ಸಂಗೊಳ್ಳಿ ರಾಯಣ್ಣ ದೇಶಾಭಿಮಾನದ ಪ್ರತೀಕ

ವಿಜಯಪುರ: ವೀರ ಸಂಗೊಳ್ಳಿ ರಾಯಣ್ಣರ ದೇಶಭಕ್ತಿಯನ್ನು ವರ್ಣಿಸಲು ಪದಗಳೇ ಸಾಲುವುದಿಲ್ಲ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.
ಇಲ್ಲಿನ ದರಬಾರ ಹೈಸ್ಕೂಲ್ ಮೈದಾನದಲ್ಲಿ ಸಂಗೊಳ್ಳಿ ರಾಯಣ್ಣರ ಧ್ವಜ ಯಾತ್ರೆ ಅಂಗವಾಗಿ ಶನಿವಾರ ನಡೆದ ಬಹಿರಂಗ ಸಮಾವೇಶವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದ ಶ್ರೀಗಳು, ಕಿತ್ತೂರಿಗಾಗಿ ಪ್ರಾಣವನ್ನು ಲೆಕ್ಕಿಸದೆ ಹೋರಾಡಿದ ವೀರ ಸಂಗೊಳ್ಳಿ ರಾಯಣ್ಣನನ್ನು ನಾವು ಸದಾ ಸ್ಮರಿಸಬೇಕು ಎಂದರು.
ಸಂಗೊಳ್ಳಿ ರಾಯಣ್ಣ ಅವರ ಕುರಿತು ಉಪನ್ಯಾಸ ಮಂಡಿಸಿದ ಉಪನ್ಯಾಸಕ ಮೋಹನ ಮೇಟಿ, ಸಂಗೊಳ್ಳಿ ರಾಯಣ್ಣ ದೇಶಭಕ್ತಿ ಹಾಗೂ ನಂಬಿಕೆ ಪ್ರತೀಕ. ದೇಶಾಭಿಮಾನದ ಇನ್ನೊಂದು ಹೆಸರೇ ರಾಯಣ್ಣ ಎಂದರು.
ಸಂಗೊಳ್ಳಿ ರಾಯಣ್ಣ ಹಾಲುಮತ ಸಮಾಜದ ಆಸ್ತಿಯಲ್ಲ, ಎಲ್ಲ ಸಮಾಜಗಳ ಆಸ್ತಿ. ಆತನನ್ನು ಒಂದೇ ಸಮಾಜಕ್ಕೆ ಸೀಮಿತಗೊಳಿಸಬಾರದು ಎಂದರು.
ಉಪನ್ಯಾಸ ನೀಡಿದ ಕರ್ನಾಟಕ ಪ್ರದೇಶ ಕುರುಬರ ಸಂಘದ ರಾಜ್ಯಾಧ್ಯಕ್ಷೆ ಶಿಲ್ಪಾ ಕುದರಗೊಂಡ, ಸಂಗೊಳ್ಳಿ ರಾಯಣ್ಣ ತನ್ನ ಜೀವನವನ್ನೇ ನಾಡಿನ ಸೇವೆಗಾಗಿ ಮುಡುಪಾಗಿಟ್ಟಿದ್ದರು. ಸ್ವಾತಂತ್ರ್ಯಕ್ಕಾಗಿ ತನ್ನ ಪ್ರಾಣವನ್ನೆ ಅರ್ಪಿಸಿದರು ಎಂದರು.
ಹುಲಜಂತಿ ಮಾಳಿಂಗರಾಯ ಮಹಾರಾಜರು ಸಾನ್ನಿಧ್ಯ ವಹಿಸಿದ್ದರು. ಸೋಮೇಶ್ವರ ಸ್ವಾಮೀಜಿ, ಅಮರೇಶ್ವರ ಮಹಾರಾಜರು, ರೇವಣಸಿದ್ಧೇಶ್ವರ ಶಾಂತಮಯ ಸ್ವಾಮೀಜಿ, ಸೋಮೇಶ್ವರ ಸ್ವಾಮೀಜಿ, ಬುರಾಣಪುರ ಆರೂಢಾಶ್ರಮದ ಯೋಗೇಶ್ವರಿ ಮಾತಾಜಿ ಸಾನ್ನಿಧ್ಯ ವಹಿಸಿದ್ದರು. ಮುಖಂಡರಾದ ಉಮೇಶ ವಂದಾಲ, ಶರಣು ಸಬರದ, ಶಿವಾನಂದ ಭುಯ್ಯರ, ಸಲೀಂ ಉಸ್ತಾದ ಮೊದಲಾದವರು ಪಾಲ್ಗೊಂಡಿದ್ದರು.
ಗಮನ ಸೆಳೆದ ಬಾವುಟ ಯಾತ್ರೆ: ಸಮಾವೇಶಕ್ಕೂ ಮುನ್ನ ರಾಯಣ್ಣನ ಬಾವುಟ ಯಾತ್ರೆ ಅತ್ಯಂತ ವೈಭವಯುತವಾಗಿ ನಡೆಯಿತು. ಯಾತ್ರೆಗೆ ಮಾಜಿ ಸಚಿವ ಎಂ.ಬಿ. ಪಾಟೀಲ ಚಾಲನೆ ನೀಡಿದರು. 1 ಕಿ.ಮೀ. ಉದ್ದ ಧ್ವಜವನ್ನು ಹೊತ್ತು ಸಾವಿರಾರು ಯುವಕರು ಹೆಜ್ಜೆ ಹಾಕಿದರು. ನಗರದ ಸಂಗೊಳ್ಳಿ ರಾಯಣ್ಣನ ವೃತ್ತದಿಂದ ಆರಂಭಗೊಂಡು ಪ್ರಮುಖ ಮಾರ್ಗಗಳಲ್ಲಿ ಸಂಚರಿಸಿ ಸಮಾವೇಶ ನಡೆದ ದರಬಾರ ಹೈಸ್ಕೂಲ್ ಮೈದಾನಕ್ಕೆ ತಲುಪಿ ಸಂಪನ್ನಗೊಂಡಿತು. ಡೊಳ್ಳಿನ ಸದ್ದು ಪಾದಯಾತ್ರೆಯುದ್ದಕ್ಕೂ ಮೊಳಗಿತು.

Leave a Reply

Your email address will not be published. Required fields are marked *