ಮತ್ತೆ ಬಂತು ಕೆಎಸ್‌ಟಿಡಿಸಿ ಬಸ್

ವಿಜಯಪುರ: ಪ್ರಚಾರದ ಕೊರತೆಯೋ? ಪ್ರವಾಸಿಗರ ಉದಾಸೀನವೋ? ಅಧಿಕಾರಿಗಳ ನಿರ್ಲಕ್ಷೃದಿಂದಾಗಿಯೋ? ಕಾರ್ಯಾಚರಣೆಗೊಳ್ಳದೆ ರಾಜಧಾನಿಗೆ ವಾಪಸ್ ಆಗಿದ್ದ ಕೆಎಸ್‌ಟಿಡಿಸಿ ಬಸ್ ಮತ್ತೆ ಆಗಮಿಸಿದೆ !

ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ಪ್ರಾಧಿಕಾರದಿಂದ ಪ್ರವಾಸಿಗರ ಅನುಕೂಲಕ್ಕಾಗಿ ರಿಯಾಯಿತಿ ದರದಲ್ಲಿ ಬಸ್ ಸೌಲಭ್ಯ ಕಲ್ಪಿಸಲಾಗಿದೆ. ರಾಜ್ಯದ ಎಲ್ಲ ಪ್ರವಾಸಿ ಕೇಂದ್ರಗಳಿಗೆ ಬಸ್ ಸೌಲಭ್ಯ ಕಲ್ಪಿಸಲಾಗಿದ್ದು ಆ ಪೈಕಿ ಜಿಲ್ಲೆಗೂ ಒದಗಿಸಲಾಗಿತ್ತು. ಈ ಹಿಂದೆ ಜಿಲ್ಲೆಗೆ ಆಗಮಿಸಿದ್ದ ದೊಡ್ಡ ಬಸ್ ಕೆಲವೇ ದಿನಗಳಲ್ಲಿ ವಾಪಸ್ ಆಗಿತ್ತು. ಬಳಿಕ ಮಿನಿ ಬಸ್ ನೀಡಲಾಗಿತ್ತು. ತದನಂತರ ಬೇಡಿಕೆ ಬಾರದ ಹಿನ್ನೆಲೆ ಅದೂ ವಾಪಸ್ ಆಗಿತ್ತು. ಇದೀಗ ಮತ್ತೆ ಐತಿಹಾಸಿಕ ನಗರಿಗೆ ಆಗಮಿಸಿದ್ದು ರಸ್ತೆಗಿಳಿಯಲು ಸಿದ್ದವಾಗಿದೆ.

ಫೆ. 1 ರಂದೇ ಮಿನಿ ಬಸ್ ಜಿಲ್ಲೆಗೆ ಆಗಮಿಸಿದೆ. ಪ್ರವಾಸೋದ್ಯಮ ಅಭಿವೃದ್ಧಿಗಾಗಿ ರಾಜ್ಯ ಸಮ್ಮಿಶ್ರ ಸರ್ಕಾರ ಬಜೆಟ್‌ನಲ್ಲಿ ಪ್ರವಾಸಿ ವ್ಯಾಖ್ಯಾನ ಕೇಂದ್ರ ನಿರ್ಮಾಣಕ್ಕೆ ಕೋಟಿ ರೂ.ಮೀಸಲಿಡುತ್ತಿದ್ದಂತೆ ಇಲಾಖೆಗೆ ಮತ್ತಷ್ಟು ಬಲ ಬಂದಿದೆ. ಇಲಾಖೆ ಅಧಿಕಾರಿಗಳು ಬಸ್ ಸೌಲಭ್ಯದ ಕುರಿತು ವ್ಯಾಪಕ ಪ್ರಚಾರ ಕೈಗೊಳ್ಳುತ್ತಿದ್ದಾರೆ. ಫೆ. 13ಕ್ಕೆ ಕುಮಟಗಿಯ ಬೇಸಿಗೆ ಅರಮನೆಗೆ ಹೋಗಲು ಬಸ್ ಬುಕ್ ಆಗಿದೆ. ಬರುವ ದಿನಗಳಲ್ಲಿ ಹೆಚ್ಚಿನ ಬೇಡಿಕೆ ಬರುವ ನಿರೀಕ್ಷೆಯಲ್ಲಿ ಇಲಾಖೆ ಅಧಿಕಾರಿಗಳಿದ್ದಾರೆ.

ಜಿಲ್ಲೆಯ ಎಲ್ಲ ಹೋಟೆಲ್‌ಗಳಲ್ಲಿ ಬಸ್ ಮಾಹಿತಿ ನೀಡಲಾಗಿದೆ. 18 ಸೀಟ್‌ಗಳ ಸೌಲಭ್ಯವಿದ್ದು ಒಬ್ಬ ಪ್ರವಾಸಿ ಮಾರ್ಗದರ್ಶಿ ಇರಲಿದ್ದಾನೆ. ಕಿಮೀ 20 ರೂ.ಗಳಂತೆ ದರ ನಿಗದಿಗೊಳಿಸಲಾಗಿದೆ. ಮಾರ್ಚ್‌ನಲ್ಲಿ ಪರೀಕ್ಷೆ ಮುಗಿದು ಶಾಲೆಗಳಿಗೆ ರಜೆ ಇರುವ ಕಾರಣ ಹೆಚ್ಚಿನ ಬೇಡಿಕೆ ಬರುವ ಸಾಧ್ಯತೆ ಇದೆ.
ರಮೇಶಕುಮಾರ, ಕೆಎಸ್‌ಟಿಡಿಸಿ ಮ್ಯಾನೇಜರ್