ಆಂಬುಲೆನ್ಸ್ ನಿರ್ವಹಣೆಗೆ ಸರ್ಕಾರ ಚಿಂತನೆ

ವಿಜಯಪುರ: 108 ಆಂಬುಲೆನ್ಸ್ ನಿರ್ವಹಣೆಗೆ ಜಿವಿಕೆ ಕಂಪನಿಗೆ ಆರು ತಿಂಗಳ ಟೆಂಡರ್ ಮುಂದು ವರಿಸಲಾಗಿದೆ. ಮುಂದಿನ ದಿನಗಳಲ್ಲಿ ಮರು ಟೆಂಡರ್ ಕರೆದು ಹೊಸಬರಿಗೆ ಅವಕಾಶ ಕಲ್ಪಿಸಲಾಗುವುದು. ಇಲ್ಲದಿದ್ದರೆ ಸರ್ಕಾರದಿಂದಲೇ ನಿರ್ವಹಣೆ ಮಾಡುವ ಕುರಿತು ಮುಖ್ಯಮಂತ್ರಿ ಅವರೊಂದಿಗೆ ರ್ಚಚಿಸಲಾಗುವುದು ಎಂದು ಆರೋಗ್ಯ ಸಚಿವ ಶಿವಾನಂದ ಪಾಟೀಲ ಹೇಳಿದರು.

ನಗರದ ಹೇಮರಡ್ಡಿ ಮಲ್ಲಮ್ಮ ಮಂಗಲ ಕಾರ್ಯಾಲಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ 108 ಆಂಬುಲೆನ್ಸ್ ನೌಕರರ ರಾಜ್ಯಮಟ್ಟದ ಸಮಾವೇಶದಲ್ಲಿ ಮಾತನಾಡಿದ ಅವರು, ಕೇಂದ್ರದ ಆಯುಷ್ಮಾನ್ ಭಾರತ್ ಹಾಗೂ ರಾಜ್ಯ ಸರ್ಕಾರದ ಆರೋಗ್ಯ ಕರ್ನಾಟಕ ಯೋಜನೆಯಡಿ ರಾಜ್ಯದ 1.30 ಕೋಟಿ ಕುಟುಂಬಗಳಿಗೆ ಆರೋಗ್ಯ ಸೌಲಭ್ಯ ಕಲ್ಪಿಸುವ ಗುರಿ ಹೊಂದಲಾಗಿದೆ. ಅದಕ್ಕೆ 108 ಸಿಬ್ಬಂದಿ ಸಹಕಾರವೂ ಅಗತ್ಯವಾಗಿದೆ. ಜನರ ಆರೋಗ್ಯ ರಕ್ಷಕರಾಗಿ ದುಡಿಯುತ್ತಿರುವ ಸಿಬ್ಬಂದಿಗೆ ಸೌಲಭ್ಯ ಕಲ್ಪಿಸಲು ಸರ್ಕಾರ ಬದ್ಧವಾಗಿದೆ. ಮೂರು ತಿಂಗಳ ನಂತರ ಮರು ಟೆಂಡರ್ ಕರೆಯುವ ವೇಳೆ ಅನೇಕ ಷರತ್ತುಗಳನ್ನು ಹಾಕಲಾಗುತ್ತದೆ. ಅವುಗಳಿಗೆ ಒಪ್ಪದಿದ್ದಲ್ಲಿ ಸರ್ಕಾರವೇ ನಿರ್ವಹಿಸುವ ನಿರ್ಧಾರ ಕೈಗೊಳ್ಳಲಿದೆ ಎಂದರು.

ಪ್ರಸ್ತುತ 108 ಆಂಬುಲೆನ್ಸ್ ವಾಹನ ಜತೆಗೆ ಅತ್ಯಾಧುನಿಕ ವಾಹನಗಳನ್ನು ಖರೀದಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ರ್ಚಚಿಸಲಾಗುವುದು ಎಂದು ತಿಳಿಸಿದರು.

ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಪಿ.ನಾಡಗೌಡ ಮಾತನಾಡಿ, ದೇಶವನ್ನು ಬಂಡವಾಳ ಶಾಹಿಗಳು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಮಾನವ ಸಂಪನ್ಮೂಲದ ದುರುಪಯೋಗ ಪಡಿಸಿಕೊಂಡು ಸರ್ಕಾರವನ್ನೆ ಆಳುವಂತಹ ಮಟ್ಟಕ್ಕಿಳಿದಿದ್ದಾರೆ. ಇದೇ ರೀತಿ ಮುಂದು ವರಿದರೆ ದೇಶವನ್ನೆ ಗುಲಾಮಗಿರಿಗೆ ತಳ್ಳುವ ದಿನಗಳು ದೂರವಿಲ್ಲ ಎಂದು ತಿಳಿಸಿದರು.

108 ನೌಕರರ ಸಂಘದ ಗೌರವಾಧ್ಯಕ್ಷ ವಿಠ್ಠಲ ಕಟಕಧೋಂಡ ಮಾತನಾಡಿ, ಆರೋಗ್ಯ ರಕ್ಷಣೆಗಾಗಿ ಆರೋಗ್ಯ ಕವಚ 108 ಅನುಷ್ಠಾನಕ್ಕೆ ತರಲಾಗಿದೆ. ಆದರೆ ಅದರಲ್ಲಿ ಕೆಲಸ ನಿರ್ವಹಿಸುತ್ತಿರುವ ಸಿಬ್ಬಂದಿಗೆ ಸೂಕ್ತ ಸೌಲಭ್ಯ ಇಲ್ಲ. ರಾಜ್ಯದಲ್ಲಿ 4 ಸಾವಿರ ಸಿಬ್ಬಂದಿ ಸೇವೆ ಸಲ್ಲಿಸುತ್ತಿದ್ದು, ಅವರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ಕಲ್ಪಿಸಬೇಕು. ಮೂಲ ಸೌಕರ್ಯ ಒದಗಿಸಬೇಕು. ಜಿವಿಕೆ ಸಂಸ್ಥೆಯನ್ನು ವಜಾಗೊಳಿಸಬೇಕು. ಸಿಬ್ಬಂದಿಗೆ ಸೇವಾ ಭದ್ರತೆ ಒದಗಿಸಲು ಸರ್ಕಾರವೇ ಆರೋಗ್ಯ ಕವಚದ ಸಂಪೂರ್ಣ ಜವಾಬ್ದಾರಿ ಹೊತ್ತುಕೊಳ್ಳಬೇಕು ಎಂದು ಆಗ್ರಹಿಸಿದರು.

ಯರನಾಳ ವಿರಕ್ತಮಠದ ಗುರು ಸಂಗನಬಸವ ಸ್ವಾಮೀಜಿ ಸಾನ್ನಿಧ್ಯ ವಹಿಸಿ ದ್ದರು. 108 ಆಂಬುಲೆನ್ಸ್ ನೌಕರರ ಸಂಘದ ರಾಜ್ಯಾಧ್ಯಕ್ಷ ಶ್ರೀಶೈಲ ಹಳ್ಳೂರ ಇದ್ದರು. ಇದೇ ವೇಳೆ 108 ಸಿಬ್ಬಂದಿ ರಕ್ತದಾನ ಮಾಡಿದರು.