ಸರ್ಕಾರಿ ಶಾಲೆಯತ್ತ ಪಾಲಕರ ಚಿತ್ತ !

ಹೀರಾನಾಯ್ಕ ಟಿ.

ವಿಜಯಪುರ : ರಾಜ್ಯ ಮೈತ್ರಿ ಸರ್ಕಾರದ ಮಹತ್ವದ ಯೋಜನೆಗಳಲ್ಲೊಂದಾದ ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಶಿಕ್ಷಣ ನೀಡುವ ಯೋಜನೆಗೆ ಭಾರಿ ಬೇಡಿಕೆ ಸೃಷ್ಟಿಯಾಗಿದೆ. ಪ್ರಸಕ್ತ ಶೈಕ್ಷಣಿಕ ಸಾಲಿನಿಂದಲೇ ರಾಜ್ಯಾದ್ಯಂತ 947 ಸರ್ಕಾರಿ ಶಾಲೆಗಳಲ್ಲಿ ಪ್ರಾಥಮಿಕ ಹಂತದಿಂದಲೇ ಇಂಗ್ಲಿಷ್ ಕಲಿಕೆಗೆ ಸರ್ಕಾರ ಉತ್ಸಹ ತೋರಿದ ಹಿನ್ನೆಲೆಯಲ್ಲಿ ಪಾಲಕರು ತಮ್ಮ ಚಿತ್ತವನ್ನು ಸರ್ಕಾರಿ ಶಾಲೆಗಳತ್ತ ಹರಿಸಿದ್ದಾರೆ.
ಜೂನ್ 1 ರಿಂದ ಶಾಲೆಗಳು ಪ್ರಾರಂಭವಾಗಲಿದ್ದು, ಶಾಲೆಗಳ ಪ್ರಾರಂಭಕ್ಕೂ ಮೊದಲೇ ಮಕ್ಕಳನ್ನು ಇಂಗ್ಲಿಷ್ ಮಿಡಿಯಂಗೆ ಸೇರಿಸುತ್ತಿದ್ದಾರೆ.

ಸರ್ಕಾರಿ ಶಾಲೆಗಳ ಮೇಲೆ ಒಲವು : ಖಾಸಗಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಶಿಕ್ಷಣಕ್ಕೆ ಹೆಚ್ಚಿನ ಹಣ ವಸೂಲಾತಿ ಮಾಡುತ್ತಿರುವುದರಿಂದ ಪಾಲಕರು ಸರ್ಕಾರಿ ಶಾಲೆಗಳ ಮೇಲೆ ಒಲವು ತೋರಿಸಿದಂತಿದೆ. ಖಾಸಗಿ ಶಾಲೆಗಳಲ್ಲಿ ಡೊನೇಷನ್ ಹಾವಳಿ ಹೆಚ್ಚಾಗಿದ್ದು, ಒಂದನೇ ತರಗತಿಗೆ ಮಕ್ಕಳನ್ನು ಸೇರಿಸಲು ಸಾವಿರಾರು ರೂ. ವಸೂಲು ಮಾಡುತ್ತಾರೆ. ಇದರಿಂದಾಗಿ ಪಾಲಕರು ಖಾಸಗಿ ಶಾಲೆಗಳ ಸಹವಾಸವೇ ಬೇಡ ಎನ್ನುವ ರೀತಿಯಲ್ಲಿ ಸರ್ಕಾರಿ ಶಾಲೆಗಳತ್ತ ಹೆಚ್ಚಿನ ಗಮನಹರಿಸುತ್ತಿದ್ದಾರೆ. ಪ್ರತಿಷ್ಟಿತ ಖಾಸಗಿ ಶಾಲೆಗಳಲ್ಲಿ ಒಂದನೇ ತರಗತಿಗೆ ವಾರ್ಷಿಕ ಅಂದಾಜು 15 ಸಾವಿರ ರೂ. ನಿಂದ 30 ಸಾವಿರ ರೂ. ವರೆಗೆ ಡೊನೇಷನ್ ಕೇಳುತ್ತಾರೆ. ಹಾಗಾಗಿ ಮಧ್ಯಮ ವರ್ಗದ ಜನರು, ಕಡು ಬಡವರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಲ್ಲಿ ಮಕ್ಕಳಿಗೆ ಶಿಕ್ಷಣ ಕೊಡಿಸುವುದು ಕಷ್ಟಕರವಾಗುತ್ತಿದೆ. ಹಾಗಾಗಿ ಅದೇ ಶಿಕ್ಷಣ ಸರ್ಕಾರಿ ಶಾಲೆಗಳಲ್ಲಿ ಸಿಗುತ್ತಿರುವುದರಿಂದ ಇದೀಗ ಪಾಲಕರು ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ದಾಖಲಿಸಲು ಮುಂದಾಗುತ್ತಿದ್ದಾರೆ ಎಂದು ಮುಖ್ಯ ಶಿಕ್ಷಕ ವೈ.ವೈ.ಹಿಪ್ಪರಗಿ ತಿಳಿಸುತ್ತಾರೆ.

