ಯೆ ಉಲ್ಬಣಗೊಳ್ಳುವಂತೆ ಮಾಡಿದೆ. ಆದ್ದರಿಂದ ಆಲಮಟ್ಟಿ ಜಲಾಶಯದಿಂದ ಹರಿಸುತ್ತಿರುವ ಹೆಚ್ಚುವರಿ ನೀರನ್ನು ಈ ಕೂಡಲೇ ಸ್ಥಗಿತಗೊಳಿಸಬೇಕೆಂದು ನಿರಾಣಿ ಒತ್ತಾಯಿಸಿದರು.

ಮುಖಂಡರಾದ ಮುತ್ತು ದೇಸಾಯಿ, ಶಶಿಕಾಂತಗೌಡ ಪಾಟೀಲ, ಗುರುಲಿಂಗಪ್ಪಾ ಅಂಗಡಿ, ತಿಮ್ಮಣ್ಣ ಅಮಲಜರಿ, ಶಿವನಗೌಡ ಪಾಟೀಲ, ಸುರೇಶ ಬಿರಾದಾರ, ಮಲ್ಲಪ್ಪಾ ಸಂಬೋಗಿ, ಸಂಗಪ್ಪಾ ಕಟಗೇರಿ, ರಾಮ್ಮಣ ಕಾಳಪಗೋಳ, ರಾಮನಗೌಡ ಬಸುರಡ್ಡಿ, ಮುತ್ತು ಭೋರಜಿ, ಲಕ್ಷ್ಮಣ ದೊಡ್ಡಮನಿ, ಸುಭಾಸ ಬೂಸರೆಡ್ಡಿ ಸೇರಿದಂತೆ ಅವಳಿ ಜಿಲ್ಲೆಗಳ ರೈತ ಮುಖಂಡರು ಉಪಸ್ಥಿತರಿದ್ದರು.