ಮಕ್ಕಳಲ್ಲಿ ಕ್ರೀಡಾ ಮನೋಭಾವ ಬೆಳೆಸಿ

 ವಿಜಯಪುರ: ಪಾಲಕರು ಮಕ್ಕಳಲ್ಲಿ ಕ್ರೀಡಾ ಮನೋಭಾವ ಬೆಳೆಸಬೇಕು. ಸೋಲು-ಗೆಲುವು ಬಗ್ಗೆ ಯೋಚಿಸದೆ ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳಬೇಕು ಎಂದು ಜಿಪಂ ಅಧ್ಯಕ್ಷ ಶಿವಯೋಗೆಪ್ಪ ನೇದಲಗಿ ಹೇಳಿದರು.
ಇಲ್ಲಿನ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಂಯುಕ್ತಾಶ್ರಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕ್ರೀಡಾಪಟುಗಳು ಜಿಲ್ಲಾ ಮಟ್ಟದಲ್ಲಿ ಹಾಗೂ ವಿಭಾಗ ಮಟ್ಟದಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಜಿಲ್ಲೆಯ ಕೀರ್ತಿಯನ್ನು ಬೆಳಗಿಸುವಂತೆ ತಿಳಿಸಿದರು.
ರಾಷ್ಟ್ರ ಯುವ ಪ್ರಶಸ್ತಿ ಪುರಸ್ಕೃತ ಡಾ. ಜಾವೀದ್ ಎಂ.ಜಮಾದಾರ ಮಾತನಾಡಿ, ಗ್ರಾಮೀಣ ನಗರದ ಕ್ರೀಡಾಪಟುಗಳನ್ನು ಗುರುತಿಸಿ ಅವರನ್ನು ರಾಜ್ಯಮಟ್ಟದ ಕ್ರೀಡಾಪಟುಗಳಾಗುವಂತೆ ಪ್ರೋತ್ಸಾಹಿಸಬೇಕಿದೆ. ಇಂದಿನ ಮಕ್ಕಳು ಕೇವಲ ಪಠ್ಯ ಪುಸ್ತಕಗಳಲ್ಲಿ ಜೀವನವನ್ನು ರೂಪಿಸಿಕೊಳ್ಳುತ್ತಿದ್ದಾರೆ. ಕ್ರೀಡಾಭಿಮಾನವನ್ನು ಮರೆಯುತ್ತಿದ್ದಾರೆ. ಅಂತಹವರಿಗೆ ಕ್ರೀಡೆಯ ಮಹತ್ವವನ್ನು ತಿಳಿಸಿ, ಅವರಲ್ಲಿ ಆಸಕ್ತಿ ಮೂಡುವಂತೆ ಮಾಡಬೇಕಿದೆ. ಯಾವುದೇ ಕ್ರೀಡೆ ಇರಲಿ, ಅದಕ್ಕೆ ಮುಖ್ಯವಾಗಿ ಆಸಕ್ತಿ ಹೊಂದಿರಬೇಕು. ಜತೆಗೆ ಪಾಲಕರ ಪ್ರೋತ್ಸಾಹ ಇರಬೇಕೆಂದು ಹೇಳಿದರು.
ಕ್ರೀಡೆಯನ್ನು ಹವ್ಯಾಸವನ್ನಾಗಿ ಮಾಡಿಕೊಳ್ಳಬೇಕು. ಪ್ರತಿನಿತ್ಯವೂ ಕ್ರೀಡಾಕೂಟದಲ್ಲಿ ಭಾಗವಹಿಸಬೇಕು. ಜನಸಂಖ್ಯೆಯಲ್ಲಿ ನಮ್ಮ ದೇಶ ಮುಂದಿದೆ ಎಂದು ಹೇಳಿಕೊಳ್ಳುವುದರ ಜತೆಗೆ ಕ್ರೀಡೆಯಲ್ಲಿ ಮುಂದಿರಬೇಕು. ಬಲಿಷ್ಠ ಭಾರತ ನಿರ್ಮಾಣಕ್ಕೆ ಯುವ ಜನತೆ ದೈಹಿಕವಾಗಿ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬೇಕು. ಸರ್ಕಾರಗಳು ಕ್ರೀಡೆಗಾಗಿ ಹಲವಾರು ಯೋಜನೆಗಳನ್ನು ನೀಡಿದೆ. ಆ ಯೋಜನೆಗಳ ಸದುಪಯೋಗವನ್ನು ಯುವ ಜನಾಂಗ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಮಹಿಳಾ ವಿವಿ ದೈಹಿಕ ಶಿಕ್ಷಣ ವಿಭಾಗದ ಮುಖ್ಯಸ್ಥೆ ಡಾ. ಜ್ಯೋತಿ ಉಪಾಧ್ಯಾಯ ಮಾತನಾಡಿದರು. ಸಂಜೀವ ಸಿ., ಆರತಿ ಚವಾಣ್, ಸಂತೋಷ ಎಸ್. ನಿಗಡಿ,ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಎಸ್.ಜಿ.ಲೋಣಿ ಸೇರಿದಂತೆ ತಾಲೂಕು ಮಟ್ಟದಿಂದ ಜಿಲ್ಲಾಮಟ್ಟಕ್ಕೆ ಆಯ್ಕೆಗೊಂಡ ಕ್ರೀಡಾಪಟುಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *