ಸ್ತ್ರೀಯರಿಗೆ ಶಿಕ್ಷಣ ಅಸ್ತ್ರವಾಗಲಿ

ವಿಜಯಪುರ: ಮಹಿಳೆಯರು ಎಲ್ಲ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಶಿಕ್ಷಣದ ಅಸ್ತ್ರದಿಂದ ಮಾತ್ರ ಸಾಧ್ಯ ಎಂದು ಪದ್ಮಶ್ರೀ ಪುರಷ್ಕೃತ ಖ್ಯಾತ ವೈದ್ಯೆ, ಐಆರ್​ಆರ್​ಎಚ್ ಸಂಶೋಧನಾ ಸಂಸ್ಥೆ ನಿರ್ದೇಶಕಿ ಡಾ.ಕಾಮಿನಿ ರಾವ್ ಹೇಳಿದರು.

ನಗರದ ಬಿಎಲ್​ಡಿಇ ಡೀಮ್್ಡ ವಿಶ್ವವಿದ್ಯಾಲಯದಲ್ಲಿ ಗುರುವಾರ ನಡೆದ 6ನೇ ಘಟಿಕೋತ್ಸವದಲ್ಲಿ ಮಾತನಾಡಿದ ಅವರು, ಪ್ರತಿ ಹಂತದಲ್ಲಿ ಮಹಿಳೆಯರಿಗೆ ಎದುರಾಗುವ ಸವಾಲುಗಳನ್ನು ಧೈರ್ಯವಾಗಿ ಎದುರಿಸಬೇಕಿದೆ ಎಂದರು.

ವೈದ್ಯಕೀಯ ಕ್ಷೇತ್ರಗಳಲ್ಲಿಯೂ ಮಹಿಳೆಯರಿಗೆ ಸವಾಲುಗಳಿವೆ. ತಮ್ಮ ಮಕ್ಕಳ ಹೆರಿಗೆ ಹಾಗೂ ಪ್ರಸೂತಿಗೆ ಸಂಬಂಧಿಸಿದ ವೈದ್ಯಕೀಯ ಸಲಹೆ, ಚಿಕಿತ್ಸೆ ಮಹಿಳಾ ವೈದ್ಯರಿಂದಲೇ ಆಗಬೇಕು ಎಂಬುದು ಬಹುತೇಕ ಪಾಲಕರ ಇಚ್ಛೆಯಾಗಿರುತ್ತದೆ. ಅದರನ್ವಯ ಈ ಕ್ಷೇತ್ರದಲ್ಲಿ ಮಹಿಳಾ ವೈದ್ಯರಿಗೆ ವಿಪುಲ ಅವಕಾಶಗಳಿವೆ ಎಂದು ವಿವರಿಸಿದರು.

ಸ್ತ್ರೀಯರು ಇಂದು ಹಲವಾರು ಕ್ಷೇತ್ರದಲ್ಲಿ ಸಾಧನೆ ಮೆಟ್ಟಿಲೇರಿದ್ದಾರೆ. ಪುರುಷರು ಅನೇಕ ಕ್ಷೇತ್ರಗಳಲ್ಲಿ ತಮ್ಮ ಪ್ರಾಬಲ್ಯ ಸಾಧಿಸಿದ್ದಾರೆ. ಬೆಡ್​ರೂಂನಿಂದ ಹಿಡಿದು ಬೋರ್ಡ್​ರೂಂವರೆಗೆ ಪುರುಷರು ಪ್ರಾಬಲ್ಯದ ಸಾರಥ್ಯವನ್ನೆ ವಹಿಸಿದ್ದಾರೆ ಎಂಬುದನ್ನು ಅಲ್ಲಗಳೆಯುವಂತಿಲ್ಲ ಎಂದರು.

ಮಹಿಳೆಯರು ಉನ್ನತ ಸ್ತರದ ಹುದ್ದೆಗಳಲ್ಲಿ ಅನೇಕ ರೀತಿಯ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಸಾಕಷ್ಟು ಸಮಯವನ್ನೂ ಆ ಹುದ್ದೆಗಳಿಗೆ ಮೀಸಲಿರಿಸಬೇಕಾಗುತ್ತದೆ. ಮನೆ, ಪತಿ, ಮಕ್ಕಳು ಹೀಗೆ ಕೌಟುಂಬಿಕ ಜವಾಬ್ದಾರಿಗಳ ಮಧ್ಯೆ ತನ್ನ ಕೆಲಸಕ್ಕೂ ಸಮಯ ನಿಗದಿಗೊಳಿಸಬೇಕಾಗುತ್ತದೆ. ಈ ಎಲ್ಲ ಸಂದರ್ಭಗಳನ್ನು ಸಮರ್ಥವಾಗಿ ನಿಭಾಯಿಸುವುದು ಒಂದು ಸವಾಲಿನ ಕೆಲಸವೂ ಸ್ತ್ರೀಯರ ಮುಂದಿದೆ ಎಂದು ಉಲ್ಲೇಖಿಸಿದರು.