ಜಿಲ್ಲೆಯಲ್ಲಿ 37 ಶಾಲೆಗಳಲ್ಲಿ ಪ್ರಾರಂಭ: ಜಿಲ್ಲೆಯಲ್ಲಿ ಒಟ್ಟು 37 ಸರ್ಕಾರಿ ಶಾಲೆಗಳಲ್ಲಿ ಪ್ರಸಕ್ತ 2019-20ನೇ ಶೈಕ್ಷಣಿಕ ಸಾಲಿನಿಂದಲೇ 1ನೇ ತರಗತಿಗೆ ಇಂಗ್ಲಿಷ್ ಮಾಧ್ಯಮ ಶಿಕ್ಷಣ ನೀಡಲಾಗುತ್ತಿದೆ. ಅದಕ್ಕೆ ಈಗಾಗಲೇ ಪ್ರವೇಶಾತಿ ಪ್ರಾರಂಭವಾಗಿದೆ. ವಿಜಯಪುರ ಗ್ರಾಮೀಣ ಭಾಗದ ಬರಟಗಿ, ಅರ್ಜುಣಗಿ, ಮಮದಾಪುರ, ಬಬಲೇಶ್ವರ ಹಾಗೂ ಕುಮಠೆ, ಬುರಣಾಪುರ, ನಾಗಠಾಣದಲ್ಲಿರುವ ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ತೆರೆಯಲಾಗಿದೆ. ಅದರಂತೆ ಬಸವನ ಬಾಗೇವಾಡಿ ತಾಲೂಕಿನ ಪಟ್ಟಣದ ಬಾಲಕಿಯರ ಶಾಲೆ, ಕೂಡಗಿ, ತಳೇವಾಡ, ಕೊಲ್ಹಾರ, ವಿಜಯಪುರ ನಗರದ ಶಾಲೆ ನಂ.15, ನಂ.1 ಉರ್ದು ಶಾಲೆ, ನಂ.13ರ ಶಾಲೆ, ನಂ.1 ಕನ್ನಡ ಶಾಲೆ, ದೇವರ ಹಿಪ್ಪರಗಿ ತಾಲೂಕಿನ ದಿಂಡಾವಾರ, ಜಾಲವಾದ, ಆಲಗೂರ, ಕೆರೂಟಗಿ, ದೇವರ ಹಿಪ್ಪರಗಿ ಪಟ್ಟಣದಲ್ಲಿ ಶಾಲೆಗಳಲ್ಲಿ ಪ್ರಾರಂಭಿಸಲಾಗಿದೆ.
ಇಂಡಿ ತಾಲೂಕಿನ ಸಾತಲಗಾಂವ, ಆಲೂರು, ಹಲಗುಣಕಿ, ಗೋರನಾಳ, ಇಂಡಿ ಪಟ್ಟಣದ ಉರ್ದು ಶಾಲೆ, ಮುದ್ದೇಬಿಹಾಳ ತಾಲೂಕಿನ ರೂಡಗಿ, ರಕ್ಕಸಗಿ, ಮಡಿನಾಳ, ತಾಳಿಕೋಟೆ, ಚಡಚಣ ತಾಲೂಕಿನ ಬರಡೋಲ, ಹತ್ತಳ್ಳಿ, ಸಿಂದಗಿ ತಾಲೂಕಿನ ಆಲಮೇಲ, ಬೊಮ್ಮನಹಳ್ಳಿ, ಕೊಕಟನೂರ, ಸರಗಿಹಳ್ಳಿ, ಯಂಕಂಚಿ ಹಾಗೂ ಗಣಿಹಾರ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಇಂಗ್ಲಿಷ್ ಮಿಡಿಯಂ ತೆರೆಯಲಾಗಿದೆ ಎಂದು ಶಿಕ್ಷಣ ಇಲಾಖೆ ಮಾಹಿತಿ ನೀಡಿದೆ.

ನೋಂದಣಿ ಪ್ರಕ್ರಿಯೆ ಜೋರು : ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಸರ್ಕಾರಿ ಶಾಲೆಯಲ್ಲಿ 1ನೇ ತರಗತಿಯಿಂದ ಆಂಗ್ಲ ಮಾಧ್ಯಮ ತೆರೆಯಲಾಗುತ್ತಿದ್ದು, ಅದಕ್ಕೆ ಪ್ರವೇಶಾತಿ ಪಡೆಯಲು ಪಾಲಕರು ಉತ್ಸಾಹದಲ್ಲಿದ್ದಾರೆ. ವಿಜಯಪುರ ನಗರದ ದರಬಾರ ಗಲ್ಲಿಯ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈಗಾಗಲೇ 20 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ. ಅದೇ ರೀತಿ ಜಿಲ್ಲೆಯ 37 ಶಾಲೆಗಳಲ್ಲಿ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರವೇಶಾತಿ ಪಡೆದುಕೊಂಡಿದ್ದಾರೆ.

ಶಿಕ್ಷಕರಿಗೆ ತರಬೇತಿ : ಪ್ರಸಕ್ತ ಸಾಲಿನಿಂದ ಸರ್ಕಾರಿ ಶಾಲೆಗಳಲ್ಲಿ 1ನೇ ತರಗತಿಯಿಂದ ಆಂಗ್ಲ ಮಾಧ್ಯಮ ತೆರೆದಿರುವ ಹಿನ್ನೆಲೆಯಲ್ಲಿ ಈಗಾಗಲೇ ಜಿಲ್ಲೆಯ 25ಕ್ಕೂ ಹೆಚ್ಚು ಇಂಗ್ಲಿಷ್ ಶಿಕ್ಷಕರಿಗೆ ತರಬೇತಿ ನೀಡಲಾಗುತ್ತಿದೆ. ಗುಣಮಟ್ಟದ ಶಿಕ್ಷಣ, ಪ್ರಾಥಮಿಕ ಹಂತದಲ್ಲಿ ಪಠ್ಯಕ್ರಮ, ಭಾಷಾ ಕಲಿಕೆ, ಕಂಪ್ಯೂಟರ್ ಆಧಾರಿತ ಶಿಕ್ಷಣ ವ್ಯವಸ್ಥೆ ಕುರಿತು ತರಬೇತಿಯಲ್ಲಿ ಕಲಿಸಲಾಗುತ್ತಿದೆ.

ಜಿಲ್ಲೆಯಲ್ಲಿ ಪ್ರಸಕ್ತ ಶೈಕ್ಷಣಿಕ ಸಾಲಿನಿಂದ ಒಂದನೇ ತರಗತಿ ವಿದ್ಯಾರ್ಥಿಗಳಿಗೆ ಆಂಗ್ಲ ಮಾಧ್ಯಮ ಪ್ರಾರಂಭಿಸಲಾಗುತ್ತಿದೆ. ಅದಕ್ಕೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಎಲ್ಲ ರೀತಿಯ ಕ್ರಮ ಕೈಗೊಂಡಿದೆ.
ಪ್ರಸನ್ನ ಕುಮಾರ, ಡಿಡಿಪಿಐ

ಇದೇ ಮೊದಲ ಬಾರಿಗೆ ಸರ್ಕಾರಿ ಶಾಲೆಯಲ್ಲಿ ಇಂಗ್ಲಿಷ್ ಮೀಡಿಯಂ ಪ್ರಾರಂಭಿಸಲಾಗಿದ್ದು, ಪಾಲಕರು ತಮ್ಮ ಮಕ್ಕಳನ್ನು ಸೇರಿಸುತ್ತಿದ್ದಾರೆ. ಈಗಾಗಲೇ ನಮ್ಮ ಶಾಲೆಯಲ್ಲಿ 20 ವಿದ್ಯಾರ್ಥಿಗಳು ಪ್ರವೇಶಾತಿ ಪಡೆದಿದ್ದಾರೆ.
ವೈ.ವೈ. ಹಿಪ್ಪರಗಿ, ಮುಖ್ಯ ಶಿಕ್ಷಕ
ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆ, ದರಬಾರ ಗಲ್ಲಿ

Leave a Reply

Your email address will not be published. Required fields are marked *