More

    ಬಿಜೆಪಿಯಿಂದ ಸಂವಿಧಾನದ ಕೊಲೆ

    ವಿಜಯಪುರ: ಪೌರತ್ವ ತಿದ್ದುಪಡಿ ಕಾಯ್ದೆ ಹಿಂಪಡೆಯಲು ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘಟನೆ ನೇತೃತ್ವ ಹಲವು ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿ ಜಿಲ್ಲಾಡಳಿತದ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು.
    ಉಪಾಧ್ಯಕ್ಷ ಭೀಮಶಿ ಕಲಾದಗಿ ಮಾತನಾಡಿ, ಜ.30, 1948 ರಂದು ಗೋಡ್ಸೆ ಗಾಂಧೀಜಿಯವರನ್ನು ಕೊಂದಿದ್ದ. ಸದ್ಯ ಸಂಘ ಪರಿವಾರದವರು ಡಾ. ಬಿ.ಆರ್. ಅಂಬೇಡ್ಕರ್ ರಚಿಸಿರುವ ಸಂವಿಧಾನವನ್ನು ಕೊಲ್ಲಲು ನಿಂತಿದ್ದಾರೆ. ಇದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ ಎಂದರು.
    ದೇಶದ ಜನತೆ ತೀವ್ರತರ ಆರ್ಥಿಕ ಹಾಗೂ ಸಾಂಸ್ಕೃತಿಕ ಬಿಕ್ಕಟ್ಟುಗಳನ್ನು ಎದುರಿಸುತ್ತಿರುವ ಈ ಸಂದರ್ಭದಲ್ಲಿ ಜೀವನದ ಸಮಸ್ಯೆಗಳ ವಿರುದ್ಧ ಜನರು ನಡೆಸಬೇಕಾದ ಐಕ್ಯ ಹೋರಾಟಗಳಿಗೆ ಧಕ್ಕೆ ತರಲು ಕೇಂದ್ರ ಸರ್ಕಾರವು ಪೈಶಾಚಿಕ ಉಪಾಯಗಳನ್ನು ರೂಪಿಸುತ್ತಿದೆ. ಪೌರತ್ವ ತಿದ್ದುಪಡಿ ಕಾಯ್ದೆ ಮೂಲಕ ರಾಷ್ಟ್ರದಾದ್ಯಂತ ನಾಗರಿಕ ದಾಖಲೆ (ಎನ್‌ಆರ್‌ಸಿ) ಯನ್ನು ತಯಾರಿಸಲು ನಡೆಸಲಾಗುತ್ತಿರುವ ಹುನ್ನಾರವು ಕೋಮುಗಳ ನಡುವೆ ಅನೈಕ್ಯತೆಯನ್ನು ಸೃಷ್ಟಿಸಲಿದೆ. ಕಿರುಕುಳಕ್ಕೊಳಗಾಗಿರುವ ನಮ್ಮ ನೆರೆಯ ರಾಷ್ಟ್ರಗಳ ಜನರಿಗೆ ರಕ್ಷಣೆ ನೀಡುವ ಸದುದ್ದೇಶವನ್ನು ಸಿಎಎ ಹೊಂದಿದೆ ಎಂದು ಸರ್ಕಾರವು ಒಂದು ಪವಿತ್ರ ಘೋಷಣೆಯನ್ನು ಮಾಡುತ್ತದೆ. ಆದರೆ, ವಾಸ್ತವವಾಗಿ ಈ ಕಾಯ್ದೆಯಲ್ಲಿ ಕಿರುಕುಳಕ್ಕೊಳಗಾಗಿರುವ ಸಮುದಾಯಗಳ ಪಟ್ಟಿಯಲ್ಲಿ ಮುಸಲ್ಮಾನರನ್ನು ಬಿಟ್ಟು ಉಳಿದ ಧರ್ಮಗಳು ಇವೆ ಎಂದರು.
    ಸಿಐಟಿಯು ಕಾರ್ಯದರ್ಶಿ ಲಕ್ಷಣ ಹಂದ್ರಾಳ ಮಾತನಾಡಿ, ಜುಲೈ 2018ರಲ್ಲಿ ಮೊದಲ ಎನ್‌ಆರ್‌ಸಿ ಪಟ್ಟಿಯು ಹೊರಬಂದಾಗ ಒಟ್ಟು ಅರ್ಜಿ ಸಲ್ಲಿಸಿದ 3.2 ಕೋಟಿ ಜನರಲ್ಲಿ 40 ಲಕ್ಷ ಜನರ ಹೆಸರುಗಳು ಅದರಲ್ಲಿ ಇರಲಿಲ್ಲ. ಇದು ಊಹಿಸಲು ಅಸಾಧ್ಯವಾದ ಸಂಖ್ಯೆ. 2013ರಲ್ಲಿ ಸುಪ್ರಿಂಕೋರ್ಟ್ ನೇರ ನಿಗಾವಣೆಯಲ್ಲಿ ನಡೆದ ಆ ಪ್ರಕ್ರಿಯೆಗೆ 52,000 ಮಂದಿಯನ್ನು ನಿಯೋಜಿಸಲಾಗಿದೆ ಎಂದರು.
    ಅಂಗನವಾಡಿ ನೌಕರರ ಸಂಘದ ಉಪಾಧ್ಯಕ್ಷೆ ಭಾರತಿ ವಾಲಿ ಮಾತನಾಡಿ, ಎಲ್ಲ ರಂಗಗಳಲ್ಲೂ ತಾನು ಸೋತಿರುವುದನ್ನು ಮರೆಮಾಚಿಕೊಳ್ಳಲು ಕೇಂದ್ರ ಸರ್ಕಾರವು ಈ ಕಾಯ್ದೆಯನ್ನು ಬಳಸಿಕೊಳ್ಳುತ್ತಿದೆ. ಅತೀವ ಆರ್ಥಿಕ ಬಿಕ್ಕಟ್ಟು, ನಿರುದ್ಯೋಗ, ಬಡತನ, ಬೆಲೆ ಏರಿಕೆ, ಉದ್ಯೋಗ ನಾಶ, ರೈತರ ಆತ್ಮಹತ್ಯೆಗಳು, ಜಿಡಿಪಿ ಕುಸಿತ, ಮಹಿಳೆಯರ ಮೇಲಿನ ಪಾತಕಗಳು, ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣ ಇತ್ಯಾದಿ ಕಾರಣಗಳಿಗಾಗಿ ಆಕ್ರೋಶಗೊಂಡಿರುವ ಜನರ ಗಮನವನ್ನು ಬೇರೆಡೆ ಸೆಳೆಯುವ ಹುನ್ನಾರ ಇದು ಎಂದರು.
    ಸುನಂದ ನಾಯಕ, ಮಳಸಿದ್ದ ನಾಯಕೋಡಿ, ಸಲೀಂ ನಾಯಕೋಡಿ, ಸುಭಾಸ ತಳಕೇರಿ, ಸೋಮನಿಂಗ ತಳಕೇರಿ, ರಾಜಮಾ ನದಾಫ, ಸೋಮುಬಾಯಿ ರಾಠೋಡ, ಸುಮಿತ್ರ ಘೊಣಸಗಿ, ಕುಸುಮಾ ಹಜೇರಿ, ಸಿದ್ರಾಮ ಬಂಗಾರಿ, ಶಕೀಲಾ ಜಮಾಜಾರ, ಯಮನಪ್ಪ ಚೂರಿ, ದಾದಾಪೀರ ಜೈನಾಪೂರ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts