ಖಾದಿ ಮಂಡಳಿಗಳ ಸಾಲಮನ್ನಾ ವಿಶ್ವಾಸ

ಶಾಸಕ ದೇವಾನಂದ ಚವಾಣ್ ಹೇಳಿಕೆ >>

ವಿಜಯಪುರ: ರಾಷ್ಟ್ರದ ಸ್ವಾಭಿಮಾನದ ಪ್ರತೀಕವಾಗಿರುವ ಖಾದಿ ಗ್ರಾಮೋದ್ಯೋಗ ಚಟುವಟಿಕೆಗಳಿಗೆ ಉತ್ತೇಜನ ನೀಡುವ ಅವಶ್ಯಕತೆಯಿದೆ. ಈ ನಿಟ್ಟಿನಲ್ಲಿ ಈ ಬಾರಿಯೂ ಸರ್ಕಾರ ಖಾದಿ ಗ್ರಾಮೋದ್ಯೋಗ ಮಂಡಳಿಗಳ ಸಾಲಮನ್ನಾ ಮಾಡುವ ವಿಶ್ವಾಸವಿದೆ ಎಂದು ನಾಗಠಾಣ ಶಾಸಕ ದೇವಾನಂದ ಚವಾಣ್ ಹೇಳಿದರು.

ಇಲ್ಲಿನ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಖಾದಿ ಗ್ರಾಮೋದ್ಯೋಗ ಮಂಡಳಿಯಿಂದ ಸೋಮವಾರ ಆಯೋಜಿಸಿರುವ ‘ರಾಜ್ಯಮಟ್ಟದ ಖಾದಿ ಉತ್ಸವ-2018’ರ ಉದ್ಘಾಟನೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಈ ಹಿಂದಿನ ಸರ್ಕಾರ ಗ್ರಾಮೋದ್ಯೋಗ ಆಧಾರಿತ ಕಾರ್ಮಿಕರ ಸಾಲಮನ್ನಾ ಮಾಡಿತ್ತು. ಅದೇ ಮಾದರಿಯಲ್ಲಿ ಈ ಬಾರಿಯೂ ಸ್ಥಳೀಯವಾಗಿರುವ ಮಂಡಳಿಗಳ ಸಾಲಮನ್ನಾ ಮಾಡುವ ಸಂಪೂರ್ಣ ವಿಶ್ವಾಸವಿದೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿಗಳ ಗಮನಕ್ಕೂ ತರಲಾಗುವುದು ಎಂದರು.

ಖಾದಿ ದೇಶಾಭಿಮಾನದ ಪ್ರತೀಕ. ಗ್ರಾಮೋದ್ಯೋಗಗಳ ಉತ್ತೇಜನ ನೀಡುವ ಮೂಲಕ ಸ್ವಾವಲಂಬಿ ಬದುಕಿಗೆ ಪ್ರೋತ್ಸಾಹಿಸುವುದು ಮಹಾತ್ಮ ಗಾಂಧೀಜಿ ಅವರ ಉದ್ದೇಶವಾಗಿತ್ತು. ಖಾದಿ ಮೂಲಕ ದೇಶವನ್ನು ಆರ್ಥಿಕವಾಗಿ ಬಲಿಷ್ಠಗೊಳಿಸುವ ಅವರ ಕನಸು ನನಸಾಗಿಸುವ ನಿಟ್ಟಿನಲ್ಲಿ ಎಲ್ಲರೂ ಶ್ರಮಿಸಬೇಕು. ಮಹಾತ್ಮ ಗಾಂಧಿ ಅವರ ಕನಸು ನನಸಾಗಿಸುವ ನಿಟ್ಟಿನಲ್ಲಿ ಖಾದಿಮೇಳಗಳು ಮಹತ್ವದ ಪಾತ್ರ ವಹಿಸುತ್ತಿವೆ ಎಂದರು.

ಖಾದಿ ಮಾರಾಟ ಹಾಗೂ ಪ್ರದರ್ಶನ ಮಳಿಗೆ ಉದ್ಘಾಟಿಸಿದ ಜಿಪಂ ಅಧ್ಯಕ್ಷೆ ನೀಲಮ್ಮ ಮೇಟಿ ಮಾತನಾಡಿ, ಖಾದಿ ಎಂದಾಕ್ಷಣ ನೆನಪಿಗೆ ಬರುವುದು ಬಾಪೂಜಿ. ಬೇಸಿಗೆ, ಮಳೆಗಾಲ ಹಾಗೂ ಚಳಿಗಾಲ ಎಲ್ಲ ಕಾಲಕ್ಕೂ ಸೂಕ್ತವಾಗುವ ಖಾದಿ ಬಟ್ಟೆ ಅತ್ಯಂತ ವೈಶಿಷ್ಠೃಪೂರ್ಣ. ಖಾದಿ ಬಟ್ಟೆಯ ಮಹತ್ವ ಅರಿತು ಪ್ರತಿಯೊಬ್ಬರೂ ಅದನ್ನು ಬಳಸುವ ಮೂಲಕ ಉತ್ತೇಜನ ನೀಡಬೇಕು ಎಂದರು.

ಕೆಕೆಜಿಎಸ್ ಅಧ್ಯಕ್ಷ ಬಾಪುಗೌಡ ಪಾಟೀಲ ಶೇಗುಣಸಿ ಮಾತನಾಡಿ, ಖಾದಿ ಉತ್ಪನ್ನಗಳಿಗೆ ಸರ್ಕಾರದಿಂದ ಪ್ರೋತ್ಸಾಹ ದೊರಕುತ್ತಿದೆ. ಆದರೆ, ಅದರ ಪ್ರಮಾಣ ಮತ್ತಷ್ಟು ಹೆಚ್ಚಾಗಬೇಕು. ಅದಕ್ಕಾಗಿ ಸರ್ಕಾರ ಈ ಮೊದಲಿನಂತೆಯೇ ರಿಬೇಟ್ ನೀಡುವ ನೀತಿಯನ್ನು ಮುಂದುವರೆಸಿದರೆ ಖಾದಿ ಗ್ರಾಮೋದ್ಯೋಗ ಮಂಡಳಿಗಳ ಪ್ರಗತಿಗೆ ಪೂರಕವಾಗಲಿದೆ. ಈ ನಿಟ್ಟಿನಲ್ಲಿ ಸರ್ಕಾರ ಚಿಂತನೆ ನಡೆಸಿ ಹಳೆಯ ಪದ್ಧತಿಯಂತೆ ಮಾರಾಟದ ಮೇಲೆ ರಿಬೇಟ್ ನೀಡಬೇಕು ಎಂದರು.

ಖಾದಿ ಗ್ರಾಮೋದ್ಯೋಗ ಮಂಡಳಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಯ ವಿಭಯ ಸ್ವಾಮಿ ಮಾತನಾಡಿ, ಖಾದಿ ಗ್ರಾಮೋದ್ಯೋಗಕ್ಕೆ ಸರ್ಕಾರದ ವತಿಯಿಂದ ಹೆಚ್ಚಿನ ಪ್ರೋತ್ಸಾಹ ನೀಡಲಾಗುತ್ತಿದೆ. ಖಾದಿಗೆ ವಿಶೇಷ ಸಹಾಯ ಧನ ನೀಡುವ ರಾಜ್ಯಗಳಲ್ಲಿ ಕರ್ನಾಟಕವೂ ಒಂದು. ಗುಜರಾತ್, ಕೇರಳ ಹಾಗೂ ಕರ್ನಾಟಕದಲ್ಲಿ ಮಾತ್ರ ಸರ್ಕಾರದ ವತಿಯಿಂದ ಖಾದಿಗೆ ಪ್ರೋತ್ಸಾಹ ನೀಡಲಾಗುತ್ತಿದೆ ಎಂದರು.

ಮೇಯರ್ ಶ್ರೀದೇವಿ ಲೋಗಾಂವಿ, ಜಿಪಂ ಸದಸ್ಯೆ ಶಾಂತಾಬಾಯಿ, ಡಿಐಸಿ ನಿರ್ದೇಶಕ ಟಿ.ಸಿದ್ಧಣ್ಣ, ಲೀಡ್ ಬ್ಯಾಂಕ್ ಮ್ಯಾನೇಜರ್ ಸೋಮನಗೌಡ ಐನಾಪೂರ, ಜಿಲ್ಲಾ ಖಾದಿ ಗ್ರಾಮೋದ್ಯೋಗ ಮಂಡಳಿ ಅಧಿಕಾರಿ ಸಾವಿತ್ರಮ್ಮ ದಳವಾಯಿ ಉಪಸ್ಥಿತರಿದ್ದರು. ಅಶ್ವಿನಿ ಹಿರೇಮಠ ಪ್ರಾರ್ಥಿಸಿದರು.