ಕಂಟೇನರ್ ತೆರವಿಗೆ ಸ್ಥಳೀಯರ ಆಗ್ರಹ

ಚಿಕ್ಕಮಗಳೂರು: ವಿಜಯಪುರ ಗಣಪತಿ ಪೆಂಡಾಲ್ ಆವರಣದಲ್ಲಿ ಇರಿಸಿರುವ ನಗರಸಭೆ ಕಸದ ಕಂಟೇನರ್ ತೆರವುಗೊಳಿಸುವಂತೆ ಆಗ್ರಹಿಸಿ ಮಂಗಳವಾರ ನಾಗರಿಕರು ಪ್ರತಿಭಟಿಸಿ ಆಕ್ರೋಶ ವ್ಯಕ್ತಪಡಿಸಿದರು.

ಎರಡ್ಮೂರು ದಿನಗಳಿಂದ ಈ ಪ್ರದೇಶದಲ್ಲಿ ಕಸದ ಕಂಟೇನರ್ ಇರಿಸಿದ ಪರಿಣಾಮ ತ್ಯಾಜ್ಯ ಸೋರಿಕೆಯಾಗಿ ನೊಣ, ಸೊಳ್ಳೆಗಳು ಮುತ್ತಿಕೊಂಡು ಅಕ್ಕಪಕ್ಕದ ಜನರಿಗೆ ಸಾಂಕ್ರಾಮಿಕ ರೋಗದ ಭೀತಿ ಉಂಟಾಗಿದೆ ಎಂದು ಆರೋಪಿಸಿದ ಪ್ರತಿಭಟನಾಕಾರರು, ಕೂಡಲೇ ಕಂಟೇನರ್ ತೆರವುಗೊಳಿಸುವಂತೆ ಒತ್ತಾಯಿಸಿದರು.

ಮಧ್ಯಾಹ್ನ ಹತ್ತಾರು ಜನ ಸ್ಥಳಕ್ಕೆ ಆಗಮಿಸಿ ಕಂಟೇನರ್​ಗೆ ಸ್ವಚ್ಛ ಗಾಡಿಗಳಿಂದ ಕಸ ತಂದು ಹಾಕಲು ಯತ್ನಿಸಿದಾಗ ತಡೆದು ನಿಲ್ಲಿಸಿದ ಪ್ರತಿಭಟನಾಕಾರರು, ಯಾವುದೇ ಕಾರಣಕ್ಕೂ ಕಸ ಹಾಕದಂತೆ ಆಗ್ರಹಿಸಿದರು.