ಯುವ ಸಮೂಹವೇ ದೇಶದ ಆಸ್ತಿ

ವಿಜಯಪುರ: ಜನಸಂಖ್ಯೆಯಲ್ಲಿ ಅಧಿಕ ಪಾಲಿರುವ ಯುವಕರು ದೇಶದ ಆಸ್ತಿ ಇದ್ದಂತೆ. ಯುವ ಶಕ್ತಿಯ ಸದ್ಭಳಿಕೆಯಿಂದ ರಾಷ್ಟ್ರದ ಪ್ರಗತಿ ಸಾಧ್ಯ ಎಂದು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಡಾ.ಜಾವೀದ್ ಜಮಾದಾರ್ ಹೇಳಿದರು.
ನಗರದ ಬಿಎಲ್‌ಡಿಇ ಸಂಸ್ಥೆಯ ಬಿ.ಎಸ್. ಪಾಟೀಲ ಕಾಲೇಜಿನಲ್ಲಿ ನೆಹರು ಯುವ ಕೇಂದ್ರ, ಯುವ ಕಾರ್ಯ ಮತ್ತು ಕ್ರೀಡಾ ಮಂತ್ರಾಲಯ, ಬಿಎಲ್‌ಡಿಇ ಸಂಸ್ಥೆಯ ಎ.ಎಸ್. ಪಾಟೀಲ ವಾಣಿಜ್ಯ ಮಹಾವಿದ್ಯಾಲಯ, ಎಂ.ಬಿ.ಎ. ಮಹಾವಿದ್ಯಾಲಯ, ಆಯುಷ ಇಲಾಖೆ ಹಾಗೂ ಭಾರತ ಸೇವಾದಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಯುವ ಸಮಾವೇಶ ಹಾಗೂ ಯೋಗ ತರಬೇತಿ ಸಪ್ತಾಹ ಉದ್ಘಾಟಿಸಿ ಅವರು ಮಾತನಾಡಿದರು.
ಯುವಕರು ಸಾಮಾಜಿಕ, ಆರ್ಥಿಕ ಹಾಗೂ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. ಯುವಕರು ವ್ಯಕ್ತಿತ್ವ ವಿಕಸನ ಹಾಗೂ ಉತ್ತಮ ಚಾರಿತ್ರೃ ನಿರ್ಮಾಣಕ್ಕೆ ನೆರವಾಗುವಂಥ ರಾಷ್ಟ್ರೀಯ ಯೋಜನೆಗಳಲ್ಲಿ ಪಾಲ್ಗೊಳ್ಳಬೇಕು. ಇಂದಿನ ಒತ್ತಡದ ಜೀವನದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ನಿರಂತರ ಯೋಗ ಮಾಡುವುದೇ ಒಂದೇ ಮಾರ್ಗವಾಗಿದೆ ಎಂದರು.
ಪ್ರಾಚಾರ್ಯ ಡಾ.ಎಚ್.ಎಂ. ಮುಜಾವರ್ ಅಧ್ಯಕ್ಷತೆ ವಹಿಸಿ, ಇತ್ತೀಚಿನ ದಿನಗಳಲ್ಲಿ ಯುವಕರು ಮೊಬೈಲ್‌ಗಳನ್ನು ಹೆಚ್ಚು ಬಳಸುವುದರಿಂದ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಯುವಕರು ದುಶ್ಚಟಗಳನ್ನು ಬಿಟ್ಟು ಸಮಾಜದ ಏಳಿಗೆಗಾಗಿ ಶ್ರಮಿಸಬೇಕು. ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳುವುದು ಅತ್ಯವಶ್ಯಕ, ಶ್ರಮದಾನದ ಮೂಲಕ ಹಸರೀಕರಣಕ್ಕೆ ಎಲ್ಲರೂ ಮುಂದಾಗಬೇಕು ಎಂದು ಹೇಳಿದರು.
ನೆಹರು ಯುವ ಕೇಂದ್ರದ ಲೆಕ್ಕಾಧಿಕಾರಿ ಬೇಬಿ ದೊಡಮನಿ ಪ್ರಾಸ್ತಾವಿಕ ಮಾತನಾಡಿದರು. ಯೋಗಶಿಕ್ಷಕ ಎಂ.ಪಿ. ದೊಡಮನಿ ಅವರು ವಿದ್ಯಾರ್ಥಿಗಳಿಗೆ ಯೋಗಾಸನದ ಮಹತ್ವ ತಿಳಿಸಿಕೊಟ್ಟರು.
ಭಾರತ ಸೇವಾದಳದ ಜಿಲ್ಲಾ ಸಂಘಟಕ ನಾಗೇಶ ಡೋಣೂರ, ಪ್ರೊ. ಮುರುಗೇಶ ಪಟ್ಟಣಶೆಟ್ಟಿ, ದತ್ತಾತ್ರಯ ಹಿಪ್ಪರಗಿ, ಎಸ್.ಎಲ್. ರಾಠೋಡ, ಪ್ರೊ.ಐ.ಬಿ. ಚಿಪ್ಪಲಕಟ್ಟಿ, ಪ್ರೊ. ಮಹಾಂತೇಶ ಜೇವೂರ ಉಪಸ್ಥಿತರಿದ್ದರು.
ಉಪಪ್ರಾಚಾರ್ಯ ಪ್ರೊ.ವಿ.ಎಸ್.ಬಗಲಿ ಸ್ವಾಗತಿಸಿದರು. ಮಾಳಿಂಗರಾಯ ಕಡ್ಲಿಮಟ್ಟಿ ನಿರೂಪಿಸಿದರು. ಪ್ರೊ.ಡಿ.ಬಿ. ಕೋಟಿ ವಂದಿಸಿದರು.

Leave a Reply

Your email address will not be published. Required fields are marked *