22ಕ್ಕೆ ಗಣಿ ಇಲಾಖೆ ಎದುರು ಧರಣಿ

ವಿಜಯಪುರ: ಅಕ್ರಮ ಗಣಿಗಾರಿಕೆ ತಡೆಗೆ ಕಳೆದ ಐದು ವರ್ಷಗಳಿಂದ ಮನವಿ ಮಾಡುತ್ತ ಬಂದರೂ ಕ್ರಮ ಕೈಗೊಳ್ಳದ ಅಧಿಕಾರಿ ವರ್ಗದ ಮೇಲೆ ಆಕ್ರೋಶಗೊಂಡ ಗ್ರಾಮಸ್ಥರ ನಿಯೋಗವೊಂದು ಸೋಮವಾರ ಅಪರ ಜಿಲ್ಲಾಧಿಕಾರಿ ಎಚ್.ಪ್ರಸನ್ನ ಅವರನ್ನು ಭೇಟಿ ಮಾಡಿತು.
ಬಳೂತಿ ಗ್ರಾಮದ ವ್ಯಾಪ್ತಿಯಲ್ಲಿ ಅಕ್ರಮ ಗಣಿಗಾರಿಕೆ ತಡೆಯುತ್ತಿದ್ದರೂ ಸಂಬಂಧಿಸಿದ ಅಧಿಕಾರಿ ಕಣ್ಣಿದ್ದು ಕುರುಡಾಗಿದ್ದಾರೆ. ಈ ಬಗ್ಗೆ ಹಲವು ಬಾರಿ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಹೀಗಾಗಿ ಜಿಲ್ಲಾಧಿಕಾರಿಗಳು ತ್ವರಿತವಾಗಿ ಕ್ರಮ ಕೈಗೊಳ್ಳಬೇಕೆಂದು ನಿಯೋಗ ಮನವಿ ಸಲ್ಲಿಸಿತು.
ನೇತೃತ್ವ ವಹಿಸಿದ್ದ ಬಸವರಾಜ ಹಳ್ಳೂರ ಮಾತನಾಡಿ, ಬಸವನಬಾಗೇವಾಡಿ ತಾಲೂಕಿನ ಹಣಮಾಪುರ, ಬಳೂತಿ, ಮಟ್ಟಿಹಾಳ ಗ್ರಾಮಗಳ ಜಮೀನುಗಳು ಒಂದಕ್ಕೊಂದು ಹೊಂದಿಕೊಂಡಿವೆ. ಬಳೂತಿ ಗ್ರಾಮದ ಸರಹದ್ದಿಯಲ್ಲಿ ಬರುವ ರಿ.ಸ.ನಂ.174 ಹಾಗೂ 175 ರಲ್ಲಿ ಅಕ್ರಮವಾಗಿ ಗಣಿಗಾರಿಕೆ ನಡೆಯುತ್ತಿದೆ. 2014 ರಿಂದಲೂ ಈ ಗಣಿಗಾರಿಕೆ ನಡೆಯುತ್ತಲೇ ಇದೆ. ಈ ಗಣಿಗಾರಿಕೆಯ ಪರವಾನಿಗೆ ರದ್ದುಗೊಂಡಿದ್ದರೂ ಅಕ್ರಮವಾಗಿ ಮತ್ತೆ ಆರಂಭವಾಗಿದೆ. ಈ ಕಾರಣದಿಂದಾಗಿ ಹಣಮಾಪುರ, ಮಟ್ಟಿಹಾಳ, ಬಳೂತಿ ಗ್ರಾಮಗಳ ಅಂದಾಜು 400-500 ಎಕರೆ ಜಮೀನು ಬೆಳೆ ಹಾನಿಯಾಗಿ ರೈತರು ಭಾರಿ ಸಂಕಷ್ಟದಲ್ಲಿದ್ದಾರೆ ಎಂದು ಗ್ರಾಮಸ್ಥರ ಸಮಸ್ಯೆ ವಿವರಿಸಿದರು.
ಗಣಿಗಾರಿಕೆಯಿಂದ ಉದ್ಭವಿಸುವ ಧೂಳಿನಿಂದ ಬೆಳೆ ಬರುತ್ತಿಲ್ಲ. ಇನ್ನೊಂದೆಡೆ ಕುಡಿಯುವ ನೀರಿಗೂ ಧೂಳು ಬಿದ್ದು ಕುಡಿಯಲು ಬಾರದಂತಾಗಿದೆ. ಸಮೀಪದಲ್ಲಿಯೇ ಆಶ್ರಯ ಯೋಜನೆಯ ಮನೆಗಳು ಇದ್ದು ಅವರು ಮಾಡುವ ಸಿಡಿಮದ್ದು ಸ್ಪೋಟದಿಂದಾಗಿ ಮನೆಗಳು ಬಿರಕು ಬಿಟ್ಟಿವೆ. ಮನೆಯಲ್ಲಿ ಮಾಡಿದ ಅಡುಗೆಯಲ್ಲಿ ಸಹಿತ ಧೂಳು ತುಂಬಿ ಊಟ ಮಾಡಲು ಬರದಂಥ ಸ್ಥಿತಿ ನಿರ್ಮಾಣವಾಗಿದೆ ಎಂದು ದೂರಿದರು.
ಮುಖಂಡರಾದ ಬಿ.ಡಿ. ಹಳ್ಳೂರ, ಎನ್.ಡಿ. ಹಳ್ಳೂರ, ಇಸ್ಮಾಯಿಲ್ ಹೊನ್ಯಾಳ, ಎಸ್.ಡಿ. ಹಳ್ಳೂರ, ಎಸ್.ಎಸ್. ಹಳ್ಳೂರ, ನಿಂಗಪ್ಪ ಮಾದರ, ಎಸ್.ಆರ್. ಹಿರೇಮಠ, ಬಿ.ಡಿ. ನಾರಿಯರ್, ಶೇಖಪ್ಪ ಮಳೆಗಾಂವಿ ಇತರರಿದ್ದರು.

Leave a Reply

Your email address will not be published. Required fields are marked *