ವಿದ್ಯುತ್ ಬಿಲ್ ಪಾವತಿಸದ ಜೆಡಿಎಸ್

ವಿಜಯಪುರ: ಆಡಳಿತ ಪಕ್ಷದ ಜಿಲ್ಲಾ ಕಚೇರಿಯಲ್ಲೇ ವಿದ್ಯುತ್ ಅಕ್ರಮವಾಗಿ ಬಳಸಿಕೊಳ್ಳುತ್ತಿರುವ ಆರೋಪ ಕೇಳಿ ಬಂದಿದ್ದು, ಈವರೆಗೆ 5452 ರೂ. ಬಿಲ್ ಬಾಕಿ ಇದ್ದರೂ ಹೆಸ್ಕಾಂ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆಂಬ ಆರೋಪ ಕೇಳಿ ಬಂದಿದೆ.

ನಗರದ ಹೃದಯ ಭಾಗದಲ್ಲಿರುವ ಜೆಡಿಎಸ್ ಪಕ್ಷದ ಕಾರ್ಯಾಲಯದಲ್ಲಿ ಅಕ್ರಮವಾಗಿ ವಿದ್ಯುತ್ ಸಂಪರ್ಕ ತೆಗೆದುಕೊಂಡಿದ್ದಾರೆನ್ನಲಾಗಿದೆ. 10 ವರ್ಷಗಳಿಂದ ವಿದ್ಯುತ್ ಕಳ್ಳತನ ಮಾಡುತ್ತಿದ್ದಾರೆ. ಮೀಟರ್‌ಗೆ ಸಂಪರ್ಕ ಕಲ್ಪಿಸದೆ ನೇರವಾಗಿ ವಿದ್ಯುತ್ ಬಲ್ಬ್‌ಗೆ ಸಂಪರ್ಕವಿದೆ. ಅದಾಗ್ಯೂ ಹೆಸ್ಕಾಂನವರು ಮೌನಕ್ಕೆ ಶರಣಾಗಿದ್ದಾರೆಂದು ಸಾಮಾಜಿಕ ಕಾರ್ಯಕರ್ತ ಶರಣು ಕಾಟಕರ ಆರೋಪಿಸಿದ್ದಾರೆ.

ಆರ್‌ಆರ್ ನಂ. 985 ಹಾಗೂ ಅಕೌಂಟ್ ನಂಬರ್ 160 8893000 ಕಾಂಗ್ರೆಸ್ ಭವನ ಎಂದು ದಾಖಲಾತಿಯಲ್ಲಿದೆ. ಈ ಹಿಂದೆ ಇದು ಕಾಂಗ್ರೆಸ್ ಭವನವಾಗಿದ್ದ ಕಟ್ಟಡ ಇಂದು ಜೆಡಿಎಸ್ ಕಾರ್ಯಾಲಯವಾಗಿದೆ. ಈ ಹಿಂದೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿತ್ತು. ಈಗ ಜೆಡಿಎಸ್ ಮತ್ತು ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಇರುವುದರಿಂದ ಈ ಎರಡೂ ಪಕ್ಷಗಳ ರಾಜಕಾರಣಿಗಳು ವಿದ್ಯುತ್ ನಿಗಮದ ಪ್ರಭಾವಬೀರಿ ಸರ್ಕಾರಕ್ಕೆ ತೆರಿಗೆ ವಂಚಿಸುತ್ತಿದ್ದಾರೆಂಬುದು ಶರಣು ಅವರ ಆರೋಪ.

ಕ್ರಮಕ್ಕೆ ಒತ್ತಾಯ
ಸರ್ಕಾರದ ಕಾಯ್ದೆ ಪ್ರಕಾರ ವಿದ್ಯುತ್ ಕಳ್ಳತನಕ್ಕೆ ಮೂರು ತಿಂಗಳಿಂದ 5 ವರ್ಷಗಳವರೆಗೆ ಗರಿಷ್ಟ ಜೈಲು ವಾಸ, 5000 ರಿಂದಾ 50,000 ವರೆಗೆ ದಂಡ, ಮೂರು ತಿಂಗಳಿಂದ ಒಂದು ವರ್ಷದರೆಗೆ ವಿದ್ಯುತ್ ಸಂಪರ್ಕ ಕಡಿತ, ಇಂತಹ ಪ್ರಕರಣಗಳನ್ನು ವಿಶೇಷ ನ್ಯಾಯಾಲಯ, ಉಚ್ಚನ್ಯಾಯಾಲಯದಿಂದ ಮಾತ್ರ ಜಾಮೀನು, ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ, ವಿದ್ಯುತ್ ಕಳ್ಳರಿಗೆ ಸಹಾಯ ಮಾಡುವವರಿಗೆ ಮತ್ತು ಅವರನ್ನು ಉತ್ತೇಜಿಸುವವರಿಗೂ ಶಿಕ್ಷೆ ಎಂದು ಕಾನೂನಿನಲ್ಲಿದೆ. ಈ ಶಿಕ್ಷೆ ಸದರಿ ಎರಡು ಪಕ್ಷಗಳಿಗೆ ಸಂಬಂಧಪಟ್ಟವರಿಗೆ ಆಗಬೇಕೆಂದು ಶರಣು ಸಂಗಪ್ಪ ಕಾಟಕರ ಒತ್ತಾಯಿಸಿದ್ದಾರೆ.

