ಇತಿಹಾಸದ ಪುಟಗಳಲ್ಲಿ ‘ಅನಂತ’ ಅಜರಾಮರ

ಮಾಜಿ ಸಚಿವ ಅಪ್ಪಾಸಾಹೇಬ ಹೇಳಿಕೆ >>

ವಿಜಯಪುರ: ರಾಷ್ಟ್ರ ಮತ್ತು ರಾಜ್ಯ ರಾಜಕಾರಣದ ಇತಿಹಾಸದಲ್ಲಿ ಸಚಿವ ದಿ.ಅನಂತಕುಮಾರ್ ಹೆಸರು ಅಜರಾಮರವಾಗಿ ಉಳಿಯಲಿದೆ ಎಂದು ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಹೇಳಿದರು.

ಇಲ್ಲಿನ ರಾಜರಾಜೇಶ್ವರಿ ಕಲ್ಯಾಣ ಮಂಟಪದಲ್ಲಿ ಸೋಮವಾರ ಸಂಜೆ ಬಿಜೆಪಿ ನಗರ ಹಾಗೂ ಜಿಲ್ಲಾ ಘಟಕದಿಂದ ನಡೆದ ‘ದಿ. ಅನಂತಕುಮಾರ್’ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು.

ಸಚಿವ ಅನಂತಕುಮಾರ್ ಅಗಲಿಕೆಯಿಂದಾಗಿ ರಾಜ್ಯದ ಅಮೂಲ್ಯ ರತ್ನವೊಂದನ್ನು ಕಳೆದುಕೊಂಡಂತಾಗಿದೆ. ಬಾಲ್ಯದಿಂದಲೇ ದೇಶಭಕ್ತಿಯನ್ನು ಮೈಗೂಡಿಸಿಕೊಂಡು ವಿದ್ಯಾರ್ಥಿ ದಿಸೆಯಿಂದಲೇ ಹೋರಾಟ ಪ್ರವೃತ್ತಿ ಬೆಳೆಸಿಕೊಂಡು ರಾಜ್ಯ ಮತ್ತು ರಾಷ್ಟ್ರ ರಾಜಕಾರಣದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಅನಂತಕುಮಾರ್ ಹೆಸರು ಅಜರಾಮರವಾಗಿ ಉಳಿಯಲಿದೆ ಎಂದರು.

ಸೇವಾ ಸಾಧನೆ: 1984ರಲ್ಲಿ ಮೊದಲ ಬಾರಿಗೆ ವಿಜಯಪುರಕ್ಕೆ ಬಂದಾಗ ಅವರ ರಾಜಕೀಯ ಜೀವನ ಆರಂಭಿಕ ಹಂತದಲ್ಲಿತ್ತು. ಅಲ್ಲಿಂದಲೇ ಬೇರು ಮಟ್ಟದಲ್ಲಿ ಪಕ್ಷ ಸಂಘಟಿಸಿ ರಾಜ್ಯದಲ್ಲಿ ಕಮಲ ಅರಳಲು ನೆರವಾದರು. ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಆರು ಬಾರಿ ಸಂಸದರಾಗಿ ಆಯ್ಕೆಯಾಗಿ ಅಟಲ್ ಬಿಹಾರಿ ವಾಜಪೇಯಿ ಅವರ ಕೇಂದ್ರ ಸಂಪುಟದಲ್ಲಿ ವಿಮಾನಯಾನ ಖಾತೆ ಸಚಿವರಾಗಿ ಸೇವೆಸಲ್ಲಿಸಿ ಈಗಿನ ನರೇಂದ್ರ ಮೋದಿ ಅವರ ಸಚಿವ ಸಂಪುಟದಲ್ಲಿ ರಾಸಾಯನಿಕ ಮತ್ತು ರಸಗೊಬ್ಬರ ಖಾತೆಯ ಸಚಿವರಾಗಿ ಕರ್ನಾಟಕ ರಾಜ್ಯಕ್ಕೆ ಜೊತೆ ಜೊತೆಗೆ ಈಡೀ ದೇಶಕ್ಕೆ ತಮ್ಮ ಅನನ್ಯ ಸೇವೆಯನ್ನು ಸಲ್ಲಿಸಿದರೆಂದು ಅವರ ಸೇವಾ ಸಾಧನೆಯನ್ನು ಕೊಂಡಾಡಿದರು.

ಒಡನಾಟ ನೆನೆದ ವಿಜುಗೌಡ: ಮುಖಂಡ ವಿಜುಗೌಡ ಪಾಟೀಲ ಮಾತನಾಡಿ, ಕಳೆದ 25 ವರ್ಷಗಳಿಂದ ಅನಂತಕುಮಾರ ಅವರ ಜೊತೆ ನನ್ನ ಒಡನಾಟ ಇತ್ತು. ಅವರು ವಿಜಯಪುರಕ್ಕೆ ಬಂದಾಗ ಒಮ್ಮೆ ನನ್ನ ಭೇಟಿ ಆಗದೆ ಅಥವಾ ಮಾತನಾಡಿಸದೆ ಹೋಗುತ್ತ ಇರಲಿಲ್ಲ, 2008ರಲ್ಲಿ ಬಬಲೇಶ್ವರ ಕ್ಷೇತ್ರಕ್ಕೆ ಅವರು ಪ್ರಚಾರಕ್ಕೆ ಬಂದಾಗ ನನ್ನ ಜತೆ ಮಾತನಾಡುತ್ತ ನಿಮ್ಮಂಥ ನಾಯಕರು ನಮ್ಮ ಪಕ್ಷದಲ್ಲಿ ಇರಬೇಕು ಯೋಚನೆ ಮಾಡಿ ಎಂದು ಹೇಳಿ ಹೋಗಿದ್ದರು. 2013ರಲ್ಲಿ ಎರಡನೇ ಬಾರಿ ನಾನು ಜೆಡಿಎಸ್‌ನಿಂದ ಸೊತಾಗ ನನ್ನ ಜೊತೆ ಮಾತನಾಡಿ ನಾನು ಹೇಳಿದ ಪ್ರಕಾರ ಯೋಚನೆ ಮಾಡಿ ನಮ್ಮ ಪಕ್ಷಕ್ಕೆ ಸೇರಿಕೊಳ್ಳಬೇಕು ಎಂದು ಆಹ್ವಾನ ಕೊಟ್ಟಿದ್ದರು. ಅವರ ಮಾತಿನಂತೆ ಮತ್ತು ಎಲ್ಲ ಹಿರಿಯ ಮಾರ್ಗದರ್ಶನದಲ್ಲಿ ನಾನು ಬಿಜೆಪಿ ಸೇರ್ಪಡೆಯಾದೆ ಎಂದು ಅನಂತಕುಮಾರ್ ಅವರೊಂದಿಗಿನ ಒಡನಾಟ ಹಂಚಿಕೊಂಡರು.

ಅನಂತಕಮಾರ್ ಅವರ ಜೊತೆಗೆ ಎಬಿವಿಪಿ ಹಾಗೂ ಬಿಜೆಪಿ ಸಂಘಟನೆಗಳಲ್ಲಿ ಕೆಲಸ ಮಾಡಿದ ಹಿರಿಯ ಕಾರ್ಯಕರ್ತರಾದ ಎಂ.ಜಿ. ಮಠಪತಿ, ಸಿದ್ದಲಿಂಗ ಹಂಜಗಿ, ಅಂಬರೀಶ ಪಾಟೀಲ, ರಾಜು ಗಚ್ಚಿನಮಠ, ಸುರೇಶ ಬಿರಾದಾರ ಸೇರಿದಂತೆ ಅನೇಕರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.

ನಗರ ಮಂಡಲ ಅಧ್ಯಕ್ಷ ಶಿವರುದ್ರ ಬಾಗಲಕೋಟ, ಮಲ್ಲಿಕಾರ್ಜುನ ಕುಂಬಾರ, ಡಾ.ಗೋಪಾಲ ಕಾರಜೋಳ, ಗೋಪಾಲ ಘಟಕಾಂಬಳೆ, ಸಂಗರಾಜ ದೇಸಾಯಿ, ವಿವೇಕಾನಂದ ಡಬ್ಬಿ, ಪ್ರಕಾಶ ಅಕ್ಕಲಕೋಟ, ಬಸವರಾಜ ಬಿರಾದಾರ, ಎಚ್.ಆರ್. ಮಾಚ್ಚಪ್ಪನವರ, ಭೀಮಾಶಂಕರ ಹದನೂರ, ಸುರೇಶಗೌಡ ಪಾಟೀಲ (ಸಾಸನೂರ) ಇತರರಿದ್ದರು.