ಮೈತ್ರಿ ಪಡೆಯ ಭರ್ಜರಿ ಶಕ್ತಿ ಪ್ರದರ್ಶನ

ವಿಜಯಪುರ: ‘ಲೇಟಾದರೂ ಲೇಟೆಸ್ಟ್ ಆಗಿತ್ತು’ ಎಂಬ ಮಾತಿಗೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಪಾಳಯದ ಶಕ್ತಿ ಪ್ರದರ್ಶನ ಪುಷ್ಠಿ ನೀಡಿತು !

ಲೋಕಸಭೆ ಚುನಾವಣೆ ನಾಮಪತ್ರ ಸಲ್ಲಿಕೆ ಅಂತಿಮ ದಿನದಂದು ಅಪಾರ ಕಾರ್ಯಕರ್ತರನ್ನು ಸೇರಿಸುವ ಮೂಲಕ ದೋಸ್ತಿ ಪಡೆ ಭರ್ಜರಿ ಶಕ್ತಿ ಪ್ರದರ್ಶನ ನಡೆಸಿದೆ. ಕಾಂಗ್ರೆಸ್-ಜೆಡಿಎಸ್ ಬಾವುಟಗಳ ಪ್ರದರ್ಶನ, ಡೊಳ್ಳು ಕುಣಿತ, ಹಲಗೆ ಮೇಳ ಮೈತ್ರಿ ಪಾಳಯದ ಶೋಭಾಯಾತ್ರೆಗೆ ಶೋಭೆ ತಂದವು. ಸಾಂಪ್ರದಾಯಿಕ ಬಂಜಾರಾ ನೃತ್ಯ ಜನಾಕರ್ಷಿಸಿತು. ವಿಶೇಷವಾಗಿ ಅಶ್ವ ಕೂಡ ತಾಳಕ್ಕೆ ತಕ್ಕ ಹೆಜ್ಜೆ ಹಾಕಿ ಹೂಂಕರಿಸಿತು.

ನಗರದ ಸಿದ್ಧೇಶ್ವರ ದೇವಸ್ಥಾನದಿಂದ ಆರಂಭಗೊಂಡ ಭವ್ಯ ಮೆರವಣಿಗೆಯಲ್ಲಿ ವಿವಿಧ ಭಾಗಗಳಿಂದ ಸಾವಿರಾರು ಜನ ಭಾಗವಹಿಸಿದ್ದರು. ಅಂದಾಜು ಲಕ್ಷದ ಹತ್ತಿರಕ್ಕೆ ಜನ ಸೇರಿರಬಹುದೆಂದು ಅಂದಾಜಿಸಲಾಗಿದೆ. ಮಹಾತ್ಮ ಗಾಂಧಿ ವೃತ್ತದಿಂದ ಗಗನ್‌ಮಹಲ್ ಆವರಣದವರೆಗೆ ಜನರ ಸಾಲಿತ್ತು. ಕೆಲವರು ಬಿಸಿಲ ಬೇಗೆ ತಾಳದೆ ಗಗನ್ ಮಹಲ್ ಮತ್ತು ಬಾರಾಕಮಾನ್ ಉದ್ಯಾನಗಳಲ್ಲಿ ನೆರಳಿನಾಶ್ರಯ ಪಡೆದಿದ್ದರು. ಎರಡು ತೆರೆದ ವಾಹನಗಳಲ್ಲಿ ಉಭಯ ಪಕ್ಷಗಳ ನಾಯಕರು ಜನರತ್ತ ಕೈ ಬೀಸಿದರು. ನಂತರ ಚುನಾವಣೆ ಅಧಿಕಾರಿ ಎಂ. ಕನಗವಲ್ಲಿ ಅವರಿಗೆ ಅಭ್ಯರ್ಥಿ ಸುನೀತಾ ಚವಾಣ್ ಅಧಿಕೃತವಾಗಿ ನಾಮಪತ್ರ ಸಲ್ಲಿಸಿದರು.

ಸಚಿವರಾದ ಎಂ.ಬಿ. ಪಾಟೀಲ, ಶಿವಾನಂದ ಪಾಟೀಲ, ಎಂ.ಸಿ. ಮನಗೂಳಿ, ಬಂಡೆಪ್ಪ ಕಾಶೆಂಪುರ, ಶಾಸಕರಾದ ಯಶವಂತರಾಯಗೌಡ ಪಾಟೀಲ, ದೇವಾನಂದ ಚವಾಣ್, ವಿಪ ಸದಸ್ಯರಾದ ಸುನೀಲಗೌಡ ಪಾಟೀಲ, ಪ್ರಕಾಶ ರಾಠೋಡ, ಬಸವರಾಜ ಹೊರಟ್ಟಿ, ಮಾಜಿ ಶಾಸಕರಾದ ಸಿ.ಎಸ್. ನಾಡಗೌಡ, ವಿಠಲ ಕಟಕಧೋಂಡ, ರಾಜು ಆಲಗೂರ, ಡಾ.ಮಕ್ಬೂಲ್ ಬಾಗವಾನ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ರವಿಗೌಡ ಪಾಟೀಲ ಧೂಳಖೇಡ, ಜೆಡಿಎಸ್ ಜಿಲ್ಲಾಧ್ಯಕ್ಷ ಮಲ್ಲಕಾರ್ಜುನ ಯಂಡಿಗೇರಿ, ಮುಖಂಡರಾದ ಉಮೇಶ ಕೋಳಕೂರ, ಹಮೀದ್ ಮುಶ್ರೀಫ್, ಸಂಗಮೇಶ ಬಬಲೇಶ್ವರ, ಮಹಾದೇವಿ ಗೋಕಾಕ, ರಾಜು ಪಾಟೀಲ ಕುದರಿಸಾಲೋಡಗಿ, ಸೋಮನಗೌಡ ಪಾಟೀಲ ಮನಗೂಳಿ ಇತರರಿದ್ದರು.

ಸಚಿವ ಶಿವಾನಂದ ಟಾಂಗ್
ಜಿಲ್ಲೆಯಲ್ಲಿ ವಿಮಾನ ನಿಲ್ದಾಣದ ಕನಸು ಕಂಡವರು ಕಾಂಗ್ರೆಸ್‌ನ ಮೊದಲ ಸಂಸದ ರಾಜಾರಾಮ ದುಬೆ ಅವರು. ಆದರೆ, ಹತ್ತು ವರ್ಷ ಸಂಸದರಾದರೂ ಜಿಗಜಿಣಗಿ ಆ ಪ್ರಯತ್ನ ಮಾಡಲೇ ಇಲ್ಲ. ಪರಿಣಾಮ ಜಿಗಜಿಣಗಿ ಭರವಸೆಯ ವಿಮಾನ ಇನ್ನೂ ಆಕಾಶದಲ್ಲೇ ಹಾರಾಡುತ್ತಿದೆ ಎಂದು ಸಚಿವ ಶಿವಾನಂದ ಪಾಟೀಲ ಜಿಗಜಿಣಗಿಗೆ ಟಾಂಗ್ ನೀಡಿದರು.

ಗೋಳಗುಮ್ಮಟದಲ್ಲಿ ಒಮ್ಮೆ ಕೂಗಿದರೆ ಒಂಭತ್ತು ಬಾರಿ ಕೇಳಿಸುತ್ತದೆ. ಅಂಥದರಲ್ಲಿ ಒಂಭತ್ತು ವರ್ಷ ಅಧಿಕಾರದಲ್ಲಿದ್ದರೂ ಜಿಗಜಿಣಗಿ ಸಂಸತ್‌ನಲ್ಲಿ ಒಮ್ಮೆಯೂ ಕೂಗಲಿಲ್ಲ ಎಂದು ಗೇಲಿ ಮಾಡಿದ ಸಚಿವ ಪಾಟೀಲ, ಕುಡಿಯುವ ನೀರಿನ ರಾಜ್ಯ ಸಚಿವರಾದರೂ ರಮೇಶ ಜಿಗಜಿಣಗಿ ಕ್ಷೇತ್ರದಲ್ಲೇ ನೀರು ಸಿಗದ ಸ್ಥಿತಿ ಇದೆ. ಹೀಗಾಗಿ ಜಿಗಜಿಣಗಿ ಮೋದಿ ಹೆಸರಲ್ಲಿ ಮತ ಯಾಚಿಸುತ್ತಿದ್ದಾರೆ. ಮೋದಿ ಮುಖ ನೋಡಿದರೆ ನೀರು ಸಿಗಲ್ಲ ಎಂಬುದು ಕ್ಷೇತ್ರದ ಜನರಿಗೀಗ ಮನವರಿಕೆಯಾಗಿದೆ ಎಂದರು.

ಈ ಹಿಂದೆ ಚಹಾ ಪೇ ಚರ್ಚಾ ಮೂಲಕ ಚುನಾವಣೆ ಎದುರಿಸಿದ ನರೇಂದ್ರ ಮೋದಿ ಈ ಬಾರಿ ಚೌಕಿದಾರ್ ಹೆಸರಲ್ಲಿ ಚುನಾವಣೆ ಎದುರಿಸುತ್ತಿದ್ದಾರೆ. ಏರ್ ಸರ್ಜಿಕಲ್ ಸ್ಟ್ರೈಕ್ ಮೂಲಕ ಪ್ರಚಾರ ಗಿಟ್ಟಿಸಿಕೊಳ್ಳಲು ಹೊರಟಿದ್ದಾರೆ. ದೇಶಕ್ಕೆ ಕಾಂಗ್ರೆಸ್ ಕೊಡುಗೆ ಏನು? ಎಂದು ಬಿಜೆಪಿಗರು ಪ್ರಶ್ನೆ ಮಾಡುತ್ತಾರೆ. ಆದರೆ, ಕಳೆದ ಐದು ವರ್ಷ ಬಿಜೆಪಿ ಏನು ಮಾಡಿದೆ? ರೈತರಿಗೆ ಏನು ಕೊಟ್ಟಿದೆ? ಬಿಜೆಪಿಯನ್ನು ಕಟ್ಟಿ ಬೆಳೆಸಿದವರನ್ನೇ ಇಂದು ಮೂಲೆಗುಂಪು ಮಾಡಲಾಗಿದೆ. ಮುರುಳಿಮನೋಹರ ಜೋಷಿ, ಲಾಲಕೃಷ್ಣ ಅಡ್ವಾಣಿ ಅಷ್ಟೇ ಏಕೆ ರಾಜ್ಯದಲ್ಲಿ ತೇಜಸ್ವಿನಿ ಅನಂತಕುಮಾರ್ ಅವರನ್ನು ಮೂಲೆಗುಂಪು ಮಾಡಿದ್ದಾರೆ. ದೇಶದಲ್ಲಿ ಹಿಟ್ಲರ್ ಆಡಳಿತ ಜಾರಿಯಲ್ಲಿ ಇದೆ. ಇದನ್ನು ಕಿತ್ತೊಗೆಯಬೇಕೆಂದರು.

ಯಶವಂತರಾಯಗೌಡರ ವಾಗ್ದಾಳಿ
ರಮೇಶ ಜಿಗಜಿಣಗಿ ಅವರ ವೈಫಲ್ಯಗಳನ್ನು ಮುಂದಿಟ್ಟುಕೊಂಡು ತೀವ್ರ ವಾಗ್ದಾಳಿ ನಡೆಸಿದ ಶಾಸಕ ಯಶವಂತರಾಯಗೌಡ ಪಾಟೀಲ, ದೇಶದಲ್ಲೇ ಅತೀ ಹೆಚ್ಚು ಬರ ಎದುರಿಸುತ್ತಿರುವ ಜಿಲ್ಲೆ ವಿಜಯಪುರ. ಅದರಲ್ಲೂ ಸಂಸದರ ಕ್ಷೇತ್ರದಲ್ಲೇ ಹೆಚ್ಚಿನ ಸಮಸ್ಯೆ ಇದೆ. ಕ್ಷೇತ್ರದ ಜನಕ್ಕೆ ಕನಿಷ್ಠ ಸೌಲಭ್ಯ ಸಹ ದೊರಕಿಸಿಕೊಡುವಲ್ಲಿ ವಿಫಲರಾದ ಬಿಜೆಪಿ ಅಭ್ಯರ್ಥಿಯನ್ನು ಬದಲಿಸಲು ಜನ ಪಣ ತೊಡಬೇಕೆಂದರು.

ದೇಶದ 125 ಕೋಟಿ ಜನರ ಕಲ್ಯಾಣ ಬಯಸಿದ್ದು ಕಾಂಗ್ರೆಸ್. ಸರ್ವ ಜನಾಂಗವನ್ನು ಸಮಾನವಾಗಿ ಕಂಡಿದ್ದು ಕಾಂಗ್ರೆಸ್. ಅಣ್ಣ ಬಸವಣ್ಣನವರ ಸಿದ್ಧಾಂತದ ಮೇಲೆ ಮೈತ್ರಿ ಪಕ್ಷ ನಡೆಯುತ್ತಿದ್ದು, ಈ ಬಾರಿ ಮೈತ್ರಿ ಪಕ್ಷಕ್ಕೆ ಬೆಂಬಲ ನೀಡಬೇಕು. ಕಾಕಾ, ಮಾಮಾ ಎಂದು ಅಭಿವೃದ್ಧಿ ಕಡೆಗಣಿಸಿರುವ ಜಿಗಜಿಣಗಿ ಅವರನ್ನು ಬಿಟ್ಟು ಈ ಬಾರಿ ಅಭಿವೃದ್ಧಿ ಪರ ಅಭ್ಯರ್ಥಿಗೆ ಮತ ನೀಡುತ್ತೀರೆಂದು ಭಾವಿಸಿರುವೆ. ಸಮಾವೇಶಕ್ಕೆ ಅಧಿಕ ಜನರು ಸೇರುವ ಮೂಲಕ ಜಾತ್ಯತೀತ ಶಕ್ತಿಗೆ ಬಲ ತಂದಿದ್ದೀರಿ. ಈ ಬಲ ವಿಜಯೋತ್ಸವದವರೆಗೆ ಇರಲಿ. ಎರಡೂ ಪಕ್ಷಗಳು ನೈತಿಕವಾಗಿ ಬೆಂಬಲ ಸೂಚಿಸುವ ಮೂಲಕ ಚುನಾವಣೆ ಎದುರಿಸೋಣ ಎಂದರು.

ಜಿಲ್ಲೆಯ ಜೋಡೆತ್ತುಗಳು
ಸಚಿವರಾದ ಎಂ.ಬಿ. ಪಾಟೀಲ ಹಾಗೂ ಶಿವಾನಂದ ಪಾಟೀಲ ಜಿಲ್ಲೆಯ ಜೋಡೆತ್ತುಗಳಿದ್ದಂತೆ. ಎರಡೂ ಪಕ್ಷಗಳ ಮುಖಂಡರ ಸಮಾಗಮ ಇಲ್ಲಿ ಕಂಡಷ್ಟು ರಾಜ್ಯದಲ್ಲಿ ಎಲ್ಲೂ ಕಂಡಿಲ್ಲ. ಹೀಗಾಗಿ ಜಿಲ್ಲೆಯಲ್ಲಿ ಈ ಬಾರಿ ಮೈತ್ರಿ ಅಭ್ಯರ್ಥಿ ಗೆಲುವು ನಿಶ್ಚಿತ ಎಂದು ಎಂ.ಬಿ.ಪಾಟೀಲ ಹೇಳಿದರು.

ಮಾಜಿ ಪ್ರಧಾನಿ ದಿ. ಇಂದಿರಾಗಾಂಧಿ ಅವರಿಗೆ ಚಿನ್ನದ ತುಲಾಭಾರ ಮಾಡಿದ ಜಿಲ್ಲೆ ವಿಜಯಪುರ. ಇಂಥ ಜಿಲ್ಲೆಯಿಂದ ಮೈತ್ರಿ ಅಭ್ಯರ್ಥಿಯಾಗಿ ಸುನೀತಾ ಚವಾಣ್ ನಿಂತಿದ್ದಾರೆ. ಎಲ್ಲರೂ ಅಂತರಿಕ ಭಿನ್ನಾಭಿಪ್ರಾಯ ಬದಿಗೊತ್ತಿ ಅಭ್ಯರ್ಥಿ ಗೆಲುವಿಗೆ ಶ್ರಮಿಸಬೇಕೆಂದರು.

ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಜನಪರವಾಗಿ ಅಭಿವೃದ್ಧಿ ಕಾರ್ಯ ಮಾಡುತ್ತಿದೆ. ಜನತೆ ಈ ಬಾರಿ ನನಗೆ ಆಶೀರ್ವಾದ ರೂಪದ ಮತ ನೀಡಿದರೆ ಜಿಲ್ಲೆಯ ಸರ್ವತೋಮುಖ ಪ್ರಗತಿಗಾಗಿ ಶ್ರಮಿಸುವೆ. ಎರಡೂ ಪಕ್ಷಗಳ ಮುಖಂಡರ ಬೆಂಬಲ ನೋಡಿದರೆ ಹತ್ತಾನೆ ಬಲ ಬಂದಂತಾಗಿದೆ. ಗೆಲುವಿನ ವಿಶ್ವಾಸ ಹೆಚ್ಚಿಸಿದೆ.
– ಡಾ. ಸುನೀತಾ ಚವಾಣ್ ಜೆಡಿಎಸ್ ಅಭ್ಯರ್ಥಿ