ವಿಜಯಪುರ ನಗರ ಅಭಿವೃದ್ಧಿಗೆ ಬದ್ಧ

ವಿಜಯಪುರ: ವಿಜಯಪುರ ನಗರ ವಿಧಾನಸಭಾ ಕ್ಷೇತ್ರದಲ್ಲಿ ಅಭಿವೃದ್ಧಿ ಪರ್ವ ಆರಂಭಗೊಂಡಿದ್ದು, 10 ಸಾವಿರಕ್ಕೂ ಹೆಚ್ಚು ಆಶ್ರಯ ಮನೆಗಳ ನಿರ್ಮಾಣ, ರಸ್ತೆಗಳ ಅಭಿವೃದ್ಧಿಗೆ ಹೀಗೆ ಅನೇಕ ಕಾಮಗಾರಿಗಳು ಭರದಿಂದ ನಡೆಯುತ್ತಿವೆ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ತಿಳಿಸಿದರು.

ವಿಜಯಪುರ ನಗರ ಸಂಪೂರ್ಣ ಗುಡಿಸಲು ಮುಕ್ತವಾಗಿಸುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇರಿಸಲಾಗಿದ್ದು, ವಿವಿಧ ವಸತಿ ಯೋಜನೆಗಳಲ್ಲಿ ಪಾರದರ್ಶಕವಾಗಿ ಲಾನುಭವಿಗಳ ಆಯ್ಕೆ ಮಾಡಲಾಗಿದೆ. ಇಂದಿರಾ ಆವಾಸ್ ಯೋಜನೆ, ಪ್ರಧಾನಮಂತ್ರಿ ಆವಾಸ್ ಯೋಜನೆ ಸೇರಿದಂತೆ ಹಲವಾರು ವಸತಿ ಯೋಜನೆಗಳಲ್ಲಿ 10 ಸಾವಿರ ಮನೆಗಳ ನಿರ್ಮಾಣ ಕಾರ್ಯ ನಡೆಯುತ್ತಿದೆ. ಪ್ರಧಾನಮಂತ್ರಿ ಆವಾಸ್ ಯೋಜನೆಯಡಿಯಲ್ಲಿ 3,750 ಮನೆಗಳನ್ನು ಜಿ-ಪ್ಲಸ್ ಮಾದರಿಯಲ್ಲಿ ನಿರ್ಮಿಸಲಾಗುವುದು. ವಿಜಯಪುರದ ಆಲ್-ಅಮೀನ್ ವೈದ್ಯಕೀಯ ಮಹಾವಿದ್ಯಾಲಯದ ಮುಂಭಾಗದಲ್ಲಿರುವ 30 ಎಕರೆ ಜಮೀನಿನಲ್ಲಿ ಆಶ್ರಯ ಮನೆಗಳನ್ನು ನಿರ್ಮಿಸಲಾಗುತ್ತಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ವಿಜಯಪುರದಲ್ಲಿ 13 ಕೊಳಚೆ ಪ್ರದೇಶಗಳನ್ನು ಸ್ಲಂ ಪ್ರದೇಶ ಎಂದು ಗುರುತಿಸುವಂತೆ ಸ್ಲಂ ಬೋರ್ಡ್ ಹಾಗೂ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಅವರ ಏಳಿಗೆಗಾಗಿ ಭೂತನಾಳದಲ್ಲಿ 1,850 ಮನೆಗಳ ನಿರ್ಮಾಣ ಕಾರ್ಯ ನಡೆಯುತ್ತಿದೆ ಎಂದರು.

ಜನಪ್ರತಿನಿಧಿಗಳಿಂದ ಕಾಮಗಾರಿಗೆ ಹಿನ್ನಡೆ
ಮಹಾನಗರ ಪಾಲಿಕೆ 14 ನೇ ಹಣಕಾಸು ಯೋಜನೆಯಡಿಯಲ್ಲಿ ವಿಜಯಪುರ ನಗರದಲ್ಲಿ ಕೈಗೊಂಡಿರುವ ಮಾಸ್ಟರ್‌ಪ್ಲ್ಯಾನ್ ಕಾಮಗಾರಿಗಳು ಕೆಲ ಜನಪ್ರತಿನಿಧಿಗಳಿಂದ ಹಿನ್ನಡೆಯಾಗುತ್ತಿದೆ. ಗೋದಾವರಿಯವರೆಗೆ ಕೈಗೊಳ್ಳುತ್ತಿರುವ ರಸ್ತೆ ಕಾಮಗಾರಿಯನ್ನು ಕೆಲ ಪಾಲಿಕೆ ಸದಸ್ಯರು ವಿರೋಧ ವ್ಯಕ್ತಪಡಿಸಿರುವುದರಿಂದ ವಿಳಂಬವಾಗಿದೆ. ಇನ್ನು ಗ್ಯಾಂಗ್‌ಬಾವಡಿಯಲ್ಲಿ ಪಾಲಿಕೆ ಜಮೀನಿನಲ್ಲಿಯೇ ಕಟ್ಟಡ ಕಟ್ಟಿ ಬಾಡಿಗೆ ತಿನ್ನುತ್ತಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿಗೆ ದೂರು ನೀಡಿದ್ದೇನೆ, ಆ ಪಾಲಿಕೆ ಸದಸ್ಯನ ಸದಸ್ಯತ್ವ ಅನರ್ಹಗೊಳಿಸಿ, ಆತ ಇಲ್ಲಿಯವರೆಗೆ ಪಡೆದಿರುವ ಬಾಡಿಗೆಯನ್ನು ಪುನರ್ ಭರಣಾ ಮಾಡಿಕೊಳ್ಳಬೇಕು ಎಂದು ಒತ್ತಾಯಿಸಿದ್ದೇನೆ ಎಂದು ತಿಳಿಸಿದರು.
ಇನ್ನು ಕೆಲ ಪ್ರಭಾವಿ ರಾಜಕಾರಣಿಗಳು ಆಜಾದ್ ರಸ್ತೆಯಲ್ಲಿರುವ ತಮ್ಮ ಆಸ್ತಿ ಉಳಿಸಿಕೊಳ್ಳಲು ಬಡವರ ಮೇಲೆ ಗದಾಪ್ರಹಾರ ಮಾಡುವ ಕೆಲಸ ಮಾಡುತ್ತಿದ್ದಾರೆ. ತಮ್ಮ ಆಸ್ತಿ ಉಳಿಸಿಕೊಳ್ಳಲು ರಸ್ತೆ ಅಗಲೀಕರಣವನ್ನು ವಿರೋಧಿಸುತ್ತಿದ್ದಾರೆ ಎಂದರು.

ಪ್ರತ್ಯೇಕ ಮಹಿಳಾ ಪದವಿ ಕಾಲೇಜು ಸ್ಥಾಪನೆ
ವಿಜಯಪುರದ ಹೃದಯ ಭಾಗದಲ್ಲಿರುವ ಸರ್ಕಾರಿ ಮಹಾವಿದ್ಯಾಲಯದಲ್ಲಿಯೇ ಪ್ರತ್ಯೇಕ ಮಹಿಳಾ ಪದವಿ ಕಾಲೇಜು ಸ್ಥಾಪನೆಗೆ ಕ್ರೀಯಾ ಯೋಜನೆ ಸಿದ್ಧಪಡಿಸಿಕೊಳ್ಳಲಾಗಿದೆ. ಈಗಾಗಲೇ ನವಭಾಗದಲ್ಲಿ ಪದವಿ ಕಾಲೇಜುವಿದ್ದು, ಅಲ್ಲಿ ವಿದ್ಯಾರ್ಥಿನಿಯರಿಗೆ ಸುರಕ್ಷತೆ ಇಲ್ಲ. ಹಾಗಾಗಿ ನಗರದ ಹೃದಯ ಭಾಗದಲ್ಲಿಯೇ 5 ಕೋಟಿ ರೂ.ಗೂ ಅಧಿಕ ವೆಚ್ಚದಲ್ಲಿ ಕಟ್ಟಡ ನಿರ್ಮಾಣ ಕೈಗೆತ್ತಿಕೊಳ್ಳಲಾಗುವುದು. ಈಗಿರುವ ನವಭಾಗದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಕೇಂದ್ರ ಬಸ್ ನಿಲ್ದಾಣದ ಮೂಲಕ ನೇರ ಸಂಪರ್ಕ ಕಲ್ಪಿಸುವ ರಸ್ತೆ ನಿರ್ಮಾಣಕ್ಕೆ ಚಿಂತಿಸಲಾಗುತ್ತಿದೆ ಎಂದು ಶಾಸಕ ಯತ್ನಾಳ ಹೇಳಿದರು.

Leave a Reply

Your email address will not be published. Required fields are marked *