ನಾಮನಿರ್ದೇಶಿತ ಸ್ಥಾನ ಖಾಲಿ ಖಾಲಿ!

ಪರಶುರಾಮ ಭಾಸಗಿ

ವಿಜಯಪುರ:ದೋಸ್ತಿ ಸರ್ಕಾರ ರಚನೆಯಾಗಿ ಆರು ತಿಂಗಳಾದರೂ ವಿಶ್ವ ವಿದ್ಯಾಲಯಗಳ ಸಿಂಡಿಕೇಟ್ ಸದಸ್ಯರ ನಾಮನಿರ್ದೇಶನಕ್ಕೆ ಮುತುವರ್ಜಿ ವಹಿಸದ ಹಿನ್ನೆಲೆ ವಿವಿಗಳ ಆಡಳಿತ ಮಂಡಳಿ ಅಪೂರ್ಣವೆನಿಸಿದೆ. ಮಾತ್ರವಲ್ಲ, ಸಿಂಡಿಕೇಟ್ ಸದಸ್ಯರ ಅನುಪಸ್ಥಿತಿಯಲ್ಲೇ ಆಡಳಿತ ಯಂತ್ರ ತೆವಳುತ್ತ ಸಾಗಿದೆ.

ಈ ಹಿಂದಿನ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಅಂತಿಮ ಅವಧಿಯಲ್ಲಿ ಸಿಂಡಿಕೇಟ್ ಸದಸ್ಯರನ್ನು ನಾಮ ನಿರ್ದೇಶನ ಮಾಡಲಾಗಿತ್ತಾದರೂ ಹೊಸ ಸರ್ಕಾರ ಅದಕ್ಕೆ ಕೊಕ್ಕೆ ಹಾಕಿತ್ತು. ಹೊಸಬರ ನಾಮ ನಿರ್ದೇಶನಕ್ಕೆ ವಿವಿಗಳು ಉನ್ನತ ಶಿಕ್ಷಣ ಸಚಿವರ ಗಮನ ಸೆಳದರೂ ಈವರೆಗೂ ನಾಮನಿರ್ದೇಶನ ಮಾಡಲಾಗಿಲ್ಲ ಎಂಬ ದೂರಿದೆ. ಇನ್ನೊಂದೆಡೆ ವಿಳಂಬಕ್ಕೆ ವಿವಿಗಳ ಹೊಸ ಕಾಯ್ದೆಯೂ ಕಾರಣ ಎನ್ನಲಾಗುತ್ತಿದೆ.

ಸಿಂಡಿಕೇಟ್ ರಚನೆ ವಿಧಾನ
ರಾಜ್ಯದಲ್ಲಿ 39 ವಿವಿಧ ವಿಶ್ವ ವಿದ್ಯಾಲಯಗಳಿವೆ. ಪ್ರತಿ ವಿವಿ ಸಿಂಡಿಕೇಟ್‌ಗೆ ಕುಲಪತಿ ಅಧ್ಯಕ್ಷರಿರುತ್ತಾರೆ. ರಾಜ್ಯಪಾಲರಿಂದ ಇಬ್ಬರು ಹಾಗೂ ಸರ್ಕಾರದಿಂದ 6 ಸದಸ್ಯರು ನಾಮನಿರ್ದೇಶನಗೊಳ್ಳಲಿದ್ದಾರೆ. ಇನ್ನುಳಿದಂತೆ ಕುಲಸಚಿವರು, ಮೌಲ್ಯಮಾಪನ ಕುಲಸಚಿವರು, ಹಣಕಾಸು ಅಧಿಕಾರಿ, ವಿವಿಧ ನಿಕಾಯಗಳ ವಿದ್ಯಾಧಿಕಾರಿಗಳು, ಉನ್ನತ ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಹಿರಿಯ ಪ್ರಾಂಶುಪಾಲರು ಹೀಗೆ 23 ಸದಸ್ಯರ ಆಡಳಿತ ಮಂಡಳಿ ಇರುತ್ತದೆ. ನಾಮ ನಿರ್ದೇಶಿತ ಸ್ಥಾನಗಳಿಗೆ ಅಲ್ಪಸಂಖ್ಯಾತ, ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ-ಪಂಗಡ ಹಾಗೂ ಮಹಿಳೆ ಮತ್ತು ಸಾಮಾನ್ಯ ಕೋಟಾದಡಿ ಸದಸ್ಯರನ್ನು ನೇಮಿಸಲಾಗುತ್ತದೆ. ಇವರ ಅಧಿಕಾರವಧಿ 3 ವರ್ಷಗಳಿಗಿದ್ದರೆ ವಿವಿಯ ಶಾಶ್ವತ ಸ್ಥಾನಗಳಿಗೆ ಆಯಾ ಪದನಿಮಿತ್ತರೇ ಸದಸ್ಯರಾಗಿರುತ್ತಾರೆ.

ಸುಗಮ ಆಡಳಿತಕ್ಕೆ ನಾಮನಿರ್ದೇಶನ ಅವಶ್ಯ
ವಿವಿಯ ಯಾವುದೇ ಆಡಳಿತಾತ್ಮಕ ಅನುಮೋದನೆಗೆ ಸಿಂಡಿಕೇಟ್ ಸದಸ್ಯರ ಒಪ್ಪಿಗೆ ಬೇಕೇ ಬೇಕು. ಸದ್ಯ ನಾಮ ನಿರ್ದೇಶಿತ ಸ್ಥಾನಗಳ ಹೊರತಾಗಿಯೂ ಕೋರಂ ಭರ್ತಿಯಾಗುತ್ತಿರುವ ಹಿನ್ನೆಲೆ ಅಭಿವೃದ್ಧಿಗೇನೂ ಹಿನ್ನಡೆಯಿಲ್ಲ. ಆದರೆ, ಆಡಳಿತ ಯಂತ್ರ ಸುಗಮವಾಗಿ ಸಾಗಲು ಬೇಕಾದ ನಾಮನಿರ್ದೇಶಿತರೇ ಇಲ್ಲದಿರುವುದು ಸಿಂಡಿಕೇಟ್ ಮಂಡಳಿ ಅರ್ಧಕ್ಕೆ ನಿಂತ ‘ಬಾರಾಕಮಾನ್’ ನಂತಾಗಿದೆ. ಸರ್ಕಾರ ಮತ್ತು ವಿವಿ ಆಡಳಿತ ವ್ಯವಸ್ಥೆಯ ಮಧ್ಯಸ್ಥಗಾರರಂತೆ ನಾಮನಿರ್ದೇಶಿತರು ಕಾರ್ಯ ನಿರ್ವಹಿಸಲಿದ್ದಾರೆ. ಸರ್ಕಾರದಿಂದ ಬರುವ ಅನುದಾನದ ಸದ್ಬಳಕೆ ಹಾಗೂ ವಿವಿಗಳಿಗೆ ಬೇಕಾದ ಅನುದಾನ ಒದಗಿಸುವಲ್ಲಿ ಇವರ ಪಾತ್ರ ಪ್ರಮುಖವಾದದ್ದು. ವಿವಿ ಆಡಳಿತ ವ್ಯವಸ್ಥೆ ಪಾರದರ್ಶಕವಾಗಿರುವ ನಿಟ್ಟಿನಲ್ಲಿ ಇವರು ಹೆಚ್ಚಿನ ನಿಗಾ ವಹಿಸುವರು. ಕೂಡಲೇ ನಾಮನಿರ್ದೇಶಿತ ಸ್ಥಾನಗಳನ್ನು ಭರ್ತಿ ಮಾಡಬೇಕೆಂಬುದು ಶಿಕ್ಷಣ ತಜ್ಞರ ಅಭಿಪ್ರಾಯ.

ಯಾವುದೇ ವಿವಿ ಸಿಂಡಿಕೇಟ್‌ಗೆ ಸದಸ್ಯರ ನಾಮನಿರ್ದೇಶನವಾಗಿಲ್ಲ. ಪ್ರಕ್ರಿಯೆ ಪ್ರಗತಿಯಲ್ಲಿದೆ. ಈಗಾಗಲೇ ಈ ಬಗ್ಗೆ ಸಾಕಷ್ಟು ಚರ್ಚೆಯಾಗಿದ್ದು, ಶೀಘ್ರದಲ್ಲಿ ಎಲ್ಲ ವಿವಿಗಳಿಗೆ ಸದಸ್ಯರು ನಾಮನಿರ್ದೇಶನಗೊಳ್ಳುವರು.
ಜಿ.ಟಿ. ದೇವೇಗೌಡ, ಉನ್ನತ ಶಿಕ್ಷಣ ಸಚಿವ

ಮಾರ್ಚ್ 2018ಕ್ಕೆ ವಿಶ್ವವಿದ್ಯಾಲಯಗಳ ಹೊಸ ಕಾಯ್ದೆ ಜಾರಿಯಾಗಿದೆ. ನೂತನ ಕಾಯ್ದೆಗೆ ಇನ್ನೂ ರಾಜ್ಯಪಾಲರ ಅಂಕಿತ ಬೀಳಬೇಕಿದೆ. ನಾಮನಿರ್ದೇಶನ ಪ್ರಕ್ರಿಯೆ ವಿಳಂಬಕ್ಕೆ ಇದೂ ಒಂದು ಕಾರಣ. ಸದ್ಯದ ಸರ್ಕಾರ ನಾಮನಿರ್ದೇಶನ ಮಾಡಿದ ತಕ್ಷಣವೇ ಹೊಸ ಕಾಯ್ದೆಗೆ ಅಂಕಿತ ಬಿದ್ದಿದ್ದೆ ಆದಲ್ಲಿ ಮತ್ತೊಮ್ಮೆ ನಾಮ ನಿರ್ದೇಶನ ಪ್ರಕ್ರಿಯೆ ನಡೆಸಬೇಕಾಗುತ್ತದೆ. ಮೊದಲು ಹೊಸ ಕಾಯ್ದೆಗೆ ಅನುಮೋದನೆ ಸಿಗಬೇಕು.
ಅರುಣ ಶಹಾಪುರ, ವಿಧಾನ ಪರಿಷತ್ ಸದಸ್ಯ

ನಾಮನಿರ್ದೇಶನ ಪ್ರಕ್ರಿಯೆಗಾಗಿ ಈಗಾಗಲೇ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಸಾಕಷ್ಟು ಸಭೆಗಳಲ್ಲೂ ಚರ್ಚೆಯಾಗಿದೆ. ಶೀಘ್ರದಲ್ಲಿ ಅಕ್ಕಮಹಾದೇವಿ ಮಹಿಳಾ ವಿವಿಗೂ ನಾಮ ನಿರ್ದೇಶನ ಪ್ರಕ್ರಿಯೆ ನಡೆಯುವ ವಿಶ್ವಾಸವಿದೆ.
ಪ್ರೊ. ಆರ್. ಸುನಂದಮ್ಮ, ಕುಲಸಚಿವರು (ಆಡಳಿತ) ಅಕ್ಕಮಹಾದೇವಿ ವಿವಿ ವಿಜಯಪುರ