ಪೌಷ್ಟಿಕ ಆಹಾರ ಸೇವಿಸಿ

ವಿಜಯಪುರ: ಪ್ರತಿಯೊಬ್ಬರೂ ಆರೋಗ್ಯವಂತರಾಗಿರಲು ಹಣ್ಣು, ತರಕಾರಿ ಸೇರಿದಂತೆ ಪೌಷ್ಟಿಕ ಆಹಾರ ಸೇವಿಸಬೇಕು ಎಂದು ಶಿವಣಗಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಜಯಶ್ರೀ ಆರ್. ದೇವಗಿರಿಯವರ ಹೇಳಿದರು.

ತಾಲೂಕಿನ ಹಡಗಲಿ ತಾಂಡಾ ನಂಬರ್ 1 ರಲ್ಲಿ ಸೋಮವಾರ ಹಮ್ಮಿಕೊಂಡಿದ್ದ ‘ಪೌಷ್ಟಿಕ ಆಹಾರದ ಅರಿವು’ ಕಾರ್ಯಕ್ರಮದಲ್ಲಿ ಜ್ಯೋತಿ ಬೆಳಗಿಸಿ ಮಾತನಾಡಿ, ನಿತ್ಯ ಸಿರಿಧಾನ್ಯ ಹಾಗೂ ಹಾಲು ಸೇವಿಸಿದರೆ ದೈಹಿಕವಾಗಿ ಸದೃಢರಾಗಿರಬಹುದು ಎಂದು ಹೇಳಿದರು.

ಆರೋಗ್ಯ ಸಹಾಯಕಿ ಕೆ.ಬಿ. ಪಾಟೀಲ ಮಾತನಾಡಿ, ಪಾಲಕರು ತಮ್ಮ ಮಕ್ಕಳಿಗೆ ಕಾಲ ಕಾಲಕ್ಕೆ ವೈದ್ಯರು ಸೂಚಿಸುವ ಅಗತ್ಯ ಚುಚ್ಚುಮದ್ದುಗಳನ್ನು ಹಾಕಿಸಿ ವಿವಿಧ ಕಾಯಿಲೆಗಳಿಂದ ರಕ್ಷಿಸಬೇಕು ಎಂದು ಸಲಹೆ ನೀಡಿದರು.

ತಾಲೂಕು ಆಶಾ ಕಾರ್ಯಕರ್ತೆ ಜಯಶ್ರೀ ಪೇಟಿಗೌಡರ, ಆರೋಗ್ಯ ಸಹಾಯಕರಾದ ಶಂಕ್ರಯ್ಯ ಮೇಲಿನಮಠ, ಧರೆಪ್ಪ ಬೊಮ್ಮನಳ್ಳಿ, ತಬಸುಮಾ ಕೋಟ್ಯಾಳ, ರಾಮನಗೌಡ ಪಾಟೀಲ ಹಾಗೂ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು, ಗರ್ಭಿಣಿಯರು, ಸಾರ್ವಜನಿಕರು ಇದ್ದರು.