ತ್ವರಿತವಾಗಿ ವೇತನ ಪಾವತಿಗೆ ಆಗ್ರಹ

ವಿಜಯಪುರ: ವೇತನ ಪಾವತಿಗೆ ಆಗ್ರಹಿಸಿ ಪಪೂ ಕಾಲೇಜಿನ ಪ್ರಾಚಾರ್ಯರು ಹಾಗೂ ಸಿಬ್ಬಂದಿ ರಾಜ್ಯ ಪದವಿ ಪೂರ್ವ ಮಹಾವಿದ್ಯಾಲಯಗಳ ನೌಕರರ ಸಂಘದ ನೇತೃತ್ವ ಮಂಗಳವಾರ ಪ್ರತಿಭಟನೆ ನಡೆಸಿ ಪಪೂ ಶಿಕ್ಷಣ ಇಲಾಖೆ ಉಪನಿರ್ದೇಶಕ ಜೆ.ಎಸ್. ಪೂಜೇರಿಗೆ ಮನವಿ ಸಲ್ಲಿಸಿದರು.
ಅನುದಾನಿತ ಪದವಿ ಪೂರ್ವ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಾಚಾರ್ಯರು ಹಾಗೂ ಸಿಬ್ಬಂದಿ ವೇತನ ಜೂನ್ – 2019 ರಿಂದ ಆಗಸ್ಟ್ ತಿಂಗಳು ಸಮೀಪಿಸಿದರೂ ಬಿಡುಗಡೆಯಾಗಿಲ್ಲ. ಇದರಿಂದ ನೌಕರರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ದೈನಂದಿನ ಚಟುವಟಿಕೆಗೆ ಸಾಲ ಎತ್ತುವಳಿ ಮಾಡಬೇಕಿದೆ. ಕುಡುಂಬ ನಿರ್ವಹಣೆಗೆ ಸಂಕಷ್ಟ ಪಡುತ್ತಿದ್ದು ಹಬ್ಬ ಹರಿದಿನಗಳು ಬಂದರೆ ಬಡ್ಡಿ ದರದಲ್ಲಿ ಸಾಲ ಪಡೆಯಬೇಕಿದೆ. ಹೀಗಾಗಿ ಕೂಡಲೇ ವೇತನ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದರು.
ಮುಂಬರುವ ದಿನಗಳಲ್ಲಿ ಭಾರತೀಯ ಸಂಸ್ಕೃತಿಯ ಪ್ರಮುಖ ಆಚರಣೆಯಾದ ನಾಗರ ಪಂಚಮಿ ಬರುತ್ತಿದೆ. ಎಲ್ಲರ ಮನೆಯಲ್ಲೂ ಈ ಹಬ್ಬಕ್ಕೆ ಎಲ್ಲಿಲ್ಲದ ಪ್ರಾಮುಖ್ಯತೆ ಇದೆ. ಈ ಹಬ್ಬ ಆಚರಿಸಲು ಕೈಯಲ್ಲಿ ಬಿಡಿಗಾಸು ಇಲ್ಲದೇ ನೌಕರರು ಚಿಂತಾಕ್ರಾಂತರಾಗಿದ್ದಾರೆ ಎಂದು ನೌಕರರೊಬ್ಬರು ತಮ್ಮ ಅಳಲು ತೋಡಿಕೊಂಡರು.
ಮಾರ್ಚ್ ಹಾಗೂ ಜೂನ್-2019 ರ ಮೌಲ್ಯಮಾಪನದ ಕೆಲವೇ ವಿಷಯಗಳನ್ನು ಹೊರತುಪಡಿಸಿ ಬಹುತೇಕ ವಿಷಯಗಳ ಮೌಲ್ಯಮಾಪಕರಿಗೆ ಸಂಭಾವನೆ ಸಂದಾಯವಾಗಿಲ್ಲ. ಆದ್ದರಿಂದ ನೌಕರ ವರ್ಗದವರು ಆರ್ಥಿಕ ಸಂಕಷ್ಠದಲ್ಲಿ ಇರುವರು. ಈ ಎಲ್ಲ ಅಂಶಗಳನ್ನು ಪರಿಗಣಿಸಿ ತ್ವರಿತವಾಗಿ ವೇತನ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
ಸಂಘದ ಜಿಲ್ಲಾ ಗೌರವಾಧ್ಯಕ್ಷ ಎ.ಎಸ್. ಪಾಟೀಲ, ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಎಸ್. ಗೌರಿ, ಪದಾಧಿಕಾರಿಗಳಾದ ಎಸ್.ಬಿ. ಹಿರೇಮಠ, ಡಾ.ಜಿ.ಡಿ. ಅಕಮಂಚಿ, ಎಸ್.ಬಿ. ಪಾಟೀಲ ಮುಂತಾದವರು ಇದ್ದರು.

Leave a Reply

Your email address will not be published. Required fields are marked *