ಬರ ಪರಿಸ್ಥಿತಿ ಎದುರಿಸಲು ಸನ್ನದ್ಧರಾಗಿ

ವಿಜಯಪುರ: ಬರ ಪರಿಸ್ಥಿತಿ ಎದುರಿಸಲು ಯುದ್ಧೋಪಾದಿಯಲ್ಲಿ ಕ್ರಮಗಳನ್ನು ಕೈಗೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಸೂಚನೆ ನೀಡಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಭಾನುವಾರ ಜರುಗಿದ ಬರ ಪರಿಸ್ಥಿತಿ ನಿರ್ವಹಣೆ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯ ಆರು ತಾಲೂಕುಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿವೆ. ಆಯಾ ತಾಲೂಕುಗಳಲ್ಲಿ ಅವಶ್ಯಕತೆಗನುಸಾರ ಹೆಚ್ಚಿನ ಟ್ಯಾಂಕರ್ ಮೂಲಕ ನೀರು ಪೂರೈಸಬೇಕು ಎಂದು ತಿಳಿಸಿದರು.

ಅಧಿಕಾರಿಗಳು ಮಾನವೀಯ ದೃಷ್ಟಿಯಿಂದ ಕರ್ತವ್ಯ ನಿರ್ವಹಿಸಿ ಭೀಕರ ಪರಿಸ್ಥಿತಿ ಎದುರಿಸುತ್ತಿರುವ ಗ್ರಾಮಗಳಿಗೆ ಹೆಚ್ಚಿನ ಟ್ಯಾಂಕರ್ ಮೂಲಕ ನೀರು ಪೂರೈಸಿ ಪ್ರತಿ ಟ್ಯಾಂಕರ್‌ಗೂ ಕಡ್ಡಾಯವಾಗಿ ಜಿಪಿಎಸ್ ಅಳವಡಿಸಬೇಕು. ನೀರು ಪೂರೈಸಿದ ಮಾಲೀಕರಿಗೆ 15 ರಿಂದ 20 ದಿನಗಳೊಳಗೆ ಹಣ ಪಾವತಿಸಬೇಕು. ಸರ್ಕಾರದಲ್ಲಿ ಹಣದ ಕೊರತೆ ಇಲ್ಲ.ಆದ್ದರಿಂದ ಜನ-ಜಾನುವಾರುಗಳಿಗೆ ಅಗತ್ಯ ಮೂಲ ಸೌಲಭ್ಯ ಒದಗಿಸಬೇಕು ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಎಂ.ಸಿ.ಮನಗೂಳಿ, ಜಿಲ್ಲಾಧಿಕಾರಿ ಎಂ.ಕನಗವಲ್ಲಿ, ಜಿಪಂ ಸಿಇಒ ವಿಕಾಸ ಸುರಳಕರ, ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಪ್ರಸನ್ನ ಸೇರಿದಂತೆ ಜಿಲ್ಲೆಯ ಎಲ್ಲ ತಹಸೀಲ್ದಾರರು, ಉಪ ವಿಭಾಗಾಧಿಕಾರಿಗಳು, ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು. ಸಭೆಗೂ ಮುನ್ನ ಸಚಿವ ಆರ್.ವಿ.ದೇಶಪಾಂಡೆ ಅವರು ನಾಗಠಾಣ ಕೆರೆ ಹೂಳೆತ್ತುವ ಕಾಮಗಾರಿ, ಗುಣಕಿ, ತಿಡಗುಂದಿ ಇನ್ನಿತರ ಕಡೆಗಳಲ್ಲಿ ಬರ ಪರಿಸ್ಥಿತಿ ಕುರಿತು ವೀಕ್ಷಣೆ ಮಾಡಿದರು.

ಗುಳೆ ತಪ್ಪಿಸಲು ಕ್ರಮ
ಜಿಲ್ಲೆಯಲ್ಲಿ ಹೆಚ್ಚಾಗಿ ಗುಳೆ ಹೋಗುವುದನ್ನು ತಪ್ಪಿಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಸಚಿವ ಆರ್.ವಿ.ದೇಶಪಾಂಡೆ ಹೇಳಿದರು.

ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಹೆಚ್ಚೆಚ್ಚು ಮಾನವ ದಿನಗಳನ್ನು ಸೃಷ್ಟಿಸಿ, ಅವಶ್ಯಕ ಕ್ರಮಗಳನ್ನು ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನರೇಗಾ ಯೋಜನೆಯಡಿ ಜಿಲ್ಲೆಯಲ್ಲಿ 6.5 ಲಕ್ಷ ಮಾನವ ದಿನಗಳನ್ನು ಸೃಜಿಸುವ ಗುರಿ ಹೊಂದಲಾಗಿದ್ದು, ಅದನ್ನು 7.18 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಜಿಲ್ಲೆಯಲ್ಲಿ ತೀವ್ರ ಬರ ಇರುವ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳು ನೀರಿನ ಅಭಾವ ಎದುರಿಸುತ್ತಿರುವ ಗ್ರಾಮಗಳಿಗೆ ಭೇಟಿ ನೀಡಬೇಕು. ಬರ ಪರಿಹಾರ ಕಾರ್ಯದಲ್ಲಿ ಯಾವುದೇ ರೀತಿಯ ನಿರ್ಲಕ್ಷ್ಯ ತೋರಬಾರದು. ತುರ್ತು ಸಂದರ್ಭ ಹೊರತುಪಡಿಸಿ ರಜೆಗೆ ತೆರಳದಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಹೇಳಿದರು.

ಲಿಂಬೆ ಬೆಳೆಗಾರರಿಗೆ ಸಹಾಯಹಸ್ತ
ಜಿಲ್ಲೆಯಲ್ಲಿ ಲಿಂಬೆ ಬೆಳೆಗಾರರು ತೀವ್ರ ನಷ್ಟನ್ನು ಅನುಭವಿಸಿದ್ದು, ಎನ್‌ಡಿಆರ್‌ಎ್ ಮಾರ್ಗಸೂಚಿಯನ್ವಯ ಸಹಾಯಧನ ನೀಡಲು ಪ್ರಸ್ತಾವನೆ ಸಲ್ಲಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಲಾಗಿದೆ. ರೈತರಿಗೆ ನ್ಯಾಯಯುತ ಸಹಾಯ ನೀಡಲು ಪ್ರಯತ್ನಿಸಲಾಗುವುದು. ಅದರಂತೆ ಈ ಹಿಂದೆ ಮಹಾರಾಷ್ಟ್ರದಲ್ಲಿ ಲಿಂಬೆ ಬೆಳೆಗಾರರಿಗೆ ನೀಡಲಾದ ಪ್ಯಾಕೇಜ್ ಮಾದರಿ ಪರಿಹಾರ ಕ್ರಮವನ್ನು ಇಲ್ಲಿಯೂ ಜಾರಿಗೊಳಿಸುವ ಪ್ರಯತ್ನ ಮಾಡಲಾಗುವುದೆಂದು ಹೇಳಿದರು.

Leave a Reply

Your email address will not be published. Required fields are marked *