ಕಾರ್ಖಾನೆಗಳ ವಿರುದ್ಧ ರೈತರ ಪ್ರತಿಭಟನೆ

ವಿಜಯಪುರ: 2017-18ನೇ ಸಾಲಿನ ಕಬ್ಬಿನ ಬಾಕಿ ಹಣ ಪಾವತಿಗೆ ಆಗ್ರಹಿಸಿ ಅಖಂಡ ಕರ್ನಾಟಕ ರೈತ ಸಂಘದ ಪದಾಧಿಕಾರಿಗಳು ಮಂಗಳವಾರ ಜಿಲ್ಲಾಡಳಿತ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಬಳಿಕ ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರಿಗೆ ಮನವಿ ಸಲ್ಲಿಸಿ, ಕಬ್ಬಿನ ಬಾಕಿ ಹಣ ಟನ್‌ಗೆ ಇನ್ನೂ 300 ರೂ. ಬರಬೇಕು. ಇಲ್ಲದಿದ್ದರೆ ಸಕ್ಕರೆ ಕಾರ್ಖಾನೆಗೆ ಬೀಗ ಜಡಿದು ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳುವುದಾಗಿ ತಿಳಿಸಿದರು.
ರಾಜ್ಯ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿ, 2017-18ರ ಸಾಲಿನಲ್ಲಿಯ ಕಬ್ಬಿಣ ಬಾಕಿ ಹಣ ಪ್ರತಿ ಟನ್‌ಗೆ 300 ರೂ. ಗಳಂತೆ ಸಕ್ಕರೆ ಕಾರ್ಖಾನೆಯವರು ಬಾಕಿ ಉಳಿಸಿಕೊಂಡಿದ್ದಾರೆ. ಆ ಹಣಕ್ಕೆ ಬಡ್ಡಿಸಹಿತ ಕೂಡಲೇ ಸಂದಾಯವಾಗಬೇಕು. ಜೆಮ್ ಸಕ್ಕರೆ ಕಾರ್ಖಾನೆ, ಸದಾಶಿವ ಸಕ್ಕರೆ ಕಾರ್ಖಾನೆ, ಇಐಡಿ ಪ್ಯಾರಿ, ಎಸ್.ಆರ್. ಪಾಟೀಲ ಬಾಡಗಂಡಿ ಸಕ್ಕರೆ ಕಾರ್ಖಾನೆಯವರು ಮೊದಲು ಕಬ್ಬು ಕೊಟ್ಟ ರೈತರಿಗೆ ಪ್ರತಿಟನ್ ಕಬ್ಬಿಗೆ 2500 ರೂ.ಗಳಂತೆ ಹಣ ಸಂದಾಯ ಮಾಡಿದ್ದಾರೆ. 2ನೇ ತಿಂಗಳಿನಲ್ಲಿ ಕೊಟ್ಟ ಕಬ್ಬಿಗೆ 2200 ರೂ. ಗಳಂತೆ ಹಣ ಸಂದಾಯ ಮಾಡಿದ್ದಾರೆ. ಈ ರೀತಿ ಇಬ್ಬಗೆಯ ನೀತಿ ಅನುಸರಿಸಿದ್ದಾರೆ. ಉಳಿದ 300 ರೂ.ಗಳನ್ನು ನಂತರದಲ್ಲಿ ಕೊಡುವದಾಗಿ ಹೇಳಿ ರೈತರಿಂದ ಕಬ್ಬು ಖರೀದಿಸಿದ್ದಾರೆ. ಆದರೆ 2 ವರ್ಷ ಮೇಲ್ಪಟ್ಟರು ಉಳಿದ ಬಾಕಿ ಹಣ ನೀಡಿಲ್ಲ. ಅವಳಿ ಜಿಲ್ಲೆಯ ಎಲ್ಲ ಸಕ್ಕರೆ ಕಾರ್ಖಾನೆಯವರು ಹಳ್ಳಿಗಳಿಗೆ ಹೋಗಿ ರೈತರಿಗೆ ಭೇಟಿ ನೀಡಿ ಫುಸಲಾಯಿಸಿ ಕಬ್ಬು ಬೆಳೆಯಲು ಹೇಳಿದ್ದಾರೆ. ರೈತರು ಎಷ್ಟೇ ಕಬ್ಬು ಬೆಳೆದರೂ ಕೇಳಿದ ಬೆಂಬಲ ಬೆಲೆಗೆ ಖರೀದಿಸುವದಾಗಿ ಹೇಳಿ ಕಬ್ಬು ಬೆಳೆಯಲು ಪ್ರಚೋದನೆ ನೀಡಿದ್ದರು. ಕಾರ್ಖಾನೆಯವರನ್ನು ನಂಬಿದ ರೈತರು ಸಾಕಷ್ಟು ಕಬ್ಬು ಬೆಳೆದು ಕಾರ್ಖಾನೆಯವರಿಗೆ ಕೊಟ್ಟಿದ್ದಾರೆ. ಆದರೆ ಈಗ ಕಾರ್ಖಾನೆಯವರು ಕೊಟ್ಟ ಮಾತು ಉಳಿಸಿಕೊಳ್ಳದೆ ತಮ್ಮ ಮನಸ್ಸಿಗೆ ಬಂದಂತೆ ನಡೆದುಕೊಳ್ಳುತ್ತಿದ್ದಾರೆ. ಇದರಿಂದ ಕಬ್ಬು ಬೆಳೆದ ರೈತರಿಗೆ ತುಂಬಾ ತೊಂದರೆಯಾಗಿದೆ ಎಂದರು.
ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸದಾಶಿವ ಬರಟಗಿ ಮಾತನಾಡಿ, ಮೊದಲೇ ಬರಗಾಲದಿಂದ ತತ್ತರಿಸಿದ ರೈತರಿಗೆ ಕಾರ್ಖಾನೆಯವರಿಂದ ಮತ್ತಷ್ಟು ತೊಂದರೆ ಅನುಭವಿಸುವಂತಾಗಿದೆ. ಬಹುತೇಕ ಎಲ್ಲ ಸಕ್ಕರೆ ಕಾರ್ಖಾನೆಗಳು ಮಂತ್ರಿಗಳಿದ್ದೇ ಆಗಿರುವುದರಿಂದ ಅವರಿಗೆ ಹೇಳುವವರು, ಕೇಳುವವರು ಇಲ್ಲದಂತಾಗಿದೆ. ಕಬ್ಬು ಬೆಳೆದ ರೈತರಿಗೆ ದ್ರೋಹ ಮಾಡಿದ್ದಾರೆ. ಆದ್ದರಿಂದ ಬರಬೇಕಾದ ಬಾಕಿ ಹಣ ಪಾವತಿಸಿ ಜಿಲ್ಲಾಡಳಿತ ಕಟ್ಟುನಿಟ್ಟಿನ ಆದೇಶ ಹೊರಡಿಸಬೇಕು. ಇಲ್ಲವಾದಲ್ಲಿ ಹೋರಾಟ ಅನಿವಾರ್ಯ ಎಂದರು.
ಮುಖಂಡರಾದ ಹೊನಕೇರಪ್ಪ ತೆಲಗಿ, ಮಾಚಪ್ಪ ಹೊರ್ತಿ, ಚಂದ್ರಾಮ ತೆಗ್ಗಿ, ಮೆಹಬೂಬ ಅವಟಿ, ಶಿವಪ್ಪ ಮಂಗೊಂಡ, ಬಾಬುಲಾಲ ಖೋಜಗೀರ, ಬಸವರಾಜ ಹೆಬ್ಬಾಳ, ಗುರು ಕೋಟ್ಯಾಳ, ನಂದಬಸಪ್ಪ ಬಿರಾದಾರ, ಶೆಟ್ಟೆಪ್ಪ ಲಮಾಣಿ, ಮೋತಿಲಾಲ ಲಮಾಣಿ, ಶಂಕರ ಲಮಾಣಿ, ಗುರುಗೌಡ ಬಿರಾದಾರ ಸೇರಿದಂತೆ ಇತರರಿದ್ದರು.

Leave a Reply

Your email address will not be published. Required fields are marked *