ಹೂವಿನಲ್ಲಿ ಅರಳಿದ ಮೊಗ್ಗು !

ವಿಜಯಪುರ: ಮೊಗ್ಗು ಅರಳಿ ಹೂವಾಗುವುದನ್ನು ನೋಡಿದ್ದೇವೆ….ಹೂವು ಅರಳಿ ಮೊಗ್ಗಾಗುವುದನ್ನು ಎಲ್ಲಾದರೂ ನೋಡಿದ್ದೀರಾ?

ಅಚ್ಚರಿಯಾದರೂ ಬಿಸಿಲೂರಿನಲ್ಲಿ ಇಂಥ ಅಪರೂಪದ ಸನ್ನಿವೇಶ ಕಂಡು ಬಂದಿದೆ. ನಗರದ ಆಲಕುಂಟೆ ನಗರದ ನಿವಾಸಿ ಜಿ.ವಿ. ಯಶವಂತ ಎಂಬುವರ ಮನೆಯಲ್ಲಿ ಹೂವು ಮೊಗ್ಗು ಅರಳಿಸಿದೆ. ಮೂರು ಗಿಡಗಳಲ್ಲಿ ಇಂಥ ಸನ್ನಿವೇಶ ಕಂಡು ಬಂದಿದ್ದು, ಇದೊಂದು ಸೃಷ್ಟಿಯ ವೈಚಿತ್ರೃ ಎನ್ನಲಾಗಿದೆ.

ನಿವೃತ್ತ ಮುಖ್ಯ ಯೋಜನಾಧಿಕಾರಿ ಯಶವಂತ ಅವರಿಗೆ ಹೂವು ಬೆಳೆಸುವ ಹವ್ಯಾಸ. ಮನೆ ಸುತ್ತಲೂ ಹೂವು ಬೆಳೆಸಿದ್ದಾರೆ. ಸಣ್ಣ ಸಣ್ಣ ಪಾಟ್‌ಗಳಲ್ಲಿ ಹೂವು ಸೇರಿ ಹಲವು ಅಲಂಕಾರಿಕ ಸಸಿಗಳನ್ನು ನೆಟ್ಟು ಪೋಷಿಸುತ್ತಿದ್ದಾರೆ. ಆ ಪೈಕಿ ಮೂರು ಗುಲಾಬಿ ಗಿಡಗಳಲ್ಲಿ ಮೊಗ್ಗು ಕಾಣಿಸಿಕೊಂಡಿದ್ದು, ಕ್ರಮೇಣ ಅಲ್ಲೂ ಹೂವು ಅರಳುತ್ತಿವೆ. ಇದನ್ನು ಕಂಡು ಕುಟುಂಬಸ್ಥರು ಪರಮಾಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಈ ಮೊದಲು ಕೇವಲ ಒಂದೇ ಹೂ ಬರುತ್ತಿತ್ತು. ಇದೇ ಮೊದಲ ಬಾರಿಗೆ ಮೂರು ಗುಲಾಬಿಗಳ ಮಧ್ಯೆ ಪ್ರತ್ಯೇಕವಾಗಿ ಮೊಗ್ಗು ಕಾಣಿಸಿಕೊಂಡಿದೆ ಎನ್ನುತ್ತಾರೆ ಯಶವಂತ.

ಈವರೆಗೆ ಇಂಥ ಸನ್ನಿವೇಶ ಕಂಡು ಬಂದ ಉದಾಹರಣೆ ಇಲ್ಲ. ಸಯಾಮಿ ಮಕ್ಕಳು ಹುಟ್ಟುವ ಥರ ಇಲ್ಲೂ ಹೂವಿನಲ್ಲಿ ಹೂ ಕಾಣಿಸಿಕೊಂಡಿದೆ. ಈ ಬಗ್ಗೆ ಸಂಶೋಧನೆಯಾಗಬೇಕು. ಹೂವು ಕತ್ತರಿಸಿ ಮತ್ತೆ ಅದೇ ರೀತಿ ಬರುತ್ತಾ? ಕಾರಣವೇನು? ಎಂಬುದನ್ನು ಪರಿಶೀಲಿಸಬೇಕು. ಸೃಷ್ಟಿಯ ವೈಚಿತ್ರೃಗಳಲ್ಲಿ ಇದೂ ಒಂದು.
– ಡಾ. ಪೀರಜಾದೆ ತೋಟಗಾರಿಕೆ ವಿಜ್ಞಾನಿ