ಅಸಂಘಟಿತ ಕಾರ್ಮಿಕರಿಗೆ ಕೂಲಿ ಭಾಗ್ಯ

ವಿಜಯಪುರ: ನಗರದ ಗೋದಾವರಿ ಹೋಟೆಲ್ ಬಳಿ ಪ್ರತಿದಿನ ಕೂಲಿಗಾಗಿ ಸೇರುವ ಅಸಂಘಟಿತ ಕೂಲಿ ಕಾರ್ಮಿಕರಿಗೆ ಕೊನೆಗೂ ಅಧಿಕಾರಿಗಳು ಕೂಲಿ ಭಾಗ್ಯ ಕಲ್ಪಿಸಿದ್ದಾರೆ.
ನಿತ್ಯ ನೂರಾರು ಕಾರ್ಮಿಕರು ಇಲ್ಲಿ ಕೂಲಿಗಾಗಿ ಸೇರುತ್ತಿದ್ದು ಇದೊಂದು ಕಾರ್ಮಿಕರ ಕಟ್ಟೆಯಾಗಿ ಮಾರ್ಪಟ್ಟಿದೆ. ನಗರ ಹಾಗೂ ಹೊರವಲಯದ ತಾಂಡಾಗಳಿಂದ ಅನೇಕರು ಪ್ರತಿ ದಿನ ಕೂಲಿ ಅರಸಿ ನಗರಕ್ಕೆ ಬರುವುದು ವಾಡಿಕೆಯಾಗಿದೆ. ಸ್ಥಳೀಯ ಮಟ್ಟದಲ್ಲಿ ಉದ್ಯೋಗ ಸಿಗದ ಕಾರಣಕ್ಕೆ ನಗರಕ್ಕೆ ಬುತ್ತಿ ಕಟ್ಟಿಕೊಂಡು ಬರುವುದಾಗಿ ಕಾರ್ಮಿಕರು ಗೋಳು ತೋಡಿಕೊಳ್ಳುತ್ತಿದ್ದರು.
ಮೇ 1 ರಂದು ಕಾರ್ಮಿಕ ದಿನಾಚರಣೆಯಂದು ಎಲ್ಲ ಕಾರ್ಮಿಕರು ರಜೆ ಪಡೆದು ಆಚರಣೆಯಲ್ಲಿ ತೊಡಗಿದ್ದರೆ ಇವರು ಮಾತ್ರಿ ಕೂಲಿಗಾಗಿ ಅಲೆಯುತ್ತಿದ್ದರು. ಬೈಕ್ ಮೇಲೆ ಬರುವ ಹೋಗುವರನ್ನು ತಡೆದು ಕೂಲಿಗಳು ಬೇಕಾ? ಎಂದು ದಯನೀಯವಾಗಿ ಕೇಳಿಕೊಳ್ಳುತ್ತಿದ್ದರು. ಈ ಬಗ್ಗೆ ‘ವಿಜಯವಾಣಿ’ ದುಡಿಯದಿದ್ದರೆ ಹೊಟ್ಟೆ ತುಂಬಲ್ಲ ಎಂಬ ತಲೆಬರಹದಡಿ ಕಳಕಳಿಯ ವರದಿ ಪ್ರಕಟಿಸಿತ್ತು.
ಎಚ್ಚೆತ್ತ ಅಧಿಕಾರಿ ವರ್ಗ: ವರದಿಯಿಂದ ಎಚ್ಚೆತ್ತ ಅಧಿಕಾರಿ ವರ್ಗ ಇಲ್ಲಿನ ಕೂಲಿ ಕಾರ್ಮಿಕರಿಗೆ ಉದ್ಯೋಗ ಚೀಟಿ ನೀಡುವುದರ ಜತೆ ಉದ್ಯೋಗ ವ್ಯವಸ್ಥೆಗೂ ಮಾರ್ಪಾಟು ಮಾಡಿದೆ. ಪ್ರತಿ ದಿನ 7 ರಿಂದ 10.30ರವರೆಗೆ ಉದ್ಯೋಗಕ್ಕೆ ಬರುವ ಕೂಲಿಗಳಿಗೆ ನರೇಗಾ ಬಗ್ಗೆ ತಿಳಿವಳಿಕೆ ನೀಡಿ ಸ್ಥಳೀಯ ಮಟ್ಟದಲ್ಲಿ ಉದ್ಯೋಗ ಕಲ್ಪಿಸಲು ಅಧಿಕಾರಿಗಳು ಮುಂದಾಗಿದ್ದಾರೆ.
ಜಿಪಂ ಸಿಇಒ ವಿಕಾಸ್ ಸುರಳಕರ ಅವರ ಆದೇಶಾನುಸಾರ ವಿಜಯಪುರ ತಾಪಂ ಇಒ ಅವರು ವಿಶೇಷ ತಂಡ ರಚಿಸಿದ್ದಾರೆ. ಈಗಾಗಲೇ ಸಿದ್ದಾಪುರ ಪಿಡಿಒ ಪದ್ಮಿನಿ ಬಿರಾದಾರ ಅವರ ನೇತೃತ್ವದ ತಂಡದ ಅವಧಿ ಮುಗಿದಿದ್ದು ಇದೀಗ ಎರಡನೇ ತಂಡ ಕಾರ್ಯಾಚರಣೆಗಿಳಿದಿದೆ. ಮೇ 21 ರಿಂದ 24ರವರೆಗೆ ಅಧಿಕಾರಿಗಳಾದ ಜಯಶ್ರೀ ಪವಾರ, ಶ್ರೀಶೈಲ ತಳವಾರ, ಭಾರತಿ ಹಿರೇಮಠ ಹಾಗೂ ವಿಠಲ ಹಟ್ಟಿ ಅವರನ್ನು ನೇಮಿಸಲಾಗಿದೆ. ಮೇ 25 ರಿಂದ 28ರವರೆಗೆ ಮಲ್ಲಮ್ಮ ಪಾಟೀಲ, ಶೋಭಕ್ಕ ಶಿಳೀನ, ಎಸ್.ಐ. ಗದಗಿಮಠ, ರವಿ ಮಾಸರಡ್ಡಿ ಅವರನ್ನು ಹಾಗೂ ಮೇ 29ರಿಂದ ಜೂ.1ರವರೆಗೆ ಜಿ.ಎ.ದಶವಂತ, ಆರ್.ಎಂ. ಪಾಟೀಲ, ಸುರೇಶ ಕಳ್ಳಿಮನಿ, ರಾಜಶೇಖರ ಬಿರಾದಾರ ಇವರನ್ನು ನೇಮಿಸಲಾಗಿದೆ.
ಶಿಸ್ತು ಕ್ರಮದ ಎಚ್ಚರಿಕೆ: ಸದರಿ ಅಧಿಕಾರಿಗಳು ಪ್ರತಿ ದಿನ ತಪ್ಪದೇ ಗೋದಾವರಿ ಹೋಟೆಲ್ ಬಳಿ ಬೆಳಗ್ಗೆ 7.30ರಿಂದ 10.30ರವರೆಗೆ ಸೇರಬೇಕು. ಅಲ್ಲಿಗೆ ಬರುವ ಕಾರ್ಮಿಕರಿಗೆ ತಿಳಿವಳಿಕೆ ನೀಡಿ ಆಯಾ ಪಂಚಾಯ್ತಿ ವ್ಯಾಪ್ತಿಯಲ್ಲಿ ಉದ್ಯೋಗ ವ್ಯವಸ್ಥೆ ಕಲ್ಪಿಸಬೇಕು. ಈಗಾಗಲೇ ಬರ ನಿರ್ವಹಣೆ ಕಾಮಗಾರಿ ಕೈಗೊಳ್ಳಲಾಗುತ್ತಿದ್ದು ಹೆಚ್ಚಿನ ಉದ್ಯೋಗ ಅವಕಾಶ ಕಲ್ಪಿಸಬೇಕು. ಅಧಿಕಾರಿಗಳ ತಂಡ ಪ್ರತಿ ದಿನ ವರದಿ ತಯಾರಿಸಿ ಉದ್ಯೋಗ ನೀಡುವ ನಿಟ್ಟಿನಲ್ಲಿ ಕಾಳಜಿ ತೋರಬೇಕು. ಅನವಶ್ಯಕವಾಗಿ ಗೈರಾದಲ್ಲಿ, ನಿಷ್ಕಾಳಜಿ ತೋರಿದಲ್ಲಿ ಅಂಥವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಆದೇಶ ಪ್ರತಿಯಲ್ಲಿ ಸ್ಪಷ್ಟವಾಗಿ ಎಚ್ಚರಿಸಲಾಗಿ.

Leave a Reply

Your email address will not be published. Required fields are marked *