ಸರ್ಕಾರದ ಯೋಜನೆಗಳು ಜನರಿಗೆ ತಲುಪಲಿ

ವಿಜಯಪುರ : ರೈತರಿಗಾಗಿ ಸರ್ಕಾರ ಜಾರಿಗೊಳಿಸುವ ಯೋಜನೆಗಳನ್ನು ತಲುಪಿಸುವ ಮಹತ್ವದ ಜವಾಬ್ದಾರಿ ಅಧಿಕಾರಿಗಳ ಮೇಲಿದೆ ಎಂದು ತೋಟಗಾರಿಕೆ ಇಲಾಖೆ ಸಚಿವ ಎಂ.ಸಿ.ಮನಗೂಳಿ ಹೇಳಿದರು.
ಇಲ್ಲಿನ ಮಧುವನ ಹೋಟೆಲ್‌ನಲ್ಲಿ ರಾಜ್ಯ ಸಣ್ಣ ಕೈಗಾರಿಕೆಗಳ ಸಂಘ, ಜಿಲ್ಲಾ ಕೈಗಾರಿಕೆ ಕೇಂದ್ರ, ತೋಟಗಾರಿಕೆ ಇಲಾಖೆ, ಕೈಗಾರಿಕೆ ಹಾಗೂ ವಾಣಿಜ್ಯ ಮಂಡಳಿ ಸಂಯುಕ್ತಾಶ್ರಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕೃಷಿ ವ್ಯವಹಾರ-ಆಹಾರ ಸಂಸ್ಕರಣಾ ನೀತಿ -2015 ಕುರಿತಾದ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ರೈತರ ಶ್ರೇಯೋಭಿವೃದ್ಧಿಗಾಗಿ ಸರ್ಕಾರ ಅನೇಕ ರೀತಿಯ ಕಾರ್ಯಕ್ರಮಗಳನ್ನು, ಯೋಜನೆಗಳನ್ನು ರೂಪಿಸಿ ಅನೇಕ ಸೌಲಭ್ಯ ಕಲ್ಪಿಸುತ್ತಿದೆ. ಈ ಸೌಲಭ್ಯವನ್ನು ಲಾನುಭವಿ ರೈತರಿಗೆ ತಲುಪಿಸಬೇಕಾಗಿರುವುದು ಅಧಿಕಾರಿಗಳ ಕರ್ತವ್ಯ. ಸಮರ್ಥವಾಗಿ, ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದರೆ ರೈತರಿಗೆ ಅನೇಕ ಪ್ರಯೋಜನಗಳು ದೊರಕಿಸಿಕೊಡಬಹುದು. ಅದರಿಂದ ಲಾನುಭವಿಗಳ ಬದುಕು ಬಂಗಾರವಾಗುತ್ತದೆ ಎಂದರು.
ಕೆಲ ಅಧಿಕಾರಿಗಳು ಯೋಜನೆಗಳನ್ನು ಸಮರ್ಪಕವಾಗಿ ರೈತರಿಗೆ ದೊರಕಿಸದೆ ಇರುವುದರಿಂದ ಸೌಲಭ್ಯಗಳು ಮರೀಚಿಕೆಯಾಗುತ್ತಿವೆ. ಅಧಿಕಾರಿಗಳು ಹೆಚ್ಚು ಬದ್ಧತೆ, ದಕ್ಷತೆಯಿಂದ ಕಾರ್ಯನಿರ್ವಹಿಸಿ ಸೌಲಭ್ಯಗಳನ್ನು ಅನ್ನದಾತನ ಮನೆಬಾಗಿಲಿಗೆ ತಲುಪಿಸಬೇಕು ಎಂದು ತಿಳಿಸಿದರು.
ರಾಜ್ಯ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ಬಸವರಾಜ ಜವಳಿ ಮಾತನಾಡಿ, ಕೈಗಾರಿಗೆಗೆ ಹೆಚ್ಚಿನ ಉತ್ತೇಜನ ನೀಡುವ ನಿಟ್ಟಿನಲ್ಲಿ ಸರ್ಕಾರಗಳು ಕೆಲಸ ಮಾಡುತ್ತಿವೆ. ಅವುಗಳನ್ನು ಸದುಪಯೋಗ ಪಡೆಸಿಕೊಳ್ಳಬೇಕು. ವಿಜಯಪುರ ಜಿಲ್ಲೆಯಲ್ಲಿ ದ್ರಾಕ್ಷಿ ಹೆಚ್ಚು ಬೆಳೆಯುವುದರಿಂದ ಒಣ ದ್ರಾಕ್ಷಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾರುಕಟ್ಟೆ ಕಲ್ಪಿಸುವ, ಕೋಲ್ಡ್ ಸ್ಟೋರೆಜ್ ನಿರ್ಮಾಣ ಇನ್ನಿತರ ಕ್ರಮಗಳ ಬಗ್ಗೆ ಚರ್ಚಿಸಲಾಗುವುದು ಎಂದರು.
ದೇಶದ ಆರ್ಥಿಕತೆ ಅಭಿವೃದ್ಧಿಗೆ ಸಣ್ಣ ಕೈಗಾರಿಗೆಗಳ ಪಾತ್ರ ಪ್ರಮುಖವಹಿಸುತ್ತಿದ್ದು, ದುಡಿಯುವ ಕೈಗಳಿಗೆ ಹೆಚ್ಚಿನ ಉದ್ಯೋಗ ದೊರೆದಾಗ ಮಾತ್ರ ದೇಶ ಅಭಿವೃದ್ಧಿ ಕಾಣಲು ಸಾಧ್ಯವಾಗುತ್ತದೆ ಎಂದರು ಅಭಿಪ್ರಾಯ ವ್ಯಕ್ತಪಡಿಸಿದರು.
ಬಾಗಲಕೋಟೆ ತೋಟಗಾರಿಕೆ ವಿವಿ ತೋಟಗಾರಿಕಾ ತಂತ್ರಜ್ಞಾನ ವಿಭಾಗದ ಮುಖ್ಯಸ್ಥ ಡಾ.ಎಸ್.ಎಲ್. ಜಗದೀಶ ಅವರು ‘ತೋಟಗಾರಿಕೆಯಲ್ಲಿ ಉದ್ದಿಮೆಯ ಅವಕಾಶಗಳು’ ಎಂಬ ವಿಷಯದ ಕುರಿತು ಮಾತನಾಡಿ, ತೋಟಗಾರಿಕೆ ಬೆಳೆಗಳ ಸಂಸ್ಕರಣೆ, ಸಂಗ್ರಹಣೆ ಒಂದು ಸವಾಲಿನ ಕೆಲಸ. ಬೆಲೆ ವೈಪರೀತ್ಯ ಎನ್ನುವುದು ತೋಟಗಾರಿಕೆ ಬೆಳೆಗಾರರನ್ನು ಅತಿಯಾಗಿ ಕಾಡುತ್ತಿದೆ. ತೋಟಗಾರಿಕೆ ಬೆಳೆಗಳ ಸಂಸ್ಕರಣೆ, ಸಂಗ್ರಹಣೆಗೆ ಕೋಲ್ಡ್ ಸ್ಟೊರೇಜ್ ಸ್ಥಾಪಿಸಿ ಅವುಗಳ ಸಂರಕ್ಷಣೆ ಮಾಡಬೇಕಾಗಿದೆ ವಿಶ್ಲೇಷಿಸಿದರು.

ಜಿಪಂ ಅಧ್ಯಕ್ಷ ಶಿವಯೋಗೆಪ್ಪ ನೇದಲಗಿ, ಸೂಕ್ಷ್ಮ ಮತ್ತು ಮಧ್ಯಮ ಕೈಗಾರಿಕೆಗಳ ನಿರ್ದೇಶನಾಲಯದ ನಿರ್ದೇಶಕ ಎಚ್.ಎಂ.ಶ್ರೀನಿವಾಸ, ರಾಜ್ಯ ಸಣ್ಣ ಕೈಗಾರಿಕೆಗಳ ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ರವಿ ಕಿರಣ ಕುಲಕರ್ಣಿ, ಉಪಾಧ್ಯಕ್ಷ ಆರ್.ರಾಜು, ಜಂಟಿ ಕಾರ್ಯದರ್ಶಿಗಳಾದ ಸುರೇಶ್ ಸಾಗರ್, ಎಸ್.ವಿಶ್ವೇಶ್ವರಯ್ಯ, ಉದ್ಯಮಿ ದುಂಡಪ್ಪ ಗುಡ್ಡೋಡಗಿ, ಎಸ್.ವಿ.ಪಾಟೀಲ, ನಿಂಗಣ್ಣ ಬಿರಾದಾರ, ಸಂಜಯ ಪಾಟೀಲ, ಟಿ.ಸಿದ್ದಣ್ಣ, ಸಂತೋಷ ಇನಾಮದಾರ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *