ಸಂಸ್ಕಾರ, ಸಂಸ್ಕೃತಿ ಕಡೆಗಣನೆ ಸಲ್ಲ

ವಿಜಯಪುರ: ಸಂಸ್ಕಾರ ಹಾಗೂ ಸಂಸ್ಕೃತಿ ಮರೆತರೆ ದೇಶದ ವೈವಿಧ್ಯತೆಗೆ ಹಾನಿಯಾಗುತ್ತದೆ. ಸಂಸ್ಕಾರ ರೂಢಿಸಿಕೊಂಡು ಬದುಕಬೇಕು ಎಂದು ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಸ್ವಾಮಿಗಳು ಹೇಳಿದರು.

ಜಲನಗರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಜಂಗಮವಟುಗಳಿಗೆ ಶಿವದೀಕ್ಷೆ, ‘ವಿಶ್ವಋಷಿ’ ಪ್ರಶಸ್ತಿ ಪ್ರದಾನ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಪ್ರತಿಯೊಬ್ಬರೂ ಸಂಸ್ಕಾರಗಳನ್ನು ರೂಢಿಸಿಕೊಳ್ಳಬೇಕು. ಸಂಸ್ಕಾರ, ಸಂಸ್ಕೃತಿ ಯನ್ನು ಕಡೆಗಣಿಸಿದರೆ ದೇಶದ ವೈವಿಧ್ಯತೆಗೆ ಧಕ್ಕೆ ಬರುತ್ತದೆ. ಪ್ರತಿಯೊಬ್ಬರೂ ಅವರವರ ಧರ್ಮದ ಸಂಪ್ರದಾಯದಂತೆ ದೀಕ್ಷೆ ಪಡೆಯಬೇಕು, ದೀಕ್ಷೆಯಿಂದ ಸನ್ಮಾರ್ಗ ದೊರಕುತ್ತದೆ. ದೀಕ್ಷೆ ಭಗವಂತನ ಅನುಗ್ರಹ ಪಡೆಯುವ ಒಂದು ಮಹತ್ವದ ಮಾರ್ಗವಾಗಿದೆ ಎಂದರು.

ಸಾನ್ನಿಧ್ಯ ವಹಿಸಿದ್ದ ಬಬಲೇಶ್ವರ ಬೃಹನ್ಮಠದ ಡಾ.ಮಹಾದೇವ ಶಿವಾಚಾರ್ಯರು ಆಶೀವರ್ಚನ ನೀಡಿ, ಧರ್ಮ ಅತ್ಯಂತ ಶ್ರೇಷ್ಠ, ಧರ್ಮವನ್ನು ಯಾವತ್ತಿಗೂ ಒಡೆಯುವ ಕೆಲಸ ಮಾಡಬಾರದು. ಧರ್ಮ ನಮಗೆ ಬದುಕುವುದನ್ನು ಕಲಿಸುತ್ತದೆ. ಸದಾ ಧರ್ಮ ಮಾರ್ಗದಲ್ಲಿ ಮುನ್ನಡೆಯಬೇಕು, ಅಧರ್ಮ, ಅನೀತಿಯನ್ನು ಬಿಡಬೇಕು ಎಂದು ತಿಳಿಸಿದರು.

ಮನಗೂಳಿ ಶ್ರೀ ಸಂಗನಬಸವ ಶಿವಾಚಾರ್ಯರು, ಜೈನಾಪುರದ ಶ್ರೀ ರೇಣುಕ ಶಿವಾಚಾರ್ಯರು, ಬಸವನಬಾಗೇವಾಡಿಯ ಶ್ರೀ ಶಿವಪ್ರಕಾಶ ಶಿವಾಚಾರ್ಯರು, ತಡವಲಗಾದ ಶ್ರೀ ರಾಚೋಟೇಶ್ವರ ಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಕಾರ್ಯಕ್ರಮದ ಆಯೋಜಕ, ನ್ಯಾಯವಾದಿ ಮಲ್ಲಿಕಾರ್ಜುನ ಭೃಂಗಿಮಠ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಸಿದ್ಧೇಶ್ವರ ಬ್ಯಾಂಕ್ ಉಪಾಧ್ಯಕ್ಷ ರಮೇಶ ಬಿದನೂರ, ಬಿ.ಎಸ್. ಚೌಕಿಮಠ, ಪ್ರಕಾಶ ಕುಂಬಾರ ಮೊದಲಾದವರು ಉಪಸ್ಥಿತರಿದ್ದರು.