ಬಿಎಸ್‌ಎನ್‌ಎಲ್ ನೌಕರರಿಂದ ಉಪವಾಸ ಸತ್ಯಾಗ್ರಹ

<< ನಿವೃತ್ತಿ ವೇತನ ಪರಿಷ್ಕರಣೆಗೆ ಆಗ್ರಹ > ವಿಳಂಬ ನೀತಿಗೆ ವ್ಯಾಪಕ ಆಕ್ರೋಶ >>

ವಿಜಯಪುರ: ನಿವೃತ್ತಿ ವೇತನ ಪರಿಷ್ಕರಣೆಗೆ ಒತ್ತಾಯಿಸಿ ವಿಜಯಪುರ-ಬಾಗಲಕೋಟೆ ಬಿಎಸ್‌ಎನ್‌ಎಲ್ ನಿವೃತ್ತ ನೌಕರರು ಗುರುವಾರ ಉಪವಾಸ ಸತ್ಯಾಗ್ರಹ ನಡೆಸಿದರು.

ನಗರದ ಬಿಎಸ್‌ಎನ್‌ಎಲ್ ಜನರಲ್ ಮ್ಯಾನೇಜರ್ ಕಾರ್ಯಾಲಯದ ಆವರಣದಲ್ಲಿ ನೂರಕ್ಕೂ ಅಧಿಕ ನಿವೃತ್ತ ನೌಕರರು ಸತ್ಯಾಗ್ರಹ ನಡೆಸಿ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಘೋಷಣೆ ಕೂಗಿದರು.

ಹಿರಿಯರಾದ ಎಸ್.ಆರ್. ನಾಯಕ ಮಾತನಾಡಿ, 2007 ರಲ್ಲಿ ವೇತನ ಪರಿಷ್ಕರಣೆ ಸಮಯದಲ್ಲಿ ಪಿಂಚಣಿ ಪರಿಷ್ಕರಣೆ ಆಗಿತ್ತು. ನಂತರದಲ್ಲಿ ಜಾರಿಯಾದ ಏಳನೇ ವೇತನ ಆಯೋಗವು ಬಿಎಸ್‌ಎನ್‌ಎಲ್ ನೌಕರರಿಗೆ ಔದ್ಯೋಗಿಕ ತುಟ್ಟಿ ಭತ್ಯೆ ಸಿಗುವ ಕಾರಣದಿಂದಾಗಿ, ಪಿಂಚಣಿಯನ್ನು ಪರಿಷ್ಕರಿಸಲಿಲ್ಲ. ದೂರ ಸಂಪರ್ಕ ಇಲಾಖೆಯಿಂದ ನಿವೃತ್ತರಾದ ಬಿಎಸ್‌ಎನ್‌ಎಲ್ ನೌಕರರಿಗೆ ಈಗ ಜ.1, 2017 ರಿಂದ ಪಿಂಚಣಿ ಪರಿಷ್ಕರಣೆ ಆಗಬೇಕಿದೆ. ನಿವೃತ್ತ ನೌಕರರ ಪಿಂಚಣಿ ಪರಿಷ್ಕರಣೆಗೂ, ಸೇವೆಯಲ್ಲಿರುವ ಬಿಎಸ್‌ಎನ್‌ಎಲ್ ನೌಕರರ ವೇತನ ಪರಿಷ್ಕರಣೆಗೂ ಯಾವುದೇ ಸಂಬಂಧವಿಲ್ಲ. ಆದರೂ ಈವರೆಗೆ ಪಿಂಚಣಿ ಪರಿಷ್ಕರಣೆ ಮಾಡದೆ ವಿಳಂಬ ಮಾಡುತ್ತಿರುವುದು ಖಂಡನೀಯ ಎಂದರು.

2007 ರಲ್ಲಿ ಅನುಷ್ಠಾನಕ್ಕೆ ಬಂದ ಎರಡನೇ ವೇತನ ಪರಿಷ್ಕರಣೆಯ ಸಂದರ್ಭದಲ್ಲಿ ಪಿಂಚಣಿ ಪರಿಷ್ಕರಣೆಯ ಆದೇಶವು 2011 ರಲ್ಲಿ ನೀಡಲಾಗಿತ್ತು. ಈ ರೀತಿ ವಿಳಂಬ ನೀತಿ ಪಾಲಿಸದೆ ಮೂರನೇ ವೇತನ ಪರಿಷ್ಕರಣೆಯ ಆದೇಶದ ಸಮಯದಲ್ಲೇ ಪಿಂಚಣಿ ಪರಿಷ್ಕರಣೆಯ ಆದೇಶ ಸಹ ನೀಡಬೇಕೆಂದು ಒತ್ತಾಯಿಸಿದರು.

ಹಿರಿಯರಾದ ಕೆ.ಜಿ. ದೇಶಪಾಂಡೆ , ಪ್ರಕಾಶ ಜೀರಂಕಲಗಿ, ಸಿ.ಎಸ್. ಹಿರೇಮಠ, ಕೆ.ಆರ್. ಸಾವಲಸಂಗರವರು, ಎಂ.ಡಿ. ಸೂರ್ಯವಂಶಿ, ಎಸ್.ಎಲ್. ಕುಲಕರ್ಣಿ, ಎಂ.ಜಿ. ಬಿಜ್ಜರಗಿ, ವಿ.ಆರ್. ತೇಲಗಾರ ವಿ.ಡಿ. ನಾಯಕ, ಎಸ್.ಎನ್. ಚಿಕ್ಕಣ್ಣವರ, ಎಸ್.ಎಂ. ಹಗ್ಗದ, ಪಿ.ಐ. ಗಿರಾಣಗಲ್ಲಿ, ಎಸ್.ಆರ್. ಮಕಾನದಾರ ಇತರರಿದ್ದರು.