ಗಗನಕ್ಕೇರಿದ ತರಕಾರಿ ಬೆಲೆ

ವಿನೋದ ಶಿಂಪಿ
ವಿಜಯಪುರ: ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಬಿಸಿಲಿನಿಂದಾಗಿ ಮಾರುಕಟ್ಟೆಯಲ್ಲಿ ತರಕಾರಿಗಳ ಬೆಲೆ ಮುಗಿಲೆತ್ತರಕ್ಕೆ ಮುಟ್ಟಿದೆ.

ಬಿಸಿಲಿನ ಝಳಕ್ಕೆ ಅಂತರ್ಜಲ ಮಟ್ಟ ಕುಸಿದು ಕೊಳವೆಬಾವಿಗಳು ಬತ್ತಿವೆ. ಅಧಿಕ ತಾಪಮಾನ ಹಾಗೂ ನೀರಿನ ಅಭಾವದಿಂದಾಗಿ ತರಕಾರಿ ಬೆಳೆಗಳು ಬಾಡಿ ಇಳುವರಿ ಕುಸಿತಗೊಂಡಿದೆ. ಹೀಗಾಗಿ ಮಾರುಕಟ್ಟೆಗೆ ತರಕಾರಿ ಆವಕದ ಪ್ರಮಾಣ ಕಡಿಮೆಯಾಗಿ ಅವುಗಳ ಬೆಲೆಯಲ್ಲಿ ಏರಿಕೆಯಾಗಿದೆ.

ಕಳೆದ ವಾರ 10 ರೂ.ಗೆ ಕೆಜಿ ಟೊಮೆಟೊ ಮಾರುತ್ತಿದ್ದ ವ್ಯಾಪಾರಿಗಳು ಈಗ 50ರೂ.ಗೆ ಮಾರುತ್ತಿದ್ದಾರೆ. ಕೆಜಿಗೆ 40 ರೂ. ಇದ್ದ ಮೆಣಸಿನಕಾಯಿ ಬೆಲೆ ಈಗ ದುಪ್ಪಟ್ಟಾಗಿದೆ. ಪಲ್ಲೆಗಳ ದರವೂ ಏರಿಕೆಯಾಗಿದೆ. ಒಂದು ಕಟ್ಟು ಕೋತಂಬರಿ, ಮೆಂತೆ, ರಾಜಗಿರಿ, ಕಿರಸಾಲಿ, ಸಬ್ಬಸಗಿ, ಪಾಲಕ, ಪುದೀನಾ, ಪುಂಡಿಪಲ್ಲೆಯನ್ನು 10 ರೂ.ಯಂತೆ ಮಾರಲಾಗುತ್ತಿದೆ.

ಬೆಂಡೆಕಾಯಿ 40ರೂ., ಗಜ್ಜರಿ 50 ರೂ., ಬದನೆಕಾಯಿ 50 ರೂ, ನವಿಲುಕೋಸು, ಹೂ ಕೋಸು, ಎಲೆ ಕೋಸು ಒಂದಕ್ಕೆ 60 ರೂ.ಯಂತೆ ಹಾಗೂ ಒಂದು ಕೆಜಿ ಸೌತೆಕಾಯಿಯನ್ನು 80ರೂ.ಗೆ ಮಾರಲಾಗುತ್ತಿದೆ.

ರೈತರಿಗೆ ಸಿಗದ ಲಾಭ
ಇನ್ನು ಅಲ್ಪಸ್ವಲ್ಪ ನೀರಾವರಿ ಹೊಂದಿರುವ ರೈತರು ಕಷ್ಟಪಟ್ಟು ತರಕಾರಿ ಬೆಳೆದರೂ ದಲ್ಲಾಳಿಗಳ ಹಾವಳಿಯಿಂದಾಗಿ ಉತ್ತಮ ಆದಾಯ ಪಡೆಯುವಲ್ಲಿ ವಿಫಲರಾಗುತ್ತಿದ್ದಾರೆ. ದಲ್ಲಾಳಿಗಳು ಪುಡಿಗಾಸು ರೈತರ ಕೈಗಿಟ್ಟು ದುಪ್ಪಟ್ಟು ಬೆಲೆಗೆ ತರಕಾರಿ ಮಾರಾಟ ಮಾಡಿ ಜೇಬು ತುಂಬಿಕೊಳ್ಳುತ್ತಿದ್ದಾರೆ.

ಏನ್ ಮಾಡುದ್ರೀ…ಮಳಿ ಇಲ್ದ ಬೆಳಿ ಒಣಗಿ ಹೊಂಟಾವು. ಇದ್ದ ಬೆಳಿ ಉಳಸ್ಕೊಳಾಕ ಪರದಾಡಾಕತ್ತಿವಿ. ಇನ್ನೊಂದೆರಡು ಸಲ ಕಾಯಿ ಬರಬಹುದು. ಅಲ್ಲಿಂದ ಭೂಮಿತಾಯಿ ನೀರಿಲ್ದೆ ಬತ್ತಿ ಹೋಗತಾಳ. ಮಳಿರಾಯ ಈ ಬಾರಿಯಾದ್ರೂ ದೊಡ್ಡ ಮನಸ್ಸ ಮಾಡಿದ್ರ ಜನ-ಜಾನವಾರು ಬದಕತಾವ್ರಿ…
ಸುಮಾ ಭೋಸಲೆ, ತರಕಾರಿ ವ್ಯಾಪಾರಿ

ಏನು ಮಾಡುದ್ರಿ, ಮಳಿ ಇಲ್ಲದಕ್ಕ ತರಕಾರಿ ರೇಟ್ ಹೆಚ್ಚ ಆಗಾಕತ್ತದ್ರಿ… ಎಷ್ಟ ತುಟ್ಟಿ ಆದ್ರೂ ಹೊಟ್ಟಿಗೆ ಊಟ ಮಾಡಬೇಕಲ್ರಿ. ಸೋವಿ ಇದ್ದಾಗ 1ಕೆಜಿ ಖರೀದಿಸ್ತಿದ್ವಿ, ಈಗ ಅರ್ಧ ಕಿಲೋ ಖರೀದಿ ಮಾಡುದ್ರೀ.. ತರಕಾರಿ ಇಲದಿದ್ರ ಊಟ ರುಚಿ ಹತ್ತಂಗಿಲ್ರಿ…
ಶ್ರೀಕಾಂತ ಮಹಾಮನಿ, ಗ್ರಾಹಕ

Leave a Reply

Your email address will not be published. Required fields are marked *