ಸರ್ಕಾರದ ಯೋಜನೆ ಸದ್ಬಳಸಿಕೊಳ್ಳಿ

ವಿಜಯಪುರ : ಸರ್ಕಾರವು ಹಲವಾರು ರೈತಪರ ಯೋಜನೆಗಳನ್ನು ಜಾರಿಗೊಳಿಸಿದ್ದು, ಅವುಗಳನ್ನು ಸಮರ್ಪಕವಾಗಿ ರೈತರು ಬಳಸಿಕೊಳ್ಳಬೇಕೆಂದು ಜಿಪಂ ಸದಸ್ಯ ಉಮೇಶ ಕೊಳಕೂರ ಹೇಳಿದರು.
ಇಲ್ಲಿನ ಬಬಲೇಶ್ವರ ರೈತ ಸಂಪರ್ಕದಲ್ಲಿ ಭಾನುವಾರ ನಡೆದ ಕೃಷಿ ಅಭಿಯಾನ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ರೈತರು ಬೆಳೆದ ಬೆಳೆಗಳಿಗೆ ಸರ್ಕಾರ ಉತ್ತಮ ಪ್ರೋತ್ಸಾಹ ನೀಡಬೇಕಿದೆ. ಮುಂಗಾರು ಬಿತ್ತನೆಗೆ ರೈತರಿಗೆ ಅನುಕೂಲವಾಗುವಂತೆ ಕೃಷಿ ಇಲಾಖೆ ಬಿತ್ತನೆ ಬೀಜ, ರಸಗೊಬ್ಬರ ನೀಡಬೇಕು ಎಂದು ತಿಳಿಸಿದರು.
ಕೃಷಿ ಇಲಾಖೆ ಜಿಲ್ಲಾ ಜಂಟಿ ನಿರ್ದೇಶಕ ಶಿವಕುಮಾರ ಮಾತನಾಡಿ, ಕೃಷಿ ಅಭಿಯಾನವು ಇಲಾಖೆಯ ನಡಿಗೆ ರೈತರ ಕಡೆಗೆ ಎಂಬ ಧ್ಯೇಯದೊಂದಿಗೆ ಪ್ರಾರಂಭಗೊಂಡು ಸರ್ಕಾರದ ವಿವಿಧ ಯೋಜನೆಗಳು ಹಾಗೂ ಅವುಗಳಿಂದ ರೈತರಿಗೆ ಆಗುವ ಅನುಕೂಲತೆಗಳ ಬಗ್ಗೆ ಸವಿಸ್ತಾರ ಮಾಹಿತಿ ನೀಡಿದರು.
ಈಗಾಗಲೇ ಮುಂಗಾರು ಪ್ರಾರಂಭವಾಗಿದ್ದು, ರೈತರು ಬೀಜಗಳನ್ನು ಹಾಗೂ ಬಿಜೋಪಚಾರ ರಸಾಯನಿಕವನ್ನು ರೈತ ಸಂಪರ್ಕ ಕೇಂದ್ರದಿಂದ ಪಡೆದುಕೊಂಡು ಬಿತ್ತುವ ಮುಂಚೆ ಬಿಜೋಪಚಾರ ಮಾಡಿ ಬಿತ್ತಿದರೆ ಬೀಜದಿಂದ ಬರುವ ರೋಗಗಳನ್ನು ಪರಿಣಾಮಕಾರಿಯಾಗಿ ತಡೆಗಟ್ಟಬಹುದು. ಅದರಂತೆ ಕ್ಯಾಲ್ಸಿಯಂ ಕ್ಲೋರೈಡ್‌ನಿಂದ ಬಿಜೋಪಚಾರ ಮಾಡಿದರೆ ಬರನಿರೋಧಕ ಶಕ್ತಿಯು ಹೆಚ್ಚಾಗಿ ತೇವಾಂಶದ ಕೊರತೆಯಾದರು ಕೂಡಾ ಬೆಳೆಯು ಸದೃಢವಾಗಿ ಬರುತ್ತವೆಂದು ತಿಳಿಸಿದರು.
ಜಿಪಂ ಸದಸ್ಯೆ ಸುಜಾತಾ ಕಳ್ಳಿಮನಿ ಮಾತನಾಡಿ, ಸರ್ಕಾರವು ಹಲವಾರು ರೀತಿಯ ಬಿತ್ತನೆ ಬೀಜಗಳನ್ನು ಸಹಾಯ ಧನದಲ್ಲಿ ವಿತರಿಸುತ್ತಿದ್ದು, ರೈತರು ರೈತ ಸಂಪರ್ಕ ಕೇಂದ್ರದಿಂದ ಉತ್ತಮ ಗುಣಮಟ್ಟದ ಬಿತ್ತನೆ ಬೀಜಗಳನ್ನು ಪಡೆದು ಸಕಾಲದಲ್ಲಿ ಬಿತ್ತನೆ ಮಾಡಿದರೆ ಒಳ್ಳೆಯ ಇಳುವರಿ ಪಡೆದು ಆರ್ಥಿಕವಾಗಿ ಸಬಲರಾಗಬಹುದು ಎಂದರು.

ಬಬಲೇಶ್ವರ ಗ್ರಾಪಂ ಅಧ್ಯಕ್ಷೆ ಬೌರಮ್ಮ ಬೂದಿಹಾಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಸದಸ್ಯೆ ದಾನಮ್ಮ ಅಂಗಡಿ, ಪ್ರಗತಿಪರ ರೈತ ವಿ.ಎಸ್.ಪಾಟೀಲ ಇತರರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *