ವಾಗ್ದಾನ ಮಾಡಿರುವೆ ಏರ್‌ಪೋರ್ಟ್ ಸ್ಥಾಪಿಸಿ

ವಿಜಯಪುರ: ದಶಕಗಳಿಂದ ನನೆಗುದಿಗೆ ಬಿದ್ದಿರುವ ವಿಮಾನ ನಿಲ್ದಾಣ ಯೋಜನೆ ಕೈಗೆತ್ತಿಕೊಳ್ಳಲು ಒತ್ತಾಯಿಸಿ ಪತ್ರಗಳ ಮೇಲೆ ಪತ್ರ ಬರೆಯುತ್ತಿರುವ ಸಂಸದ ರಮೇಶ ಜಿಗಜಿಣಗಿ ಇದೀಗ ಮತ್ತೊಂದು ಪತ್ರ ರವಾನಿಸಿದ್ದಾರೆ.

ವಿಮಾನ ನಿಲ್ದಾಣ ನಿರ್ಮಾಣಕ್ಕೆ ಒತ್ತಾಯಿಸಿ ಸೋಮವಾರ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ನಾಗರಿಕ ವಿಮಾನಯಾನ ಸಚಿವ ಹರ್‌ದೀಪ ಸಿಂಗ್ ಪುರಿ ಅವರಿಗೆ ಜಿಗಜಿಣಗಿ ಪತ್ರ ಬರೆದಿದ್ದಾರೆ.

ಪ್ರವಾಸೋದ್ಯಮ ಅಭಿವೃದ್ಧಿ, ಕೈಗಾರಿಕೆ, ಕೃಷಿ ಮತ್ತು ವ್ಯಾಪಾರದ ದೃಷ್ಠಿಯಿಂದ ವಿಮಾನ ನಿಲ್ದಾಣದ ಅವಶ್ಯಕತೆ ಇದ್ದು ಕೂಡಲೇ ಸ್ಥಾಪನೆ ಮಾಡಬೇಕೆಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಯೋಜನೆಯ ಮನವರಿಕೆ
ಜಿಲ್ಲೆಯ ಬುರಣಾಪುರ- ಅಲಿಯಾಬಾದ ಮತ್ತು ಮದಭಾವಿ ಹಳ್ಳಿಗಳ ಸರ್ಕಾರಿ ಮತ್ತು ಖಾಸಗಿ ಭೂಮಿಯಲ್ಲಿ ವಿಮಾನ ನಿಲ್ದಾಣ ಸ್ಥಾಪನೆಗೆ ಏರ್ ಅಥಾರಿಟಿ ಆಫ್ ಇಂಡಿಯಾ ಉದ್ದೇಶಿಸಿತ್ತು. ಅದಕ್ಕಾಗಿ ಒಟ್ಟು 727.01 ಎಕರೆ ಜಮೀನು ಸಹ ಕಾಯ್ದಿರಿಸಲಾಗಿದ್ದು, 2009ರಲ್ಲಿ ರಾಜ್ಯದ ಮುಖ್ಯ ಮಂತ್ರಿಗಳು ಈ ಯೋಜನೆಗಾಗಿ ಶಂಖು ಸ್ಥಾಪನೆ ಸಹ ನೆರವೇರಿಸಿದ್ದಾರೆ.

ಜು. 8, 2015 ರಂದು ಏಯರ್ ಪೋರ್ಟ್ ಅಥಾರಿಟಿ ಆ್ ಇಂಡಿಯಾದ ಡೆಲಿಗೇಷನ್ ನಗರದ ಈ ಸೈಟ್‌ಗೆ ಭೇಟಿ ಕೊಟ್ಟಿತ್ತು. ಬೆಳಗಾವಿ ಮತ್ತು ಕಲಬುರಗಿ ನಡುವೆ ವಿಜಯಪುರ ಕೇಂದ್ರ ಸ್ಥಾಪದಲ್ಲಿದೆ. ಕಲಬುರಗಿ ನಗರವು ವಿಜಯಪುರದಿಂದ ಈಶಾನ್ಯದಲ್ಲಿ 160 ಕಿಮೀ ಅಂತರದಲ್ಲಿದೆ ಮತ್ತು ಬೆಳಗಾವಿ ನಗರವು ವಿಜಯಪುರದಿಂದ ನೈರುತ್ಯದಲ್ಲಿ 200 ಕಿಮೀ ಅಂತರದಲ್ಲಿದೆ. ಆದ್ದರಿಂದ ವಿಜಯಪುರ ನಗರಕ್ಕೆ ವಿಮಾನಯಾನ ಕಲ್ಪಿಸುವುದು ಅತೀ ಅವಶ್ಯಕ ಮತ್ತು ಸೂಕ್ತ ಎಂದು ಜಿಗಜಿಣಗಿ ತಿಳಿಸಿದ್ದಾರೆ.

ಜಿಲ್ಲೆಯ ಅವಶ್ಯಕತೆ
ವಿಜಯಪುರ ಕೈಗಾರಿಕೆ ದೃಷ್ಟಿಯಿಂದ ಬೆಳೆಯುತ್ತಿರುವ ನಗರ. ತೋಟಗಾರಿಕೆ ಬೆಳೆಗಳಾದ ದ್ರಾಕ್ಷಿ, ದಾಳಿಂಬೆ ಮತ್ತು ಬಾಳೆ ಹಣ್ಣಿಗೆ ಪ್ರಸಿದ್ಧವಾಗಿದೆ. ನಗರದ ಸಮೀಪ 4000 ಮೆಘಾ ವ್ಯಾಟ್ ಶಾಖೋತ್ಪನ್ನ ಕೇಂದ್ರವಿದೆ. ಗೋಳಗುಮ್ಮಟದಂಥ ಐತಿಹಾಸಿಕ ಸ್ಮಾರಕಗಳನ್ನು ಹೊಂದಿದ್ದು, ಅನೇಕ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಸಮೀಪದಲ್ಲಿರುವ ಹಂಪಿ, ಬದಾಮಿ, ಐಹೊಳೆ ಪಟ್ಟದಕಲ್ಲು ಮುಂತಾದ ಐತಿಹಾಸಿಕ ಸ್ಥಳಗಳು ವಿಜಯಪುರದ ಸಮೀಪದಲ್ಲಿವೆ. ಈ ಪ್ರವಾಸಿ ಸ್ಥಳಗಳು ಕೇವಲ ಬಸ್ ಮತ್ತು ರೈಲ್ವೆ ಸಂಪರ್ಕ ಹೊಂದಿವೆ. ವಿಮಾನ ನಿಲ್ದಾಣ ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸಲು ಸಾಧ್ಯವಾಗುತ್ತದೆ. ಅಲ್ಲದೇ. ಉದ್ಯೋಗ ಅವಕಾಶಗಳೂ ಹೆಚ್ಚಾಗಲಿವೆ ಎಂದು ತಿಳಿಸಿದ್ದಾರೆ.

ಅಧಿಕಾರಿಗಳಿಂದ ವಂಚನೆ
ವಿಮಾನ ನಿಲ್ದಾಣ ಸ್ಥಾಪಿಸುವುದಾಗಿ ಲೋಕ ಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ವಾಗ್ದಾನ ಮಾಡಿದ್ದೆ. ಸದರಿ ಕೆಲಸವು 2007-08 ರಿಂದ ಆಮೆ ವೇಗದಲ್ಲಿ ನಡೆಯುತ್ತಿದ್ದು, ಸಾರ್ವಜನಿಕರು ಆತಂಕಕ್ಕೊಳಗಾಗಿದ್ದಾರೆ. ಹಿಂದಿನ ಗುತ್ತಿಗೆದಾರರು ವಿಮಾನ ನಿಲ್ದಾಣದ ಜಾಗೆ ಸಮಪಾತಗೊಳಿಸಲು ಸುಮಾರು 100 ಕೋಟಿ ರೂ. ಇನ್ನೂ ಬೇಕಾಗುತ್ತದೆ ಎಂದು ಸುಳ್ಳು ಹೇಳಿದ್ದು ಅದನ್ನೇ ಅಧಿಕಾರಿಗಳು ಸಹ ನಂಬಿದ್ದು ಜನರನ್ನು ವಂಚಿಸಿದ್ದಾರೆ. ಆದ್ದರಿಂದ ವಾಸ್ತವ ಅರಿತು ಏರ್ ಪೋರ್ಟ್ ಕಟ್ಟಡ ಮತ್ತು ರನ್‌ವೇ ಸಲುವಾಗಿ ಹಣ ಬಿಡುಗಡೆಗೊಳಿಸಲು ಜಿಗಜಿಣಗಿ ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *