ಹೆಣ ಸಿಂಗರಿಸಿ ವಿಕೃತಿ ಮೆರೆದ ಪತಿ

ವಿಜಯಪುರ: ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಿದ ದೃಶ್ಯಗಳನ್ನು ತವರು ಮನೆಯವರ ಮೊಬೈಲ್‌ಗೆ ರವಾನಿಸಿದ ಪತಿರಾಯ, ಅವರು ಸ್ಥಳಕ್ಕೆ ಬರುವುದರೊಳಗೆ ಪತ್ನಿ ಶವದ ಸುತ್ತ ಮದುವೆ ಫೋಟೊ ಇಟ್ಟು ಸಿಂಗರಿಸಿ ವಿಕೃತಿ ಮೆರೆದಿದ್ದಾನೆ.

ಇಲ್ಲಿನ ಕಾಸಗೇರಿ ಗಲ್ಲಿ ನಿವಾಸಿ ಮಲ್ಲಿಕಾರ್ಜುನ ಪವಾರ ಎಂಬಾತನೇ ಕೊಲೆ ಪಾತಕನಾಗಿದ್ದು, ಪತ್ನಿ ಸೋನಾಬಾಯಿ(28)ಯನ್ನು ಭೀಕರವಾಗಿ ಕೊಲೆ ಮಾಡಿದ್ದಾನೆ. ಸೋಮವಾರ ತಡರಾತ್ರಿ ಈ ಘಟನೆ ನಡೆದಿದ್ದು, ಮಂಗಳವಾರ ನಸುಕಿನ ಜಾವ ಪ್ರಕರಣ ಬಯಲಾಗಿದೆ.

ಘಟನೆ ವಿವರ
ಮುಂಬೈ ಚಿತ್ರೋದ್ಯಮದಲ್ಲಿ ‘ಮೇಕಪ್ ಮ್ಯಾನ್’ ಆಗಿ ಕೆಲಸ ಮಾಡುತ್ತಿರುವ ಮಲ್ಲಿಕಾರ್ಜುನ ಪವಾರ ದಂಪತಿ ಮಧ್ಯೆ ಹಲವು ವರ್ಷಗಳಿಂದ ಬಿರುಕು ಮೂಡಿತ್ತು. ಇಬ್ಬರ ಮಧ್ಯೆ ಆಗಾಗ ಕಲಹ ಉಂಟಾಗುತ್ತಿತ್ತಲ್ಲದೆ, ವಿಚ್ಛೇದನಕ್ಕಾಗಿ ಪತ್ನಿಯನ್ನು ಮಲ್ಲಿಕಾರ್ಜುನ ಪೀಡಿಸುತ್ತಿದ್ದ. ಹಿಂದೊಮ್ಮೆ ಹೊಡೆದು ನೇಣು ಹಾಕುವ ಯತ್ನಕ್ಕೂ ಮುಂದಾಗಿದ್ದ. ಹೀಗೆ ಮೂರು ಬಾರಿ ಈತ ಸೋನಾಬಾಯಿ ಕೊಲೆಗೆ ಯತ್ನಿಸಿದ್ದ.ಈ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲು ಸಹ ಏರಿತ್ತು ಎನ್ನುತ್ತಾರೆ ಆಕೆ ಕುಟುಂಬಸ್ಥರು.

ಮಂಗಳವಾರ ರಾತ್ರಿ ಎಂದಿನಂತೆ ಸೋನಾಬಾಯಿ ಜತೆ ಜಗಳ ಕಾದಿರುವ ಮಲ್ಲಿಕಾರ್ಜುನ, ವಿಚ್ಛೇದನಕ್ಕಾಗಿ ಪೀಡಿಸಿದ್ದಾನೆ. ಅಂತಿಮವಾಗಿ ಆಕೆಗೆ ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಿದ್ದಾನೆ. ಬಳಿಕ ಪತ್ನಿಯ ಸಂಬಂಧಿಕರಿಗೆ ದೂರವಾಣಿ ಕರೆ ಮಾಡಿ ಕೊಲೆ ವಿಷಯ ತಿಳಿಸಿದ್ದಾನೆ. ಈತನ ಮಾತನ್ನು ನಂಬದಾದಾಗ ವಿಡಿಯೋ ಕಾಲ್ ಮೂಲಕ ಚಿತ್ರ ವಿವರ ನೀಡಿದ್ದಾನೆ. ಜತೆಗೆ ಫೋಟೊ ಸಹ ರವಾನಿಸಿದ್ದಾನೆ. ಇದರಿಂದ ಗಾಬರಿಗೊಂಡ ಸೋನಾಬಾಯಿ ತವರು ಮನೆಯವರು ವಿಜಯಪುರಕ್ಕೆ ದೌಡಾಯಿಸಿದ್ದಾರೆ.

ಹೆಣ ಸಿಂಗರಿಸಿ ವಿಕೃತಿ
ಕುಟುಂಬಸ್ಥರು ಬರುವುದರೊಳಗೆ ಹೆಣದ ಸುತ್ತ ಕೌದಿ ಹೊದಿಸಿದ್ದ ಮಲ್ಲಿಕಾರ್ಜುನ ಆಕೆ ಮೇಲೆ ಹೂವಿನ ಹಾರ ಹಾಕಿದ್ದನು. ಜತೆಗೆ ಆಕೆ ಮತ್ತು ತನ್ನ ಮದುವೆ ಫೋಟೊಗಳನ್ನು ಸುತ್ತಲೂ ಇರಿಸಿ ಅಲಂಕಾರ ಮಾಡಿದ್ದನು. ಜತೆಗೆ ಕೃತ್ಯಕ್ಕೆ ಬಳಸಿದ ಸುತ್ತಿಗೆ ಸಹ ಪಕ್ಕದಲ್ಲೇ ಇರಿಸಿದ್ದನು. ನಂತರ ಸೋನಾಬಾಯಿ ತವರು ಮನೆಯವರು ಠಾಣೆಗೆ ವಿಷಯ ತಿಳಿಸಿದ್ದು, ಪೊಲೀಸರು ಮಲ್ಲಿಕಾರ್ಜುನನ್ನು ವಶಕ್ಕೆ ಪಡೆದಿದ್ದಾರೆ. ಸ್ಥಳ ಪರಿಶೀಲನೆ ನಡೆಸಿ ಶವಪರೀಕ್ಷೆ ನಂತರ ಕಳೇಬರ ಹಸ್ತಾಂತರಿಸಲಾಗಿದೆ. ಈ ಬಗ್ಗೆ ಗಾಂಧಿ ಚೌಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾತ್ರಿ ಫೋನ್ ಮಾಡಿ ನಿಮ್ಮಕ್ಕನನ್ನು ಕೊಲೆ ಮಾಡಿದ್ದೇನೆಂದು ಮಲ್ಲಿಕಾರ್ಜುನ ಹೇಳಿದ. ನಾನು ನಂಬಲಿಲ್ಲ. ಈ ಹಿಂದೆ ಅನೇಕ ಬಾರಿ ಕೊಲೆ ಮಾಡುವುದಾಗಿ ಹೇಳಿದ್ದನಲ್ಲದೆ, ಕೊಲೆಗೆ ಯತ್ನ ನಡೆಸಿದ್ದ. ಜಗಳಾಡಿಕೊಂಡಿರಬಹುದೆಂದು ತಿಳಿದು ಏನೂ ಮಾಡಬೇಡ, ನಾ ಬರ್ತಿನಿ ತಡಿ ಎಂದಿದ್ದೆ. ಅಷ್ಟರಲ್ಲಿ ವಿಡಿಯೋ ಕಾಲ್ ಮಾಡಿ ಕೊಲೆಯಾಗಿದ್ದನ್ನು ಖಚಿತ ಮಾಡಿದ. ಇದರಿಂದ ಗಾಬರಿಗೊಂಡು ಮನೆಯವರಿಗೆಲ್ಲ ಹೇಳಿದೆ.
ಸಂತೋಷ, ಸೋನಾಬಾಯಿ ಸಹೋದರ