ಸುಸಜ್ಜಿತ ರೈಲು ನಿಲ್ದಾಣ ನಿರ್ಮಾಣದ ಯೋಜನೆ

<< ಶಾಸಕ ಯತ್ನಾಳರಿಂದ ನಿಲ್ದಾಣ ವೀಕ್ಷಣೆ ಅಧಿಕಾರಿಗಳಿಗೆ ಸೂಚನೆ >>

ವಿಜಯಪುರ: ಐತಿಹಾಸಿಕ ಹಿನ್ನೆಲೆಯುಳ್ಳ ವಿಜಯಪುರ ನಗರ ರೈಲ್ವೆ ನಿಲ್ದಾಣದ ಪಕ್ಕದಲ್ಲಿರುವ ಕೊಳಚೆ ಪ್ರದೇಶವನ್ನು ತೆರವುಗೊಳಿಸಿ ಸುಂದರ ಹಾಗೂ ಸುಸಜ್ಜಿತ ರೈಲ್ವೆ ನಿಲ್ದಾಣ ನಿರ್ಮಾಣ ಮಾಡಬೇಕೆಂಬುದು ಯೋಜನೆ ರೂಪಿಸಲಾಗಿದೆ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ಮಂಗಳವಾರ ನಗರದ ರೈಲ್ವೆ ನಿಲ್ದಾಣ ಹಾಗೂ ಸುತ್ತಲಿನ ಸ್ಥಳ ವೀಕ್ಷಣೆ ಮಾಡಿ ನಂತರ ಅವರು ಮಾತನಾಡಿದರು.

ಐತಿಹಾಸಿಕ ಹಿನ್ನೆಲೆಯುಳ್ಳ ವಿಜಯಪುರ ನಗರಕ್ಕೆ ದೇಶಿ-ವಿದೇಶಿ ಯಾತ್ರಿಕರು ಇಲ್ಲಿನ ಸ್ಮಾರಕಗಳನ್ನು ನೋಡಬೇಕೆಂದು ಬಂದಾಗ ರೈಲ್ವೆ ನಿಲ್ದಾಣದಿಂದ ಹೊರಬಂದರೆ ಅವರ ಕಣ್ಣಿಗೆ ಸುತ್ತಲಿನ ಕೊಳಚೆ ಪ್ರದೇಶ ಹಾಗೂ ಗಬ್ಬುವಾಸನೆಯ ಕಂದಕಗಳು ಕಾಣುತ್ತವೆ. ಈ ಗಲೀಜು ಪ್ರದೇಶವನ್ನು ಸ್ವಚ್ಛಗೊಳಿಸಿ ಸುಂದರ ಹಾಗೂ ಸುಸಜ್ಜಿತ ರೈಲ್ವೆ ನಿಲ್ದಾಣ ನಿರ್ಮಾಣ ಮಾಡಬೇಕೆಂಬ ಯೋಜನೆ ರೂಪಿಸಲಾಗಿದೆ ಎಂದವರು ಹೇಳಿದರು.

ನಾನು ಕೇಂದ್ರ ರೈಲ್ವೆ ಖಾತೆ (ರಾಜ್ಯ) ಸಚಿವನಾಗಿದ್ದಾಗ ವಿಜಯಪುರ ನಗರ ರೈಲ್ವೆ ನಿಲ್ದಾಣದ ಹಲವು ಕಾಮಗಾರಿಗಳನ್ನು ಮಂಜೂರು ಮಾಡಿಸಿದ್ದೆ. ಆದರೆ, ಈವರೆಗೂ ಆ ಕಾಮಗಾರಿಗಳು ನನೆಗುದಿಗೆ ಬಿದ್ದಿದ್ದವು. ನಾನು ಶಾಸಕನಾದ ನಂತರ ಮತ್ತೆ ಆ ಕಾಮಗಾರಿಗಳಿಗೆ ಚಾಲನೆ ನೀಡಬೇಕೆಂದು ಯೋಚಿಸಿ ಕೇಂದ್ರ ರೈಲ್ವೆ ಸಚಿವರಿಗೆ ಭೇಟಿಯಾಗಿ ವಿವಿಧ ಕಾಮಗಾರಿಗಳ ಪಟ್ಟಿ ಮಾಡಿ ಅವುಗಳನ್ನು ಮಂಜೂರು ಮಾಡಿಸಿಕೊಂಡಿದ್ದೇನೆ ಎಂದು ಹೇಳಿದರು.

ವಿಜಯಪುರ ನಗರ ಮಹಾನಗರ ಪಾಲಿಕೆ, ಪ್ರವಾಸೋದ್ಯಮ ಇಲಾಖೆ, ಪುರಾತತ್ವ ಇಲಾಖೆ, ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ರೈಲ್ವೆ ಅಧಿಕಾರಿಗಳೊಂದಿಗೆ ಮಂಗಳವಾರ ಸ್ಥಳ ಪರಿಶೀಲನೆ ನಡೆಸಿದ ಅವರು ರೈಲು ನಿಲ್ದಾಣಕ್ಕೆ ಹೋಗುವ ರಸ್ತೆ ಅಕ್ಕಪಕ್ಕದ ಒತ್ತುವರಿ ತೆರವುಗೊಳಿಸಿ ಅಲ್ಲಿದ್ದಂಥ ನಿವಾಸಿಗಳಿಗೆ ಆಶ್ರಯ ಯೋಜನೆಯಡಿ ಬೇರೆಡೆ ಮನೆಗಳನ್ನು ಮಂಜೂರು ಮಾಡಿಸಿ ಬೇಗ ಕಾಮಗಾರಿ ಆರಂಭಿಸುವಂತೆ ಸೂಚನೆ ನೀಡಿದರು.

ರೈಲ್ವೆ ನಿಲ್ದಾಣ ಪಕ್ಕದಲ್ಲಿ ಸುಸಜ್ಜಿತ ಬಸ್ ನಿಲ್ದಾಣ, ಸಾರ್ವಜನಿಕ ಶೌಚಗೃಹ, ಯಾತ್ರಿ ನಿವಾಸ, ಉಪಾಹಾರ ಗೃಹ ಹೀಗೆ ಹಲವು ಯೋಜನೆಗಳನ್ನು ಆದಷ್ಟು ಬೇಗ ರೂಪಿಸುವಂತೆ ಪಾಲಿಕೆ ಆಯುಕ್ತರಾದ ಡಾ. ಔದ್ರಾಮ್ ಅವರಿಗೆ ಸೂಚಿಸಿದರು.

ಈ ಎಲ್ಲ ಕಾಮಗಾರಿಗಳಿಗೆ ಬೇಕಾಗುವ ವಿವಿಧ ಇಲಾಖೆಗಳ ಸಹಾಯ ಹಾಗೂ ಪರವಾನಗಿಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಅಡ್ಡಿಪಡಿಸದೆ ಮಂಜೂರು ಮಾಡಿಕೊಡಬೇಕೆಂದು ಸೂಚಿಸಿದರು.

ಪಾಲಿಕೆ ಆಯುಕ್ತ ಡಾ. ಔದ್ರಾಮ್, ರೈಲ್ವೆ ಇಲಾಖೆ ಅಧಿಕಾರಿಗಳು, ಪುರಾತತ್ವ ಇಲಾಖೆ ಅಧಿಕಾರಿಗಳು, ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳು, ಬಿಜೆಪಿ ವಿಜಯಪುರ ನಗರ ಮಂಡಲದ ಅಧ್ಯಕ್ಷ ಶಿವರುದ್ರ ಬಾಗಲಕೋಟ, ಸಂತೋಷ ಪಾಟೀಲ, ದತ್ತಾ ಗೋಲಾಂಡೆ, ಚಂದ್ರು ಚೌಧರಿ, ಮುತ್ತು ಗಂಗಾಧರ, ಮಧು ಕಲಾದಗಿ, ಬಸವಾಜ ಗೊಳಸಂಗಿ, ವಿಷ್ಣು ಜಾಧವ, ರಾಜಶೇಖರ ಬಜಂತ್ರಿ, ಅಮೀತ್ ಗರುಡಕರ ಸೇರಿದಂತೆ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *