ವಚನಗಳು ವ್ಯಕ್ತಿತ್ವ ವಿಕಸನದ ಆಗರಗಳು

ಪ್ರೊ.ಡಾ. ವಿಷ್ಣು ಶಿಂದೆ ಅಭಿಮತ >>

ವಿಜಯಪುರ: ವ್ಯಕ್ತಿತ್ವ ವಿಕಸನಕ್ಕೆ ಶರಣರ ವಚನಗಳಿಗಿಂತ ಬೇರೆ ಮೌಲಿಕ ಗ್ರಂಥಗಳಿಲ್ಲ ಎಂದು ಅಕ್ಕಮಹಾದೇವಿ ಮಹಿಳಾ ವಿವಿ ಶಿಕ್ಷಣ ವಿಭಾಗದ ಪ್ರಾಧ್ಯಾಪಕ ಡಾ.ವಿಷ್ಣು ಎಂ. ಶಿಂದೆ ಹೇಳಿದರು.

ನಗರ ಹೊರವಲಯದ ಇಟ್ಟಂಗಿಹಾಳ ಎಕ್ಸಲೆಂಟ್ ಪ್ರೌಢಶಾಲೆಯಲ್ಲಿ ಲಿಂ.ಎಂ.ಎಸ್.ಖೇಡ, ಲಿಂ. ಮಲ್ಲಪ್ಪ ರುದ್ರಪ್ಪ ತೋಟದ ಹಾಗೂ ಲಿಂ.ಶಂಕರಾನಂದ ಉತ್ಲಾಸರ ಇವರ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ‘ವ್ಯಕ್ತಿತ್ವ ವಿಕಸನಕ್ಕೆ ಶರಣರ ಮೌಲ್ಯಗಳು’ ವಿಷಯ ಕುರಿತು ಅವರು ಉಪನ್ಯಾಸ ನೀಡಿದರು.

ಅತ್ಯಂತ ಸರಳ ಕನ್ನಡದಲ್ಲಿ ವಚನಗಳ ಮೂಲಕ ಸಾಮಾಜಿಕ ಸುಧಾರಣೆಗೆ ಶ್ರಮಿಸಿದವರು ಶರಣರು. ಜತೆಗೆ ‘ಕಳಬೇಡ, ಕೊಲಬೇಡ ಹುಸಿಯ ನುಡಿಯಲು ಬೇಡ’ ಎನ್ನುವ ಮೂಲಕ ಅಂತರಂಗ ಹಾಗೂ ಬಹಿರಂಗ ಶುದ್ಧಿ ಬಗ್ಗೆ ಅರಿವು ಮೂಡಿಸಿದವರು. ಕಾಯಕ, ದಾಸೋಹ ತತ್ವದ ಮೂಲಕ ಜನಸಾಮಾನ್ಯರ ಇರುವಿಕೆ ಬಗ್ಗೆ ತಿಳಿಸಿಕೊಟ್ಟರು. ಅವರ ವಚನಗಳ ಸಾರ ಎಲ್ಲರೂ ಅರಿತು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಕಸಾಪ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ ಆಶಯ ನುಡಿಗಳನ್ನಾಡುತ್ತ, ಸಾಹಿತ್ಯ ಪರಿಷತ್ ರಾಜ್ಯದ ಅತಿ ದೊಡ್ಡ ಸ್ವಾಯತ್ತ ಸಂಸ್ಥೆ. ವಿಧ ವಿಧದ ದತ್ತಿಗಳ ಮೂಲಕ ಅಗಲಿದ ಗಣ್ಯರ ಸ್ಮರಣೆಗೈಯುವ ನಿಟ್ಟಿನಲ್ಲಿ ಅನೇಕ ದತ್ತಿ ಉಪನ್ಯಾಸಗಳನ್ನು ಚಾಚೂ ತಪ್ಪದೆ ಹಮ್ಮಿಕೊಂಡು ಬರುತ್ತಿದೆ. ಬೆಂಗಳೂರಿನಲ್ಲಿ ಒಬ್ಬರು ಗಿಳಿ ಸ್ಮರಣೆಗಾಗಿ ದತ್ತಿ ನೀಡಿದ್ದು ವಿಶೇಷ. ಜಿಲ್ಲೆಯಲ್ಲೂ ಹೆಚ್ಚಿನ ದತ್ತಿಗಳನ್ನು ಸಂಗ್ರಹಿಸಲಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಎಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆ ಸಂಸ್ಥಾಪನಾ ಕಾರ್ಯದರ್ಶಿ ಶಿವಾನಂದ ಕೆಲೂರ ಮಾತನಾಡಿ, ವ್ಯಕ್ತಿಯ ಅಂತಃಸತ್ವವೇ ವ್ಯಕ್ತಿತ್ವ. ಮಕ್ಕಳಲ್ಲಿ ಹುದುಗಿರುವ ಅಂತಃಸತ್ವವನ್ನು ಹೊರತೆಗೆದು ಅದಕ್ಕೆ ರೂಪ ಕೊಡುವುದೇ ವ್ಯಕ್ತಿತ್ವ ವಿಕಸನ. ಶಿಕ್ಷಣ ಎಂಬುದು ಕೇವಲ ಬೋಧನೆಯಲ್ಲ. ಮಕ್ಕಳ ಪ್ರತಿಭೆಯನ್ನು ಹೊರಹಾಕುವ ಸಾಧನ. ಹೇಗೆ ಕೋಳಿ ಮೊಟ್ಟೆ ಹಾಕಿ ಹೊರಗಿನಿಂದ ಕಾವು ಕೊಟ್ಟು ಒಳಗಿನಿಂದಲೇ ಮೊಟ್ಟೆಯೊಡೆದು ಮರಿ ಹೊರಬರುವಂತೆ ಮಾಡುವುದೋ ಅದೇ ರೀತಿ ಶಿಕ್ಷಕ ಬಾಹ್ಯವಾಗಿ ಬೋಧಿಸುತ್ತ, ವಿದ್ಯಾರ್ಥಿಗಳ ಅಂತರಾಳದಲ್ಲಿ ಹುದುಗಿರುವ ಪ್ರತಿಭೆಯನ್ನು ಹೊರಹಾಕುವ ಪ್ರಯತ್ನ ಮಾಡುತ್ತಾನೆಂದು ಮಾರ್ಮಿಕವಾಗಿ ನುಡಿದರು.

ಕಾಂಗ್ರೆಸ್ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಮಹಾದೇವಿ ಗೋಕಾಕ, ದತ್ತಿ ದಾನಿ ಹಾಗೂ ಎಐಸಿಸಿ ಸದಸ್ಯೆ ಶ್ರೀದೇವಿ ಉತ್ಲಾಸರ ಮಾತನಾಡಿದರು. ‘ವಿಜಯವಾಣಿ’ ಜಿಲ್ಲಾ ವರದಿಗಾರ ಪರಶುರಾಮ ಭಾಸಗಿ ಕಾರ್ಯಕ್ರಮ ಉದ್ಘಾಟಿಸಿದರು. ಪ್ರೊ.ಯು.ಎನ್. ಕುಂಟೋಜಿ, ಬಿ.ಆರ್. ಬನಸೋಡೆ ಇತರರಿದ್ದರು. ಆಕಾಶವಾಣಿ ಕಲಾವಿದ ಸೋಮಶೇಖರ ಕುರ್ಲೆ ಪ್ರಾರ್ಥಿಸಿದರು. ಪ್ರೊ.ರಾಜೇಂದ್ರಕುಮಾರ ಬಿರಾದಾರ ಸ್ವಾಗತಿಸಿದರು. ರವಿ ಕಿತ್ತೂರ ನಿರೂಪಿಸಿದರು. ಕಸಾಪ ಗೌರವ ಕಾರ್ಯದರ್ಶಿ ಬಸವರಾಜ ಕುಂಬಾರ ವಂದಿಸಿದರು.