ಬರದ ಜಿಲ್ಲೆಯಲ್ಲಿ ಬಿಎಸ್​ವೈ ಸಂಚಲನ

ವಿಜಯಪುರ: ಬಿಜೆಪಿ ರಾಜ್ಯಾಧ್ಯಕ್ಷ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಆಗಮನದೊಂದಿಗೆ ಅವಿಭಜಿತ ವಿಜಯಪುರ ಜಿಲ್ಲೆಯಲ್ಲಿ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಉಪಚುನಾವಣೆ ಕಣ ರಂಗೇರಿದೆ.

ಶನಿವಾರ ಜಿಲ್ಲೆ ಮೂರು ಕ್ಷೇತ್ರಗಳಲ್ಲಿ ಮಿಂಚಿನ ಸಂಚಲನ ಉಂಟು ಮಾಡಿರುವ ಯಡಿಯೂರಪ್ಪ ವಿಧಾನ ಪರಿಷತ್ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಗೆಲುವಿಗಾಗಿ ಒಗ್ಗಟ್ಟಿನ ಮಂತ್ರ ಜಪಿಸಿದ್ದಾರೆ. ಸಣ್ಣ ಪುಟ್ಟ ಭಿನ್ನಾಭಿಪ್ರಾಯ ಏನೇ ಇರಲಿ ಅದನ್ನು ಬದಿಗೊತ್ತಿ ಪಕ್ಷದ ಗೆಲುವಿಗೆ ಶ್ರಮಿಸಲು ಮನವಿ ಮಾಡಿದ್ದಾರೆ.

ಸಿಂದಗಿ, ವಿಜಯಪುರ ಮತ್ತು ಬಸವನಬಾಗೇವಾಡಿಯಲ್ಲಿ ಪಕ್ಷದ ಪರ ಪ್ರಚಾರ ನಡೆಸಿರುವ ಬಿಎಸ್​ವೈ,ಈ ಚುನಾವಣೆಗಿಂತ ಮುಂಬರುವ ಲೋಕಸಭೆ ಚುನಾವಣೆಗೆ ಹೆಚ್ಚಿನ ಒತ್ತು ಕೊಟ್ಟರು. ಸಿಂದಗಿ ಮತ್ತು ವಿಜಯಪುರದಲ್ಲಿ ತಮ್ಮ ಭಾಷಣದ ಬಹುತೇಕ ಸಮಯವನ್ನು ರಾಜ್ಯ ಮತ್ತು ರಾಷ್ಟ್ರ ರಾಜಕಾರಣಕ್ಕೆ ಮೀಸಲಿಟ್ಟರು. ವಿಧಾನ ಪರಿಷತ್​ನ ಪ್ರತಿಸ್ಪರ್ಧಿ ಮೇಲೆ ವಾಗ್ದಾಳಿ ನಡೆಸುವರೆಂಬ ಕಾರ್ಯಕರ್ತರ ನಿರೀಕ್ಷೆ ಹುಸಿಯಾಯಿತು.

ಕಾರ್ಯಕ್ರಮದಲ್ಲಿ ಮತದಾರರಿಗಿಂತ ಕಾರ್ಯಕರ್ತರೇ ಯಥೇಚ್ಛವಾಗಿ ಪಾಲ್ಗೊಂಡಿದ್ದು ಕಂಡು ಬಂತು. ಸಂಗನಬಸವ ಮಂಗಲ ಕಾರ್ಯಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಾಗಠಾಣ, ಬಬಲೇಶ್ವರ ಮತ್ತು ವಿಜಯಪುರ ನಗರ ಕ್ಷೇತ್ರದ ಕಾರ್ಯಕರ್ತರು ಭಾಗವಹಿಸಿದ್ದರು. ಪಕ್ಷದ ಆಯಕಟ್ಟಿನ ಹುದ್ದೆಯಲ್ಲಿದ್ದವರೇ ಹೆಚ್ಚಾಗಿ ಪಾಲ್ಗೊಂಡಿದ್ದರು. ಹೀಗಾಗಿ ಬಬಲೇಶ್ವರದ ಪರಾಜಿತ ಅಭ್ಯರ್ಥಿ ವಿಜುಗೌಡರು ಮತದಾರರ ಕೈ ಎತ್ತಿಸುವ ಮೂಲಕ ತಮ್ಮ ಬೆಂಬಲದ ಬಗ್ಗೆ ವರಿಷ್ಠರ ಗಮನ ಸೆಳೆದರು. ಶಾಸಕರಾದ ಮುರುಗೇಶ ನಿರಾಣಿ, ಗೋವಿಂದ ಕಾರಜೋಳ, ಸೋಮನಗೌಡ ಪಾಟೀಲ, ವಿಪ ಸದಸ್ಯ ಹಣಮಂತ ನಿರಾಣಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ರವಿಕುಮಾರ, ಮಾಜಿ ಶಾಸಕ ರಮೇಶ ಭೂಸನೂರ, ಉಪಮೇಯರ್ ಗೋಪಾಲ ಘಟಕಾಂಬಳೆ, ರವಿಕಾಂತ ಬಗಲಿ, ಸಂಗರಾಜ ದೇಸಾಯಿ ಇತರರಿದ್ದರು.

ಹೊಯ್ಕೊ ಬಡ್ಕೋ ಸರ್ಕಾರ್!

ರಾಜ್ಯದಲ್ಲಿ ಹೊಯ್ಕೋ ಬಡ್ಕೋ ಸರ್ಕಾರ ಜಾರಿಯಲ್ಲಿದೆ ಎನ್ನುವ ಮೂಲಕ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಬಿರುಸಿನ ಭಾಷಣ ಆರಂಭಿಸಿದರು. ಪಾಕಿಸ್ತಾನ, ಚೀನಾ ಪರವಾಗಿ ಹೇಳಿಕೆ ನೀಡುವ ಮೂಲಕ ಕಾಂಗ್ರೆಸ್ ದೇಶ ವಿರೋಧಿ ಕೃತ್ಯ ನಡೆಸಿದೆ. ನವಜೋತ ಸಿಂಗ್ ಸಿದ್ದು ಪಾಕಿಸ್ತಾನ ಪರ ಮಾತಾಡ್ತಾನೆ. ರಾಹುಲ್ ಗಾಂಧಿ ಅದೇನು ಮಾತಾಡ್ತಾನೋ ಪುಣ್ಯಾತ್ಮ ಅವನಿಗೇ ಗೊತ್ತು. ಇಂಥವನನ್ನು ಪ್ರಧಾನಿ ಮಾಡಲಿಕ್ಕೆ ಹೊರಟಿದ್ದು ದುರ್ದೈವ ಸಂಗತಿ ಎಂದರು. ನಂಗೇನು ರೊಕ್ಕದ ಆಸೆ ಇಲ್ಲ. ಬಿಜೆಪಿ ಪ್ರಾಮಾಣಿಕ ಕಾರ್ಯಕರ್ತನಾಗಿ ಸೇವೆ ಸಲ್ಲಿಸಿದ್ದೇನೆ. ನೋಡಕೋತೀನಿ ಮಾಡಕೋತೀನಿ ಎಂಬ ಕಾಂಗ್ರೆಸ್​ನವರ ಹೇಳಿಕೆಗೆ ಅಂಜೋದಿಲ್ಲ. ಫೀನಿಕ್ಸ್ ಪಕ್ಷಿಯಂತೆ ಎದ್ದು ಬಂದಿದ್ದೀನಿ. ನಿಯತ್ತಿನಿಂದ ಚುನಾವಣೆ ಗೆಲ್ಲುವ ಮೂಲಕ ಮುಂದಿನ ಲೋಕಸಭೆ ಚುನಾವಣೆಗೆ ಅಡಿಪಾಯ ಹಾಕುವುದಾಗಿ ತಿಳಿಸಿದರು.

ರಾಜ್ಯ ಸರ್ಕಾರದ ವಿರುದ್ಧ ಯಡಿಯೂರಪ್ಪ ವಾಗ್ದಾಳಿ

ಸ್ಥಳೀಯ ಸಂಗನಬಸವ ಮಂಗಲ ಕಾರ್ಯಾಲಯದಲ್ಲಿ ನಡೆದ ಪ್ರಚಾರ ಕಾರ್ಯಕ್ರಮದಲ್ಲಿ ಸಮ್ಮಿಶ್ರ ಸರ್ಕಾರದ ವಿರುದ್ಧ ಹರಿಹಾಯ್ದ ಮಾಜಿ ಸಿಎಂ ಯಡಿಯೂರಪ್ಪ, ‘ರಾಜ್ಯದಲ್ಲಿ ಸರ್ಕಾರ ಸತ್ತಿದೆ. ಉತ್ತರ ಕರ್ನಾಟಕದಲ್ಲಿ ಬರ ಆವರಿಸಿದ್ದರೂ ನಿರ್ಲಕ್ಷ್ಯ ಧೋರಣೆ ತಾಳಿದೆ. ವರ್ಗಾವಣೆ ದಂಧೆಯಲ್ಲಿ ತೊಡಗಿಕೊಂಡಿದೆ. ತುಘಲಕ್ ದರಬಾರ್ ಜಾರಿಯಲ್ಲಿದೆ. ಕಮಿಷನ್ ಏಜೆಂಟ್​ನಂತೆ ಸರ್ಕಾರ ವರ್ತಿಸುತ್ತಿದೆ ಎಂದು ಆರೋಪಿಸಿದರು. ಲೋಕಸಭೆ ಚುನಾವಣೆಯಲ್ಲಿ ರಾಜ್ಯದ ಕನಿಷ್ಠ 22 ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲ್ಲಲಿದ್ದಾರೆ. ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದರು.

ಕಾಂಗ್ರೆಸ್ ಕ್ಯಾಂಡಿಡೇಟ್ ಡಮ್ಮಿ

ಮಾಜಿ ಸಚಿವ ಲಕ್ಷ್ಮಣ ಸವದಿ ಮಾತನಾಡಿ, ವಿಜಯಪುರ-ಬಾಗಲಕೋಟೆ ವಿಧಾನ ಪರಿಷತ್ ಕ್ಷೇತ್ರ ಬಿಜೆಪಿಯದ್ದು. ಈ ಹಿಂದೆ ಜಿ.ಎಸ್. ನ್ಯಾಮಗೌಡರಿದ್ದು, ಬಳಿಕ ಯತ್ನಾಳರು ಗೆದ್ದು ಈಗ ಅವರು ಬಿಜೆಪಿಯಲ್ಲಿದ್ದಾರೆ. ಮುಂದೆಯೂ ಗೂಳಪ್ಪ ಶೆಟಗಾರ ಗೆಲ್ಲುವ ಮೂಲಕ ಕ್ಷೇತ್ರ ಬಿಜೆಪಿ ವಶವಾಗುವುದರಲ್ಲಿ ಅನುಮಾನವಿಲ್ಲ ಎಂದರು. ಕಾಂಗ್ರೆಸ್ ಅಭ್ಯರ್ಥಿ ಡಮ್ಮಿ ಕ್ಯಾಂಡಿಡೇಟ್. ಗೂಳಪ್ಪ ಶೆಟಗಾರ ಅವರೆ ನಿಜವಾದ ಅಭ್ಯರ್ಥಿ. ಬೇಕಾದರೆ ಬ್ಯಾಲೆಟ್ ಪೇಪರ್ ತೆಗೆದು ನೋಡ್ರಿ. ನಂ.1 ಸ್ಥಾನದಲ್ಲಿ ಗೂಳಪ್ಪ ಇದ್ದಾರೆಂದು ಮಾರ್ವಿುಕವಾಗಿ ನುಡಿದರು.

ವಿಡಿಯೋ ವೈರಲ್

ವಿಜಯಪುರ- ಬಾಗಲಕೋಟೆ ವಿಧಾನ ಪರಿಷತ್ ಚುನಾವಣೆ ಹಿನ್ನೆಲೆ ಸಿಂದಗಿ ತಾಲೂಕಿನ ಬಿಜೆಪಿ ಅಧ್ಯಕ್ಷ ಸಿದ್ದು ಬುಳ್ಳಾ ಗ್ರಾಮ ಪಂಚಾಯಿತಿ ಸದಸ್ಯರಿಗೆ ಹಣ ಹಂಚಿರುವ ಬಗ್ಗೆ ವಿಡಿಯೋ ವೈರಲ್ ಆಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರ ಸಭೆ ಮುಗಿದ ನಂತರ ಸಾತವೀರೇಶ್ವರ ಸಭಾಭವನದಲ್ಲೇ ಗ್ರಾಮ ಪಂಚಾಯಿತಿವಾರು ಸದಸ್ಯರಿಗೆ ಹಣ ಹಂಚಿದ್ದಾರೆ. ಬಿಎಸ್​ವೈ ಕಾರ್ಯಕ್ರಮಕ್ಕೆ ಬಂದ ಖರ್ಚಿನ ವೆಚ್ಚವನ್ನು ಸದಸ್ಯರಿಗೆ ಕೊಡುತ್ತಿರುವುದಾಗಿ ವಿಡಿಯೋದಲ್ಲಿ ಹೇಳಿರುವ ಬುಳ್ಳಾ, ಮತದಾರರು ಇನ್ನೂ ಹೆಚ್ಚಿನ ಹಣಕ್ಕೆ ಬೇಡಿಕೆ ಇಟ್ಟಾಗ ಶಾಸಕರು ಹೇಳಿದಷ್ಟು ಮಾತ್ರ ಹಣ ಕೊಡುತ್ತಿರುವುದಾಗಿ ತಿಳಿಸಿದ್ದಾರೆ.