<< ವಿವಿಧ ಸಂಘಟನೆಗಳ ಸಹಯೋಗ > ಪಪಂ ಅಧಿಕಾರಿಗೆ ಮನವಿ >>
ಆಲಮೇಲ: ಪಟ್ಟಣದಲ್ಲಿ ಹಾಳು ಬಿದ್ದಿರುವ ಗ್ರಂಥಾಲಯ ದುರಸ್ತಿಗೊಳಿಸುವಂತೆ ಆಗ್ರಹಿಸಿ ಸ್ವಾಮಿ ವಿವೇಕಾನಂದ ಸೇನೆ ಹಾಗೂ ಪಟ್ಟಣದ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಮಂಗಳವಾರ ಪಪಂ ಕಂದಾಯ ಅಧಿಕಾರಿ ಎಚ್.ಎಸ್. ಪಟೇಲ ಅವರಿಗೆ ಮನವಿ ಸಲ್ಲಿಸಿದರು.
ಸೇನೆ ಸಂಚಾಲಕ ಮಹಾಂತಗೌಡ ಹಳೇಮನಿ ಮಾತನಾಡಿ, ಅಂದಾಜು 30 ಸಾವಿರ ಜನಸಂಖ್ಯೆ ಇರುವ ಪಟ್ಟಣದಲ್ಲಿ ವ್ಯವಸ್ಥಿತ ಗ್ರಂಥಾಲಯ ಇಲ್ಲದಿರುವುದರಿಂದ ಪುಸ್ತಕ ಪ್ರೇಮಿಗಳಿಗೆ ತೊಂದರೆಯಾಗುತ್ತಿದೆ. ಗ್ರಂಥಾಲಯ ದುರಸ್ತಿಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮೌಖಿಕ ಹಾಗೂ ಲಿಖಿತರೂಪದಲ್ಲಿ ಹಲವು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಇದೇ ರೀತಿ ನಿರ್ಲಕ್ಷ್ಯ ತೋರಿದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಮನವಿ ಸ್ವೀಕರಿಸಿ ಪಪಂ ಕಂದಾಯ ಅಧಿಕಾರಿ ಎಚ್.ಎಸ್. ಪಟೇಲ ಮಾತನಾಡಿ, ಈ ಕುರಿತು ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಹೇಳಿದರು.
ದಲಿತ ಮುಖಂಡ ಹರೀಶ ಯಂಟಮಾನ, ಹರೀಶ ಯಂಟಮಾನ, ಸುರೇಶ ಬೋರನಾಯಕ, ವಿಶ್ವನಾಥ ಹಿರೇಮಠ, ಅಜಯಕುಮಾರ ಭಂಟನೂರ, ಸುನೀಲ ತೆಲ್ಲೂರ, ಬಾಹುಬಲಿ ಭಸ್ಮೆ, ಶ್ರೀನಿವಾಸ ಅಲೋಣಿ, ವಿಶಾಲ ಅಮರಗೊಂಡ, ಅಮೃತ ಕೊಟ್ಟಲಗಿ, ರತನಚಂದ ಒಣಕಿದುರಿ, ಹನುಮಂತಸಿಂಗ್ ರಜಪೂತ ಇದ್ದರು.