ನೆರೆ ಹಿನ್ನೆಲೆ ಸರಳ ಗಣೇಶೋತ್ಸವ ಆಚರಣೆ

ವಿಜಯಪುರ: ರಾಜ್ಯದ ಇತಿಹಾಸದಲ್ಲೇ ಕಂಡು ಕೇಳರಿಯದಂಥ ಪ್ರವಾಹ ಪರಿಸ್ಥಿತಿ ಕಂಡು ಬಂದ ಹಿನ್ನೆಲೆ ಈ ಬಾರಿ ಗಣೇಶೋತ್ಸವವನ್ನು ಸರಳ ಹಾಗೂ ಅರ್ಥಪೂರ್ಣವಾಗಿ ಆಚರಿಸಲು ಗಜಾನನ ಮಹಾಮಂಡಳ ತೀರ್ಮಾನಿಸಿದೆ ಎಂದು ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ತಿಳಿಸಿದರು.
ಮಹಾರಾಷ್ಟ್ರದ ಮಳೆಯಿಂದಾಗಿ ಪ್ರವಾಹ ಉಂಟಾಗಿ ಉತ್ತರ ಕರ್ನಾಟಕ ಸೇರಿ ರಾಜ್ಯದಲ್ಲಿ ಅಪಾರ ಹಾನಿಯಾಗಿದೆ. ಹೀಗಾಗಿ ಈ ಬಾರಿ ಗಣೇಶೋತ್ಸವದ ಅದ್ದೂರಿ ಆಚರಣೆಗೆ ಬಳಕೆಯಾಗುತ್ತಿದ್ದ ಹಣವನ್ನು ಸಂತ್ರಸ್ತರ ನೆರವಿಗೆ ಬಳಸಲು ತೀರ್ಮಾನಿಸಲಾಗಿದೆ. ಜಿಲ್ಲೆಯಲ್ಲಿ ಇನ್ನೂರಕ್ಕೂ ಅಧಿಕ ಮಂಡಳಿಗಳಿವೆ. ಎಲ್ಲ ಮಂಡಳಿಗಳಿಗೂ ಈ ಸಲಹೆ ನೀಡಲಾಗುವುದು. ಇದರಲ್ಲಿ ಬಲವಂತವೇನಿಲ್ಲವೆಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.
ಸಾರ್ವಜನಿಕ ಗಣೇಶೋತ್ಸವಕ್ಕೆ ಈ ಬಾರಿ ಹೊಸ ಮೂರ್ತಿಗಾಗಿ ಈಗಾಗಲೇ ಮುಂಗಡ ಪಾವತಿಸಲಾಗಿದೆ. ಪರಿಸರ ಕಾಳಜಿ ಹಿನ್ನೆಲೆ ಪಿಒಪಿ ಮೂರ್ತಿಗಳಿಗೆ ನಿಷೇಧ ಹೇರಿರುವ ಸರ್ಕಾರದ ತೀರ್ಮಾನಕ್ಕೆ ಬದ್ಧರಾಗಿದ್ದೇವೆ. ಆದರೆ, ಈ ಬಾರಿ ತರುವ ಪಿಒಪಿ ಮೂರ್ತಿಯನ್ನು ವಿಸರ್ಜನೆ ಮಾಡದೆ ಅದನ್ನೇ ಮುಂದಿನ ವರ್ಷ ಪ್ರತಿಷ್ಠಾಪಿಸುವ ತೀರ್ಮಾನ ಕೈಗೊಳ್ಳಲಾಗಿದೆ. ಜತೆಗೆ ಪರಿಸರ ಕಾಳಜಿ ಮೆರೆಯಲು ಈ ಬಾರಿ ಭಕ್ತರಿಗೆ ಸಸಿ ನೀಡಲಾಗುತ್ತಿದೆ ಎಂದರು.
ಪ್ರಶಸ್ತಿ ವಿತರಣೆ: ಪ್ರಸಕ್ತ ಸಾಲಿನಿಂದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರಿಗೆ ವಿಜಯಪುರ ರತ್ನ ಪ್ರಶಸ್ತಿ ನೀಡಲು ತೀರ್ಮಾನಿಸಲಾಗಿದೆ. ಸಮಾಜ ಸೇವಕರು, ಪರಿಸರ ಸಂರಕ್ಷಕರು ಹಾಗೂ ಸಾವಯವ ಕೃಷಿಕರಿಗೆ ಪ್ರಶಸ್ತಿ ನೀಡಲಾಗುವುದು. ಮಹಾಮಂಡಳವೇ ಆಯ್ಕೆ ಮಾಡಿ ಪ್ರಶಸ್ತಿ ಪ್ರದಾನ ಮಾಡಲಿದೆ. ಈ ವರ್ಷ ಮೂವರಿಗೆ ಪ್ರಶಸ್ತಿ ನೀಡಲಾಗುವುದು ಎಂದರು.
ಉತ್ಸವದ ಉದ್ದೇಶ ಈಡೇರಲಿ: ದೇಶದ ಸ್ವಾತಂತ್ರೃಕ್ಕಾಗಿ ಜನರನ್ನು ಒಗ್ಗೂಡಿಸುವ ಸಲುವಾಗಿ ಗಣೇಶೋತ್ಸವ ಆಚರಿಸುವ ಸಂಪ್ರದಾಯ ಬೆಳೆದು ಬಂತು. ಸ್ವಾತಂತ್ರ್ಯದ ಬಳಿಕ ಉತ್ಸವದ ಉದ್ದೇಶ ಏನಾಗಬೇಕು? ಎಂದರಿತು ಆ ನಿಟ್ಟಿನಲ್ಲಿ ಮಂಡಳಿಗಳು ಕಾರ್ಯಕ್ರಮ ರೂಪಿಸಬೇಕಾದ ಅವಶ್ಯಕತೆ ಇದೆ. ವಿವಿಧ ದೇಶಭಕ್ತಿ ಕಾರ್ಯಕ್ರಮಗಳನ್ನು ರೂಪಿಸಿ ಯುವಕರಲ್ಲಿ ರಾಷ್ಟ್ರೀಯತೆ ಭಾವ ಬೆಳೆಸುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಲಾಗುವುದು ಮತ್ತು ಇನ್ನಿತರ ಮಂಡಳಿಗಳಿಗೆ ಪ್ರೇರೇಪಿಸಲಾಗುವುದೆಂದರು.
ಮಹಾಮಂಡಳದ ಮುಖಂಡರಾದ ಚಂದ್ರು ಮರಜಿ, ಶಿವಾಜಿ ಪಾಟೀಲ, ರವಿ ಮೂಕರ್ತಿಹಾಳ, ಸತೀಶ ಪಾಟೀಲ, ರಾಕೇಶ ಕುಲಕರ್ಣಿ, ವಿಜು ಜೋಷಿ ಇತರರಿದ್ದರು.

Leave a Reply

Your email address will not be published. Required fields are marked *