ಜನಸಾಮಾನ್ಯರಿಗೆ ಒಂದು ನ್ಯಾಯ, ರಾಜಕಾರಣಿಗಳಿಗೊಂದು ನ್ಯಾಯ ಎನ್ನುವಂತಾಗಿದೆ. ಹತ್ತಾರು ವರ್ಷಗಳಿಂದ ತೆರಿಗೆಯನ್ನು ಕಟ್ಟಿಸಿಕೊಳ್ಳದೆ ಕೆಪಿಟಿಸಿಎಲ್‌ನವರು ಯಾರ ಪ್ರಭಾವಕ್ಕೆ ಒಳಗಾಗಿದ್ದಾರೆ ಎಂಬುದು ಸಾರ್ವಜನಿಕರಿಗೆ ಗೊತ್ತಾಗಬೇಕಾಗಿದೆ. ವಿದ್ಯುತ್ ತೆರಿಗೆಯನ್ನು ಕಾಂಗ್ರೆಸ್‌ನವರು ಕಟ್ಟಬೇಕೋ ಅಥವಾ ಜೆಡಿಎಸ್‌ನವರು ಕಟ್ಟಬೇಕೊ ಎಂಬುದನ್ನು ಹೆಸ್ಕಾಂನವರು ಬಹಿರಂಗಪಡಿಸಬೇಕು. ಸರ್ಕಾರದ ವಿದ್ಯುತ್ ತೆರಿಗೆಯನ್ನು ವಂಚಿಸುತ್ತಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಸರ್ವಸದಸ್ಯರಿಗೆ ಮತ್ತು ಸಂಬಂಧಟಪ್ಟವರ ಮೇಲೆ ಕಾನೂನು ರೀತಿ ಕ್ರಮಕೈಗೊಳ್ಳಬೇಕು.
ಶರಣು ಕಾಟಕರ, ಸಾಮಾಜಿಕ ಕಾರ್ಯಕರ್ತ

ಈ ಹಿಂದೆ ಸಂಸ್ಥಾ ಕಾಂಗ್ರೆಸ್ ಹೆಸರಿಗಿದ್ದ ಕಟ್ಟಡವನ್ನು ಜನತಾ ದಳದ ಹೆಸರಿಗೆ ಮಾಡಿಕೊಳ್ಳಲಾಗಿದೆ. ವಿದ್ಯುತ್ ಬಿಲ್ ಸಹಿತ ಎಲ್ಲ ಕರ ಜನತಾದಳದ ಹೆಸರಿಗೆ ಬರಲಿವೆ. ಅಧಿಕಾರ ಸ್ವೀಕರಿಸಿ ತಿಂಗಳಾಗಿದೆ. ಬಿಲ್ ಬಾಕಿ ಇರಬಹುದು. ಆದರೆ, ಅಕ್ರಮ ಸಂಪರ್ಕವಿಲ್ಲ. ಹಾಗಿದ್ದರೆ ಅಧಿಕಾರಿಗಳು ಸುಮ್ಮನಿರುತ್ತಿದ್ದರೆ? ಬಾಕಿ ಇರುವ ಬಿಲ್ ಬಗ್ಗೆ ಗಮನಕ್ಕಿಲ್ಲ ಆ ಬಗ್ಗೆ ಪರಿಶೀಲಿಸಲಾಗುವುದು.
ಮಲ್ಲಿಕಾರ್ಜುನ ಯಂಡಿಗೇರಿ, ಜೆಡಿಎಸ್ ಜಿಲ್ಲಾಧ್ಯಕ್ಷ