ವಿಶ್ವನಾಥ್ ಜವಾಬ್ದಾರಿಯಿಂದ ಮಾತನಾಡಲಿ

ವಿಜಯಪುರ : ಸಮನ್ವಯ ಸಮಿತಿ ಮುಖ್ಯಸ್ಥರಾಗಿ ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತಿಲ್ಲ ಎಂದು ಹೇಳಿಕೆ ನೀಡಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ವಿರುದ್ಧ ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಕಿಡಿಕಾರಿದ್ದಾರೆ.

ವಿಜಯಪುರ ತಾಲೂಕಿನ ನಾಗಠಾಣದಲ್ಲಿ ಭಾನುವಾರ ಬರ ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರದಲ್ಲಿ ಯಾವುದೇ ಗೊಂದಲಗಳಿಲ್ಲ. ಆದರೆ ವಿಶ್ವನಾಥ್ ಅವರು ಬೇಜವಾಬ್ದಾರಿ ಹೇಳಿಕೆ ನೀಡುವುದನ್ನು ನಿಲ್ಲಿಸಬೇಕು. ಸುಖಾಸುಮ್ಮನೆ ಗೊಂದಲಕಾರಿ ಹೇಳಿಕೆ ನೀಡುವುದು ಸರಿಯಲ್ಲ. ಅವರ ಬೇಡಿಕೆಗಳು ಏನಾದರೂ ಇದ್ದರೆ ಅವರ ವರಿಷ್ಠರಲ್ಲಿ ಕೇಳಿಕೊಳ್ಳುವುದು ಉತ್ತಮ ಎಂದು ತಿಳಿಸಿದರು.

ಸಮನ್ವಯ ಸಮಿತಿಯನ್ನು ಸಿದ್ದರಾಮಯ್ಯ ಅವರು ರಚಿಸಿದ್ದಲ್ಲ. ರಾಹುಲ್‌ಗಾಂಧಿ ಹಾಗೂ ಎಚ್.ಡಿ.ದೇವೇಗೌಡ ಅವರ ಸಮ್ಮುಖದಲ್ಲಿ ರಚನೆಯಾಗಿದ್ದು, ಸಮಿತಿ ಜವಾಬ್ದಾರಿಯುತವಾಗಿ ನಿರ್ವಹಣೆ ಮಾಡುತ್ತಿದೆ ಎಂದರು.

ಅಧಿಕಾರಿಗಳಿಗೆ ತಾಕೀತು
ರಾಜ್ಯದಲ್ಲಿ ಬರ ಇರುವ ಹಿನ್ನೆಲೆಯಲ್ಲಿ ಅಧಿಕಾರಿಗಳು ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸಬೇಕು. ಜನರಿಗೆ ಕುಡಿಯುವ ನೀರಿನ ವ್ಯವಸ್ಥೆ, ಜಾನುವಾರುಗಳಿಗೆ ಮೇವು ಇನ್ನಿತರ ಮೂಲ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕು ಎಂದು ಸಚಿವ ದೇಶಪಾಂಡೆ ಸೂಚನೆ ನೀಡಿದರು. ವಿಜಯಪುರ ಜಿಲ್ಲೆಯ ನಾಗಠಾಣ ಕೆರೆ, ಗುಣಕಿ, ತಿಡಗುಂದಿ ಇನ್ನಿತರ ಸ್ಥಳಗಳಿಗೆ ಭೇಟಿ ನೀಡಿ ಬರ ಕುರಿತು ಮಾಹಿತಿ ಪಡೆದರು.

Leave a Reply

Your email address will not be published. Required fields are marked *