ಲಿಂಗ ತಾರತಮ್ಯ ಒಂದು ರೀತಿ ಮಾನವ ಹಕ್ಕುಗಳ ಸ್ಪಷ್ಟವಾದ ಉಲ್ಲಂಘನೆ. ಭಾರತೀಯ ಸಂವಿಧಾನ ಮಹಿಳೆಯರಿಗೆ ಹಾಗೂ ಪುರುಷರಿಗೆ ಸಮಾನ ಹಕ್ಕುಗಳನ್ನು ಕರುಣಿಸಿದೆ. ಆದರೂ ಲಿಂಗ ತಾರತಮ್ಯ ನಡೆಯುತ್ತಲೇ ಇದೆ. ಲಿಂಗ ತಾರತಮ್ಯ ಮಹಿಳೆಯ ಹಕ್ಕುಗಳನ್ನೇ ಕಸಿದುಕೊಳ್ಳುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪ್ರತಿದಿನದ ಪ್ರತಿ ನಿಮಿಷಕ್ಕೆ ಗರ್ಭಿಣಿ ಅಸುನೀಗುತ್ತಿದ್ದಾಳೆ. ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿಯೇ ಗರ್ಭಿಣಿಯರ ಸಾವಿನ ಪ್ರಮಾಣ ಅಧಿಕವಾಗಿದೆ. ಹೆಣ್ಣಿನ ಸಂತತಿ ಉಳಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದರು.

ಬಬಲೇಶ್ವರ ಶಾಸಕ, ಬಿಎಲ್​ಡಿಇ ಸಂಸ್ಥೆ ಅಧ್ಯಕ್ಷ ಡಾ.ಎಂ.ಬಿ. ಪಾಟೀಲ, ಉಪ ಕುಲಪತಿ ಡಾ.ಎಂ.ಎಸ್. ಬಿರಾದಾರ, ಡಾ.ಬಿ.ಜಿ. ಮೂಲಿಮನಿ ಸೇರಿದಂತೆ ವಿವಿಧ ವಿಷಯಗಳ ಡೀನರು, ಬೋಧಕರು ಉಪಸ್ಥಿತರಿದ್ದರು.

ವೈದ್ಯರ ಚಿನ್ನದ ನಗೆ

ವೈದ್ಯಕೀಯ ವಿಭಾಗದಲ್ಲಿ ಎಂಬಿಬಿಎಸ್, ಪಿಜಿ ಹಾಗೂ ಪಿಜಿ ಡಿಪ್ಲೊಮಾ ಸೇರಿ ವಿವಿಧ ವಿಷಯಗಳಲ್ಲಿ ಸಾಧನೆ ತೋರಿದ ವಿದ್ಯಾರ್ಥಿಗಳಿಗೆ ಬಂಗಾರದ ಪದಕಗಳನ್ನು ವಿತರಿಸಲಾಯಿತು.

ಎಂಬಿಬಿಎಸ್ ವಿಭಾಗದಲ್ಲಿ ಟಾಪರ್ ಆಗಿ ಹೊರಹೊಮ್ಮಿದ ಡಾ.ಲಿವಿಂಗ್​ಸ್ಟನ್ ಶಾರೋನ್ ವಿಲ್ಸನ್ ಒಟ್ಟು ನಾಲ್ಕು ಚಿನ್ನದ ಪದಕ ಪಡೆದರು. ಡಾ.ಸ್ಮೃತಿ ಶ್ರೀ ಹಾಗೂ ಡಾ.ವಾಣಿ ಮೇಟಿ ತಲಾ ಮೂರು ಚಿನ್ನದ ಪದಕ ಹಾಗೂ ಡಾ.ಪೂಜಾ ಕಠಾರೆ ಎರಡು ಚಿನ್ನದ ಪದಕ ಪಡೆದುಕೊಂಡರು.

ಈ ಘಟಿಕೋತ್ಸವದಲ್ಲಿ ಒಟ್ಟು 214 ಪದವಿ ಪ್ರಮಾಣ ಪತ್ರ ನೀಡಲಾಗಿದ್ದು, 127ಎಂಬಿಬಿಎಸ್ ವಿದ್ಯಾರ್ಥಿಗಳು, 64 ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು, 14 ಸ್ನಾತಕೋತ್ತರ ಡಿಪ್ಲೊಮಾ ವಿದ್ಯಾರ್ಥಿಗಳು, ಒಬ್ಬ ಎಫ್​ಇಎಸ್​ಎಸ್ ವಿದ್ಯಾರ್ಥಿ, 4 ಪಿಎಚ್​ಡಿ ವಿದ್ಯಾರ್ಥಿಗಳು, ಒಬ್ಬರು ಎಂಸಿಎಚ್ ವಿದ್ಯಾರ್ಥಿ, ಮೂವರು ಎಚ್​ಟಿಟಿಸಿ ವಿದ್ಯಾರ್ಥಿಗಳು ಪ್ರಮಾಣ ಪತ್ರ ಸ್ವೀಕರಿಸಿದರು.

ಯುವ ವಿಜ್ಞಾನಿ ಅವಾರ್ಡ್

ವೈದ್ಯಕೀಯ ಕ್ಷೇತ್ರದಲ್ಲಿ ಅನುಪಮ ಸಾಧನೆ-ಸಂಶೋಧನೆ ತೋರಿದ ಸಾಧಕರಾದ ಶರೀರ ರಚನಾ ಶಾಸ್ತ್ರ ವಿಭಾಗದ ಡಾ.ಗವಿಸಿದ್ದಪ್ಪ ಹಾದಿಮನಿ ಅವರಿಗೆ ಯುವ ವಿಜ್ಞಾನಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪ್ರಸೂತಿ ವಿಭಾಗದ ಡಾ.ಶೈಲಜಾ ಬಿದರಿ ಅವರಿಗೆ ಹಿರಿಯ ವಿಜ್ಞಾನಿ ಪ್ರಶಸ್ತಿ ಪ್ರದಾನ ಮಾಡಲಾಯಿತು.