ಭೀಮಾತೀರದಲ್ಲಿ ಮತ್ತೆ ಗುಡುಗಿದ ಬಾಗಪ್ಪ

ವಿಜಯಪುರ: ‘ನನ್ನ ತಂಟೆಗೆ ಬಂದ್ರೆ ಸರಿಯಿರೋಲ್ಲ, ನನ್ನನ್ನು ಕಮ್‌ಜೋರ್ ಅಂತಾ ತಿಳಿಬೇಡಿ, ಡೈರೆಕ್ಟ್ ಹಣೆಗೆ ಗುಂಡು ಇಟ್ಟು ಹೊಡೆತೀನಿ, ಮನೆ ಹೊಕ್ಕು ಹೊಡೆತೀನಿ, ಯಾರನ್ನೂ ಬಿಡಲ್ಲ…’
ಹೀಗಂತ ಖಡಕ್ ಸಂದೇಶ ರವಾನಿಸಿದ್ದು ಬೇರಾರೂ ಅಲ್ಲ, ಎರಡು ವರ್ಷಗಳ ಹಿಂದೆ ನ್ಯಾಯಾಲಯದ ಆವರಣದಲ್ಲಿ ಶೂಟೌಟ್‌ಗೆ ಬಲಿಯಾಗಿ ಬದುಕಿ ಬಂದಿರುವ ರೌಡಿಶೀಟರ್ ಬಾಗಪ್ಪ ಹರಿಜನ. ಬರೋಬ್ಬರಿ 5 ಗುಂಡೇಟು ತಿಂದು ಚೇತರಿಸಿಕೊಂಡಿರುವ ಬಾಗಪ್ಪ ಇದೀಗ ಮತ್ತದೇ ನ್ಯಾಯಾಲಯದ ಆವರಣದಲ್ಲಿ ನಿಂತು ಎದುರಾಳಿಗಳ ವಿರುದ್ಧ ಗುಡುಗಿದ್ದಾನೆ.
ಆ ಮೂಲಕ ಎರಡು ವರ್ಷಗಳಿಂದ ತಣ್ಣಗಾಗಿದ್ದ ಭೀಮಾತೀರದಲ್ಲಿ ಇದೀಗ ಮತ್ತೆ ಸಂಚಲನ ಆರಂಭಗೊಂಡಿದೆ. ಈ ಮಧ್ಯೆ ಚಡಚಣ ಸಹೋದರರ ಹತ್ಯೆ ಪ್ರಕರಣದ ಆರೋಪಿಗಳೆಲ್ಲರೂ ಜಾಮೀನಿನ ಮೇಲೆ ಹೊರಬಂದಿದ್ದು ಯಾವಾಗ ಏನು ಬೇಕಾದರೂ ಸಂಭವಿಸಬಹುದೆಂಬ ಆತಂಕ ಭೀಮಾ ತೀರದಲ್ಲಿ ದಿನೇ ದಿನೇ ಹೆಚ್ಚುತ್ತಿದೆ.
ಬಾಗಪ್ಪನ ಘರ್ಜನೆ: ವಿಚಾರಣೆ ಹಿನ್ನೆಲೆ ಈಚೆಗೆ ಜಿಲ್ಲಾ ನ್ಯಾಯಾಲಯಕ್ಕೆ ಆಗಮಿಸಿದ್ದ ಬಾಗಪ್ಪ ಹರಿಜನ ನನಗೆ ತೊಂದರೆ ಕೊಟ್ಟರೆ ಸರಿಯಿರಲ್ಲ. ನನ್ನ ಉಸಾಬರಿಗೆ ಬಂದರೆ 24 ಗಂಟೆಗಳಲ್ಲಿಯೇ ಬಂದೂಕು ಹಿಡಿಯುತ್ತೇನೆಂದು ಆವಾಜ್ ಹಾಕಿದ್ದಾನೆ. ಅಷ್ಟಕ್ಕೂ ಇಂಥದ್ದೊಂದು ಆವಾಜ್ ಹಾಕಿದ್ದು ಯಾರಿಗೆ ಗೊತ್ತಾ? ಯಾವ ಚಂದಪ್ಪ ಹರಿಜನನ್ನು ತನ್ನ ನಾಯಕ ಎಂದು ಒಪ್ಪಿಕೊಂಡಿದ್ದನೋ ಅದೇ ಚಂದಪ್ಪನ ಸಂಬಂಧಿಗಳ ಮೇಲೆ. ಚಂದಪ್ಪನ ಸಂಬಂಧಿಗಳು ನನಗೆ ಕಿರುಕುಳ ಕೊಡುತ್ತಿದ್ದಾರೆ. ಆಸ್ತಿ ವಿಚಾರವಾಗಿ ಚಂದಪ್ಪನ ಸಂಬಂಧಿಗಳು ಮತ್ತು ನನ್ನ ಮಧ್ಯೆ ದ್ವೇಷ ಉಂಟಾಗಿದೆ ಎನುತ್ತಿದ್ದಾನೆ ಬಾಗಪ್ಪ.

ಬಾಗಪ್ಪ ಹೇಳಿಕೆಗೆ ಕೌಂಟರ್: ಇನ್ನು ತನ್ನ ಹೆಸರಿನಲ್ಲಿ ಕಿರಣ ಎಂಬಾತ ಹಣ ವಸೂಲಿ ಮಾಡಿದ್ದಾನೆಂಬ ಬಾಗಪ್ಪನ ಆರೋಪಕ್ಕೆ ಪ್ರತಿಯಾಗಿ ಕಿರಣ ಎಂಬಾತ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದು, ಅದರಲ್ಲಿ ಬಾಗಪ್ಪ ಹೇಳಿದಂತೆ ತಾನು ಯಾರ ಬಳಿಯೂ ಹಣ ವಸೂಲಿ ಮಾಡಿಲ್ಲವೆಂದು ಸಮಜಾಯಿಷಿ ನೀಡಿದ್ದಾನೆ. ಬಾಗಪ್ಪ ನೀಡಿರುವ ಹೇಳಿಕೆ ಕಟ್ಟು ಕಥೆ, ನಾನು ರಿಯಲ್ ಎಸ್ಟೇಟ್ ಬಿಸಿನೆಸ್ ಮಾಡಿಕೊಂಡಿದ್ದೇನೆ. ಜಮಖಂಡಿಯಲ್ಲಿ ಫಾರೂಕ್ ರೂಗಿ ಅವರ ಬಳಿ ಹಣ ಎತ್ತಿದ್ದೇನೆಂದು ಹೇಳಿದ್ದಾರೆ. ಫಾರೂಕ್ ಹಾಗಂತ ಖುರಾನ್ ಮೇಲೆ ಆಣೆ ಮಾಡಿ ಹೇಳಲಿ ನೋಡೋಣ…..ನಾನು ವಿಜಯಪುರದಲ್ಲೇ ಇದ್ದೇನೆ, ವಿಜಯಪುರ ಬಿಟ್ಟು ಎಲ್ಲೂ ಹೋಗಿಲ್ಲ. ನನ್ನದೇನಾದರೂ ತಪ್ಪಿದಿದ್ದರೆ ವಿಚಾರಣೆ ಎದುರಿಸಲು ಸಿದ್ದ ಎಂದಿದ್ದಾನೆ.
ಒಟ್ಟಾರೆ ಕಳೆದೆರೆಡು ದಿನಗಳ ಈ ಬೆಳವಣಿಗೆ ಭೀಮಾತೀರದಲ್ಲಿ ತೀವ್ರ ಸಂಚಲನ ಮೂಡಿಸಿದ್ದು ಮುಂದೇನಾಗಬಹುದೆಂಬ ಕುತೂಹಲದ ಜತೆ ಆತಂಕವೂ ಹೆಚ್ಚಿಸಿದೆ. ಈ ಬಗ್ಗೆ ಪೊಲೀಸ್ ಇಲಾಖೆ ನಡೆ ಏನೆಂಬುದು ಕಾದು ನೋಡಬೇಕಿದೆ.

ಬಾಗಪ್ಪ ಮತ್ತು ಕಿರಣ ಎಂಬುವರ ವಿಡಿಯೋ ಹೇಳಿಕೆ ಗಮನಕ್ಕೆ ಬಂದಿದೆ. ಸಮಗ್ರ ತನಿಖೆಗೆ ಆದೇಶಿಸಲಾಗಿದೆ. ಇವರ ಹೇಳಿಕೆಯಿಂದ ಯಾರೂ ಆತಂಕ ಪಡಬೇಕಿಲ್ಲ. ಇಲಾಖೆ ಎಲ್ಲರ ಮೇಲೂ ಕಣ್ಣಿಟ್ಟಿದೆ. ಕಾನೂನು ಕೈಗೆ ತೆಗೆದುಕೊಂಡರೆ ನಾನೂ ಸುಮ್ಮನಿರಲ್ಲ. ಇಬ್ಬರನ್ನೂ ಕರೆದು ಎಚ್ಚರಿಸಲಾಗುವುದು.
ಪ್ರಕಾಶ ನಿಕ್ಕಂ, ಪೊಲೀಸ್ ವರಿಷ್ಠಾಧಿಕಾರಿ
ಪೊಲೀಸ್ ಇಲಾಖೆ ಮೇಲಿನ ಗೌರವದಿಂದ ಸುಮ್ಮನಿದ್ದೇನೆ. ಸಮಾಜದ ಬಗ್ಗೆ ನನಗೆ ಗೌರವವಿದೆ. ನನ್ನ ಹೆಸರು ಕೆಡಿಸಲು ಮುಂದಾದರೆ ನಾನು ಸುಮ್ಮನಿರಲ್ಲ. ಮುಂದಿನ ದಿನಗಲ್ಲಿ ಇಡೀ ಇತಿಹಾಸ ಬಿಚ್ಚಿಡುತ್ತೇನೆ.
ಬಾಗಪ್ಪ ಹರಿಜನ, ರೌಡಿಶೀಟರ್

Leave a Reply

Your email address will not be published. Required fields are marked *