ಬೇಸಿಗೆ ಮುನ್ನವೇ ಮಾರುಕಟ್ಟೆಗೆ ಕಲ್ಲಂಗಡಿ..!

ಹೀರಾನಾಯ್ಕ ಟಿ.

ವಿಜಯಪುರ: ಚಳಿಗಾಲ ಮುಗಿದು ಬೇಸಿಗೆ ಬರುವ ಮುನ್ನವೇ ಬಿಸಿಲೂರು, ಬರದ ನಾಡು ವಿಜಯಪುರ ಜಿಲ್ಲೆಯ ಮಾರುಕಟ್ಟೆಗೆ ಕಲ್ಲಂಗಡಿ ಲಗ್ಗೆ ಇಟ್ಟಿದೆ. ರಸ್ತೆ ಬದಿ ರಾಶಿರಾಶಿಯಾಗಿ ಕಲ್ಲಂಗಡಿ ಹಣ್ಣುಗಳು ಬಂದಿಳಿದಿವೆ. ವ್ಯಾಪಾರವೂ ಭರ್ಜರಿಯಾಗಿ ಟೇಕಾಫ್ ಆಗಿದೆ.

ಪ್ರತಿ ವರ್ಷ ಬೇಸಿಗೆ ಆರಂಭದಲ್ಲಿ ಕಲ್ಲಂಗಡಿ ಹಣ್ಣು ಬರುತ್ತಿದ್ದವು. ಈ ವರ್ಷವೂ ಸುಡುಬಿಸಿಲು ಬರುವುದಕ್ಕೆ ಮುನ್ನವೇ ಗುಮ್ಮಟನಗರಿಯಲ್ಲಿ ರಾಶಿರಾಶಿ ಕಲ್ಲಂಗಡಿ ಹಣ್ಣುಗಳು ಪ್ರತ್ಯಕ್ಷವಾಗಿವೆ.

ಶಿವರಾತ್ರಿ ಹಬ್ಬ ಮುಗಿದ ಕೂಡಲೇ ಚಳಿಗಾಲವೂ ಮುಗಿಯುತ್ತದೆ ಎನ್ನುವುದು ಪ್ರತೀತಿ. ಆದರೆ ಈ ಹಬ್ಬಕ್ಕೆ ಇನ್ನೂ ಒಂದು ತಿಂಗಳು ಕಾಯಬೇಕು. ಆಗಲೇ ಕಲ್ಲಂಗಡಿ ಹಣ್ಣುಗಳು ಲಗ್ಗೆ ಇಟ್ಟು ದೇಹಕ್ಕೆ ತಂಪು ಒದಗಿಸುತ್ತಿವೆ.

ಈ ಬಾರಿ ಕಲ್ಲಂಗಡಿ ದುಬಾರಿ

ಬೇಸಿಗೆಗೆ ಜನರು ಅತಿ ಹೆಚ್ಚು ಇಷ್ಟಪಡುವುದು ಕಲ್ಲಂಗಡಿಯನ್ನೆ. ಹೀಗಾಗಿ ಬೇಡಿಕೆಯೂ ಜಾಸ್ತಿಯಾಗುವ ನಿರೀಕ್ಷೆ ಇದೆ. ಕಲ್ಲಂಗಡಿಯಲ್ಲಿ ಕಿರಣ್ ಮತ್ತು ನಾಮಧಾರಿ (ನಂದಾರಿ) ಎಂಬ ಎರಡು ವಿಧಗಳಿವೆ. ಕಿರಣ್ ಕೊಂಚ ದುಬಾರಿಯಾದರೂ ಅದಕ್ಕೆ ಬೇಡಿಕೆ ಹೆಚ್ಚು. ಅತಿ ರುಚಿ ಇರುವ ನಾಮಧಾರಿ ಚೆಂದವಾದರೂ ಬೆಲೆ ಕೈಗೆಟುಕುವಂತಿರುತ್ತದೆ. ಕಳೆದ ವರ್ಷ ಕೆಜಿ ಕಲ್ಲಂಗಡಿ ಬೆಲೆ 25ರಿಂದ 35 ರೂ. ಇತ್ತು. ಈ ವರ್ಷ 35ರಿಂದ 50 ರೂ.ಗೆ ಏರಿಕೆ ಕಂಡಿದೆ. ಕಾಯಿ ಲೆಕ್ಕದಲ್ಲಿಯೂ ಮಾರಾಟವಾಗುತ್ತಿದ್ದು, ಒಂದು ಹಣ್ಣಿಗೆ (ನಂದಾರಿ) 50 ರಿಂದ 120 ರೂ. ಇದೆ. ಇನ್ನು ಒಂದು ಪ್ಲೇಟ್ ಹಣ್ಣಿಗೆ 10 ರಿಂದ 15 ರೂ. ವರೆಗೆ ಮಾರಾಟ ಮಾಡುತ್ತೇವೆ ಎನ್ನುತ್ತಾರೆ ಹಣ್ಣಿನ ವ್ಯಾಪಾರಿ ಮುತ್ತು ಭಜಂತ್ರಿ.

ರಸ್ತೆ ಬದಿಯಲ್ಲೆ ಹೆಚ್ಚು ಮಾರಾಟ

ಮಾಮೂಲಿ ಹಣ್ಣಿನ ಅಂಗಡಿ ಅಥವಾ ಮಾಲ್‌ಗಳಿಗಿಂತ ರಸ್ತೆ ಬದಿಯಲ್ಲೆ ಕಲ್ಲಂಗಡಿ ಹೆಚ್ಚು ಮಾರಾಟವಾಗುತ್ತದೆ. ಬೇಸಿಗೆ ಬಂತೆಂದರೆ ರಸ್ತೆಯಲ್ಲಿಯೇ ವ್ಯಾಪಾರಿಗಳು ರಾಶಿ ಹಾಕುವುದು ಹೆಚ್ಚು. ಹೆದ್ದಾರಿ, ಬೈಪಾಸ್, ನಗರದ ಪ್ರಮುಖ ರಸ್ತೆಗಳು ಕಲ್ಲಂಗಡಿ ಮಾರಾಟಕ್ಕೆ ಪ್ರಶಸ್ತ ಸ್ಥಳಗಳಾಗಿವೆ.

ತಮಿಳುನಾಡು, ಆಂಧ್ರ ಪ್ರದೇಶ, ತೆಲಂಗಾಣದಿಂದ ಹೆಚ್ಚಾಗಿ ಗುಮ್ಮಟನಗರಿಗೆ ಕಲ್ಲಂಗಡಿ ಬರುತ್ತಿವೆ. ಈ ಹಣ್ಣಿಗೆ ಬೇಡಿಕೆ ಹೆಚ್ಚಿದೆ. ಅಲ್ಲದೆ ರಾಜ್ಯದ ಕೋಲಾರ, ಮಂಡ್ಯ, ಚಾಮರಾಜನಗರ, ಮೈಸೂರು, ಚಿಕ್ಕ ಬಳ್ಳಾಪುರ, ಬಾಗಲಕೋಟೆ ಜಿಲ್ಲೆಗಳಿಂದ ಸ್ಥಳೀಯ ಮಾರುಕಟ್ಟೆಗೆ ಕಲ್ಲಂಗಡಿ ಬರುತ್ತಿದೆ. ಬೇಸಿಗೆಯಲ್ಲಿ ತಾಪಮಾನ ಹೆಚ್ಚಳಗೊಳ್ಳುವುದರಿಂದ ಬಿಸಿಲೂರು ವಿಜಯಪುರ ಜಿಲ್ಲೆಯಲ್ಲಿ ಪ್ರತಿ ವರ್ಷವೂ ಉಷ್ಣಾಂಶ ಹೆಚ್ಚಾಗಿರುತ್ತದೆ. ಹೀಗಾಗಿ ಈ ಭಾಗದಲ್ಲಿ ಕಲ್ಲಂಗಡಿಗೆ ಹೆಚ್ಚು ಡಿಮಾಂಡ್ ಇದೆ.

ಚಳಿಗಾಲದಲ್ಲೇ ಹೆಚ್ಚಿದ ಬೇಸಿಗೆ ಧಗೆ

ಬಿಸಿಲೂರಿನಲ್ಲಿ ಪ್ರಸ್ತುತ 28 ರಿಂದ 31ಡಿಗ್ರಿ ಸೆಲ್ಸಿಯಸ್ ತಾಪಮಾನವಿದ್ದು, ಇನ್ನು ಬೇಸಿಗೆಗೆ ಇನ್ನಷ್ಟು ಹೆಚ್ಚಳಗೊಳ್ಳಲಿದೆ. ಈಗಾಗಲೇ ಬೇಸಿಗೆ ಬಿಸಿ ಜನರಿಗೆ ತಟ್ಟುತ್ತಿದ್ದು, ತಂಪು ಪಾನೀಯದ ಮೊರೆ ಹೋಗುವಂತಾಗಿದೆ.

ಬೆಳಗ್ಗೆ ಚಳಿ ಕಾಣಿಸಿಕೊಂಡರೆ ಮಧ್ಯಾಹ್ನದ ವೇಳೆಗೆ ಬಿಸಿಲು ಹೆಚ್ಚಾಗಿರುತ್ತದೆ. ಬೇಸಿಗೆಯಲ್ಲಿ ಜನರಲ್ಲಿ ಆರೋಗ್ಯದ ಬಗ್ಗೆ ಕಾಳಜಿ ಹೆಚ್ಚಾಗಿರುವುದರಿಂದ ಕಲ್ಲಂಗಡಿ ಸೇವನೆ ಮೊರೆ ಹೋಗುತ್ತಿದ್ದರೆ ಇನ್ನೊಂದೆಡೆ ವಿದೇಶಿ ತಂಪು ಪಾನೀಯಗಳ ಸೇವನೆಯತ್ತ ಗಮನ ಹರಿಸುತ್ತಿರುವ ದೃಶ್ಯಗಳು ಕಂಡು ಬರುತ್ತಿವೆ.

ಬೇಸಿಗೆಗೂ ಮುನ್ನ ಬಿಸಿಲು ಹೆಚ್ಚಾಗಿದೆ. ಇನ್ನು ಮುಂದಿನ ದಿನಗಳಲ್ಲಿ ಮನೆಯಿಂದ ಹೊರ ಬರುವುದೇ ಕಷ್ಟವಾಗಲಿದೆ. ಶಾಲೆ, ಕಾಲೇಜುಗಳಿಗೆ, ಕಚೇರಿ ಕೆಲಸಗಳಿಗೆ ಹೋಗುವುದು ಹೈರಾಣವಾಗಲಿದೆ.
– ಸುರೇಶ ಬಡಿಗೇರ ಸ್ಥಳೀಯ ನಿವಾಸಿ

14 ವರ್ಷಗಳಿಂದ ಕಲ್ಲಂಗಡಿ ವ್ಯಾಪಾರ ಮಾರಾಟ ಮಾಡಿಕೊಂಡು ಕುಟುಂಬ ನಿರ್ವಹಣೆ ಮಾಡುತ್ತಿದ್ದೇನೆ. ಸದ್ಯಕ್ಕೆ ಕಲ್ಲಂಗಡಿ ವ್ಯಾಪಾರ ಚೆನ್ನಾಗಿ ನಡೆಯುತ್ತಿದೆ. ವಿಜಯಪುರ-ಬಾಗಲಕೋಟೆ ಅಲ್ಲದೆ ನೆರೆ ರಾಜ್ಯ ಆಂಧ್ರಪ್ರದೇಶ, ತೆಲಂಗಾಣ,ತಮಿಳುನಾಡುಗಳಿಂದಲೂ ಕಲ್ಲಂಗಡಿ ಬರುತ್ತಿದೆ.
– ಮುತ್ತು ಭಜಂತ್ರಿ ಕಲ್ಲಂಗಡಿ ವ್ಯಾಪಾರಿ