ಸಾಂಸ್ಕೃತಿಕ ಲೋಕ ಸೃಷ್ಟಿಸಿದ ಉತ್ಸವ

ಗಮನ ಸೆಳೆದ ಸ್ತಬ್ಧ ಚಿತ್ರಗಳ ಮೆರವಣಿಗೆ >>

ಹೀರಾನಾಯ್ಕ ಟಿ.

ವಿಜಯಪುರ: ಎಲ್ಲೆಲ್ಲೂ ರಂಗೋಲಿ ಹಾಕಿದ ರಸ್ತೆಗಳು. ಎತ್ತೆತ್ತನೋಡಿದರೆತ್ತ ಕಲಾ ತಂಡಗಳ ಕಲಾ ವೈಭವ. ಕುಂಭಹೊತ್ತ ಮಹಿಳೆಯರ ದೃಶ್ಯ. ಲಂಬಾಣಿ ಮಹಿಳೆಯರ ನೃತ್ಯ.ಭಾರತೀಯ ಸಂಸ್ಕೃತಿಯ ಶ್ರೀಮಂತಿಕೆ ಸಾರುವ ಸ್ತಬ್ಧಚಿತ್ರಗಳು.

ಕಗ್ಗೋಡದಲ್ಲಿ ಡಿ.31ರ ವರೆಗೆ ನಡೆಯಲಿರುವ ಭಾರತೀಯ ಸಂಸ್ಕೃತಿ ಉತ್ಸವದ ಹಿನ್ನೆಲೆಯಲ್ಲಿ ಸೋಮವಾರ ವಿಜಯಪುರದಲ್ಲಿ ನಡೆದ ಬೃಹತ್ ಶೋಭಾಯಾತ್ರೆಯಲ್ಲಿ ಕಂಡುಬಂದ ದೃಶ್ಯಗಳು.

ಮುಗಿಲು ಮುಟ್ಟಿದ ವಾದ್ಯ-ವೈಭವಗಳ ಹಿಮ್ಮೇಳನ, ಭಾರತಮಾತೆಗೆ ಜಯವಾಗಲಿ ಎಂಬ ಉದ್ಘೋಷ, ಮೆರವಣಿಗೆ ಸಾಗುವ ದಾರಿಯುದ್ದಕ್ಕೂ ಸೊಬಗು ಸಾಂಸ್ಕೃತಿಕ ಲೋಕವನ್ನೆ ಸೃಷ್ಠಿಸಿದಂತಿತ್ತು.
ಕಲೆ, ಸಾಹಿತ್ಯ, ಸಂಸ್ಕೃತಿ, ಆಧ್ಯಾತ್ಮ, ಯೋಗವನ್ನು ಪ್ರತಿಬಿಂಬಿಸುವ ರೂಪಕ. ಸ್ತಬ್ಧ ಚಿತ್ರಗಳು, ರಾಷ್ಟ್ರಕ್ಕಾಗಿ ತ್ಯಾಗ, ಬಲಿದಾನ, ಸಾಧನೆಗೈದ ಸಾಧಕರ ಭಾವಚಿತ್ರಗಳ ಮೆರವಣಿಗೆ ನೋಡುಗರ ಕಣ್ಮನ ಸೆಳೆದವು. ಬರದನಾಡಿನಲ್ಲಿ ವೈಭವದ ಉತ್ಸವ ನೋಡಿ ಪ್ರೇಕ್ಷಕರು ಜಾತ್ರೆ ರೀತಿಯಲ್ಲಿ ಉತ್ಸಕರಾಗಿ ಕಣ್ಮುಂಬಿಕೊಂಡರು.

ಗಮನ ಸೆಳೆದ ಶೋಭಾಯಾತ್ರೆ

ಉತ್ಸವದ ಶೋಭಾಯಾತ್ರೆ ‘ಸಾಂಸ್ಕೃತಿಕ ಸ್ಪರ್ಶ’ ನೀಡುವಲ್ಲಿ ಯಶಸ್ವಿಯಾಯಿತು. ಒಂದೆಡೆ ಕಲಾ ವೈಭವ, ಇನ್ನೊಂದೆಡೆ ಭವ್ಯ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ರೂಪಕ, ಹೀಗೆ ಶೋಭಾಯಾತ್ರೆಯಲ್ಲಿ ಕಲೆ, ಸಂಸ್ಕೃತಿ, ಸಂಗೀತದ ‘ತ್ರಿವೇಣಿ ಸಂಗಮ’ ಗುಮ್ಮಟ ನಗರಿಯ ವೈಭವವನ್ನು ಇಮ್ಮಡಿಗೊಳಿಸಿತ್ತು.

ಕರಡಿ ಮಜಲು, ಡೊಳ್ಳು ಕುಣಿತ, ಹಲಗೆ ಮಜಲು, ಚೌಡಕಿ ಮೇಳ, ಲಂಬಾಣಿ ನೃತ್ಯ, ಸಂಬಾಳ ವಾದನ, ಕುದುರೆ ಕುಣಿತ, ತಾಸೆ ವಾದನ, ಗಾರುಡಿ ಗೊಂಬೆ, ದೊಡ್ಡಾಟ ಮೇಳದ ವೇಷಧಾರಿಗಳು, ಭಜನಾಕುಣಿತ, ಜಾಂಜ್ ಪತಕ, ವೀರಗಾಸೆ, ದುರುಗ ಮುರುಗಿಯವರು ಸೇರಿದಂತೆ ನೂರಾರು ಕಲಾ ತಂಡಗಳು ಮೆರವಣಿಗೆಯಲ್ಲಿ ಕಲಾ ಲೋಕ ವೈಭವ ಸೃಷ್ಟಿಸಿದ್ದವು.

ಮೈಸೂರಿನ ನಗಾರಿ ತಂಡ, ಧಾರವಾಡದ ಕಥಕ್ಕಳಿ, ಮಂಡ್ಯ ಜಿಲ್ಲೆಯ ಪೂಜಾ ಕುಣಿತ, ಚಿಕ್ಕ ಮಗಳೂರಿನ ಸೋಮನ ಕುಣಿತ, ಬಳ್ಳಾರಿಯ ಹಗಲು ವೇಷಗಾರರ ತಂಡ ಮೆರವಣಿಗೆಯ ಆಕರ್ಷಣೆಯ ಕೇಂದ್ರಬಿಂದುವಾಗಿತ್ತು. ವೈಭವಯುತ ಮೆರವಣಿಗೆಗೆ ಚಿತ್ರದುರ್ಗ ಮುರುಘಾಮಠದ ಶ್ರೀ ಡಾ.ಶಿವಮೂರ್ತಿ ಮಹಾಸ್ವಾಮಿಗಳು ವಿದ್ಯುಕ್ತವಾಗಿ ಚಾಲನೆ ನೀಡಿದರು. ಜ್ಞಾನಯೋಗಾಶ್ರಮದ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು.

ವಿಜಯಪುರದ ಸೋಲಾಪುರ ಬೈಪಾಸ್ ರಸ್ತೆಯಿಂದ ಪ್ರಾರಂಭಗೊಂಡ ಶೋಭಾಯಾತ್ರೆ ಬಂಜಾರಾ ಕ್ರಾಸ್, ಬಿಎಲ್‌ಡಿಇ ಆಡಳಿತ ಕಚೇರಿ ಮುಖಾಂತರ ಲಿಂಗದ ಗುಡಿ ರಸ್ತೆ, ಡಾ.ಹೆಡಗೆವಾರ್ ವೃತ್ತ ಮೊದಲಾದ ಕಡೆಗಳಲ್ಲಿ ಸಂಚರಿಸಿ ನಗರದ ಆರಾಧ್ಯದೈವ ಶ್ರೀಸಿದ್ಧೇಶ್ವರ ದೇವಾಲಯಕ್ಕೆ ತಲುಪಿತು. ನಂತರ ಅಲ್ಲಿಂದ ಗಾಂಧಿಚೌಕ್, ಬಸವೇಶ್ವರ ವೃತ್ತ, ಡಾ.ಬಿ.ಆರ್. ಅಂಬೇಡ್ಕರ್ ವೃತ್ತ ದ ಮಾರ್ಗವಾಗಿ ದರಬಾರ ಹೈಸ್ಕೂಲ್ ಮೈದಾನಕ್ಕೆ ತಲುಪಿ ಸಂಪನ್ನಗೊಂಡಿತು.

ಸಾವಿರ ಮಹಿಳೆಯರಿಂದ ಕುಂಭಮೇಳ

ಸಾಂಪ್ರದಾಯಿಕ ತೊಡುಗೆಗಳಾದ ಇಲಕಲ್ ಸ್ಯಾರಿ ಮತ್ತು ಗುಳೆದಗುಡ್ಡದ ಕುಪ್ಪಸ ತೊಟ್ಟು ಸಾವಿರ ಕುಂಭಗಳ ಜತೆಗೆ ನಗರದ ಪ್ರಮುಖ ದೇವಸ್ಥಾನಗಳ ಪಲ್ಲಕ್ಕಿಗಳ ಸಹಿತ ಭಾಗವಹಿಸುವ ದೃಶ್ಯ ರಮಣೀಯವಾಗಿತ್ತು. ಶೋಭಾಯಾತ್ರೆ ಹಾದು ಹೋಗುವ ಮಾರ್ಗದುದ್ದಕ್ಕೂ ಸ್ವಚ್ಛತೆ ಮಾಡಲಾಗಿತ್ತು. ಅಲ್ಲದೆ ರಂಗು ರಂಗೀನ ರಂಗೋಲಿಗಳ ಚಿತ್ತಾರ, ತಳಿರು ತೋರಣ, ಮಾವಿನ ತೋಳಲು, ಬಾಳೆ ಕಂಬ, ಸ್ವಾಗತ ಕಮಾನುಗಳು ಮಾರ್ಗದುದ್ದಕ್ಕೂ ಗಮನ ಸೆಳೆದವು.

ಸಾವಿರಾರು ಸಂಖ್ಯೆಯಲ್ಲಿ ಜನರು ಭಾಗಿ

ಭಾರತೀಯ ಸಂಸ್ಕೃತಿ ಉತ್ಸವದ ಹಿನ್ನೆಲೆಯಲ್ಲಿ ವಿಜಯಪುರದಲ್ಲಿ ನಡೆದ ಶೋಭಾಯಾತ್ರೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಮಹಿಳೆಯರು, ಹಿರಿಯರು, ಶಾಲೆ ಮಕ್ಕಳು ಭಾಗವಹಿಸಿದ್ದರು. ವಿಜಯಪುರ ಜಿಲ್ಲೆ ಅಲ್ಲದೆ ಚಿತ್ರದುರ್ಗ, ಬಾಗಲಕೋಟೆ, ಬೆಳಗಾವಿ, ಗದಗ ಸೇರಿದಂತೆ ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಸಾರ್ವಜನಿಕರು ಪಾಲ್ಗೊಂಡಿದ್ದರು. ಜತೆಗೆ ಮಹಾರಾಷ್ಟ್ರದ ಸೋಲಾಪುರ, ಜತ್ತ್, ಸಾಂಗ್ಲಿ, ಮಿರಜ್ ಕಡೆಗಳಿಂದ ನಾನಾ ಮಠಾಧೀಶರು, ಪತಂಜಲಿ ಯೋಗ ಸಮಿತಿ ಪದಾಧಿಕಾರಿಗಳು ಉತ್ಸವದಲ್ಲಿ ಪಾಲ್ಗೊಂಡು ಮೆರಗು ನೀಡಿದರು.

ಶೋಭಾಯಾತ್ರೆ ನೋಡಲು ಸಾಲು ಸಾಲು

ಬೆಳಗ್ಗೆ 10 ಗಂಟೆಗೆ ಪ್ರಾರಂಭವಾದ ಉತ್ಸವ ನೋಡಲು ಶಾಲೆ, ಕಾಲೇಜ್ ವಿದ್ಯಾರ್ಥಿಗಳು, ಸಾರ್ವಜನಿಕರು ಶೋಭಾಯಾತ್ರೆ ನಡೆದ ರಸ್ತೆ ಮಾರ್ಗದಲ್ಲಿ ಸಾಲು ಸಾಲು ನಿಂತು ವೀಕ್ಷಿಸಿದರು. ಸಿದ್ಧೇಶ್ವರ ದೇವಸ್ಥಾನದಿಂದ ಗಾಂಧಿಚೌಕ್, ಬಸವೇಶ್ವರ ವೃತ್ತದ ವರೆಗೆ ಸಾವಿರಾರು ಸಂಖ್ಯೆಯಲ್ಲಿ ಜನರು ನೆರೆದಿದ್ದು, ಉತ್ಸವಕ್ಕೆ ಕಳೆ ತಂದಂತಾಗಿತ್ತು.

ನೀರಿಗಾಗಿ ಜನರ ಪರದಾಟ

ಬೆಳಗ್ಗೆ ಪ್ರಾರಂಭವಾದ ಉತ್ಸವದಲ್ಲಿ ವಿಜಯಪುರ ನಗರದ ವಿವಿಧ ಶಾಲೆ ವಿದ್ಯಾರ್ಥಿಗಳು, ಸಾರ್ವಜನಿಕರು ಪಾಲ್ಗೊಂಡಿದ್ದು, ಕೆಲವು ಕಡೆಗಳಲ್ಲಿ ನೀರಿಗಾಗಿ ಪರದಾಡಿದ ಪ್ರಸಂಗ ಎದುರಾಯಿತು. ಮಧ್ಯಾಹ್ನದ ಹೊತ್ತಿಗೆ ಬಿಸಿಲಿನ ಬೇಗೆ ಹೆಚ್ಚಾದಂತೆ ದಾಹ ತಣಿಸಲು ಶೋಭಾಯಾತ್ರೆಯಲ್ಲಿ ಪಾಲ್ಗೊಂಡಿದ್ದ ಜನರು ನೀರಿಗಾಗಿ ಪರದಾಡಿದರು.

ಕಲಾವಿದರೊಂದಿಗೆ ಸೆಲ್ಫಿ

ಶೋಭಾಯಾತ್ರೆಯಲ್ಲಿ ಪಾಲ್ಗೊಂಡಿದ್ದ ವಿವಿಧ ಕಲಾವಿದರ ಬಳಿ ಸಾರ್ವಜನಿಕರು ಸಾಮೂಹಿಕವಾಗಿ ಸೆಲ್ಪಿ ತೆಗೆಸಿಕೊಳ್ಳುತ್ತಿದ್ದ ದೃಶ್ಯಗಳು ಎಲ್ಲರ ಗಮನ ಸೆಳೆದವು. ನೃತ್ಯದಲ್ಲಿ ಪಾಲ್ಗೊಳ್ಳುವಾಗಲೇ ಕಲಾವಿದರ ಬಳಿ ಹೋಗಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದರಿಂದ ಕಲಾವಿದರಲ್ಲಿ ಸಂತಸ ಮನೆ ಮಾಡಿತ್ತು.

ಪೊಲೀಸ್ ಬಿಗಿ ಭದ್ರತೆ

ಶೋಭಾಯಾತ್ರೆಗೆ ಖಾಕಿ ಪಡೆ ಸರ್ಪಗಾವಲಾಗಿತ್ತು. ಶೋಭಾಯಾತ್ರೆ ಪ್ರಾರಂಭದಿಂದಲೂ ಮುಕ್ತಾಯಗೊಳ್ಳುವವರೆಗೆ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದರು. ಅದಕ್ಕಾಗಿ ಜಿಲ್ಲಾ ಪೊಲೀಸ್ ಇಲಾಖೆ ಪೊಲೀಸ್ ಸಿಬ್ಬಂದಿ, ಹೋಂಗಾರ್ಡ್‌ಗಳನ್ನು ನೇಮಿಸಿತ್ತು. ಯಾವುದೇ ಸಮಸ್ಯೆಯಾಗದಂತೆ ಶೋಭಾಯಾತ್ರೆ ಯಶಸ್ವಿಗೊಂಡಿತು.