ಸೇವಾಭದ್ರತೆ ನೀಡಲು ಹೊರಗುತ್ತಿಗೆ ನೌಕರರ ಆಗ್ರಹ

ಸುತ್ತೋಲೆ ಹಿಂಪಡೆಯಲು ಒತ್ತಾಯ >>

ಬಸವನಬಾಗೇವಾಡಿ: ಹೊರಗುತ್ತಿಗೆ ಆಧಾರದಲ್ಲಿ ವಸತಿ ನಿಲಯಗಳಲ್ಲಿ ಸೇವೆ ಸಲ್ಲಿಸುತ್ತಿರುವ (ಹೊರ ಸಂಪನ್ಮೂಲ) ನೌಕರರಿಗೆ ಸೇವಾ ಭದ್ರತೆ ನೀಡುವಂತೆ ಆಗ್ರಹಿಸಿ ಹಾಸ್ಟೆಲ್ ಹಾಗೂ ವಸತಿಶಾಲೆಗಳ ಹೊರಗುತ್ತಿಗೆ ನೌಕರರು ಶುಕ್ರವಾರ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

ಹಲವು ವರ್ಷಗಳಿಂದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಹಾಗೂ ವಸತಿ ಶಿಕ್ಷಣ ಸಂಘ ಸಂಸ್ಥೆಗಳ ಅಡಿಯಲ್ಲಿರುವ ಹಾಸ್ಟೆಲ್​ಗಳಲ್ಲಿ ಹೊರ ಗುತ್ತಿಗೆ ಆಧಾರದಲ್ಲಿ ಕಡಿಮೆ ಸಂಬಳದಲ್ಲಿ ಅಡುಗೆ ಸಹಾಯಕರು, ಕಾವಲುಗಾರರು ಹಾಗೂ ಡಿ-ದರ್ಜೆ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದೇವೆ. ಆದರೆ, ಸರ್ಕಾರದ ನೇರ ನೇಮಕಾತಿ ಕ್ರಮದಿಂದಾಗಿ ಕೆಲಸ ಕಳೆದುಕೊಂಡು ಇಡೀ ಕುಟುಂಬವೇ ಬೀದಿಪಾಲಾಗುವ ಆತಂಕದಲ್ಲಿದ್ದಾಗ ಜೂ.28 ರಂದು ಬೆಂಗಳೂರಿನಲ್ಲಿ ನಡೆಸಿದ ಧರಣಿಗೆ ಸ್ಪಂದಿಸಿದ ಮುಖ್ಯಮಂತ್ರಿಗಳು ಮರಳಿ ಕೆಲಸಕ್ಕೆ ಸೇರ್ಪಡೆಗೊಳಿಸಿ ಯಥಾಸ್ಥಿತಿ ಕಾಪಾಡುವ ಆದೇಶ ಹೊರಡಿಸಿ ಮಾನವೀಯತೆ ಮೆರೆದಿದ್ದರು. ಆದರೀಗ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಆದೇಶ ಹೊರಡಿಸಿ 6 ತಿಂಗಳ ಅವಧಿಗೆ ಮಾತ್ರ ಕೆಲಸದಲ್ಲಿ ಮುಂದುವರೆಸಿ, 6 ತಿಂಗಳ ನಂತರ ಬಿಡುಗಡೆಗೊಳಿಸುವಂತೆ ನಿರ್ದೇಶನ ನೀಡಿದ್ದರಿಂದ ಬಡ ಕುಟುಂಬಗಳು ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದು, ನಮಗಿದು ಮರಣಶಾಸನವಾದಂತಾಗಿದೆ. ಕೂಡಲೇ ಈ ಸುತ್ತೋಲೆಯನ್ನು ಹಿಂಪಡೆದುಕೊಂಡು, ನಿವೃತ್ತಿವರೆಗೆ ಕೆಲಸದಲ್ಲಿ ಮುಂದುವರಿಸಲು ಅವಕಾಶ ಮಾಡಿಕೊಡಬೇಕೆಂದು ನೌಕರರು ಆಗ್ರಹಿಸಿದರು.

ಸಂಘಟನೆ ಜಿಲ್ಲಾ ಘಟಕದ ಅಧ್ಯಕ್ಷ ಹುಲಗಪ್ಪ ಚಲವಾದಿ, ಕಾರ್ಯದರ್ಶಿ ಪಾವಡೆಪ್ಪ ಚಲವಾದಿ, ಲಕ್ಷ್ಮಣ ಮಸಳಿ, ಶರಣಗೌಡ ಅಂಗಡಿ, ಸುನೀಲ ಹೂಗಾರ, ಸುಧೀರ ಮಾಳಿ, ಡಿಎಸ್​ಎಸ್ ಜಿಲ್ಲಾ ಸಂಚಾಲಕ ಸುರೇಶ ಮಣ್ಣೂರ, ಮಾಂತೇಶ ಸಾಸಬಾಳ, ಅಶೋಕ ಹಾಲ್ಯಾಳ, ಭೀಮು ಸನದಿ, ಬಸವರಾಜ ಪಟ್ಟಣಶೆಟ್ಟಿ, ಗೌರಕ್ಕ ಬೀಳೂರ, ರುಕ್ಮಿಣಿ ಸುಬೇದಾರ, ತಿಪ್ಪವ್ವ ದೊಡಮನಿ, ಫಾತಿಮಾ ಚಪ್ಪರಬಂದ್, ಮಹಾದೇವಿ ಮಾಲಗಾರ, ಶಂಕರ ಚಲವಾದಿ, ರಾಮಪ್ಪ ಚಲವಾದಿ ಸೇರಿದಂತೆ ಇತರರು ಇದ್ದರು.